ADVERTISEMENT

ಹೊಸಕೇರಾ | ಕುಸಿಯದ ಅಂತರ್ಜಲ ಮಟ್ಟ; ರೈತರ ಮೊಗದಲ್ಲಿ ಮಂದಹಾಸ

ಟಿ.ನಾಗೇಂದ್ರ
Published 24 ಫೆಬ್ರುವರಿ 2024, 5:41 IST
Last Updated 24 ಫೆಬ್ರುವರಿ 2024, 5:41 IST
ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು   

ಶಹಾಪುರ: ತಾಲ್ಲೂಕಿನಲ್ಲಿ ಹೊಸಕೇರಾ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಕೆರೆಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದ್ದರಿಂದ ಮಳೆಯ ಕೊರತೆ ನಡುವೆ ನೀರು ಸಂಗ್ರಹದಿಂದ ಸುತ್ತಮುತ್ತಲಿನ ಪ್ರದೇಶದ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಕುಸಿತವಾಗದ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದಲ್ಲಿ ₹ 1 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಹೊಸಕೇರಾ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಮೂರು ವರ್ಷದ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 22 ಎಕರೆ ವಿಸ್ತಿರ್ಣದ ಕೆರೆಯ ಪ್ರದೇಶದಲ್ಲಿ ನೀರು ನಿಲುಗಡೆಗಾಗಿ 9 ಅಡಿಯಷ್ಟು ಆಳವಾಗಿ ಕೆರೆಯನ್ನು ಅಗೆದು ಶಹಾಪುರ ಶಾಖಾ ಕಾಲುವೆ ಮೂಲಕ (ಎಸ್‌ಬಿಸಿ) ಕೆರೆಗೆ ನೀರು ತುಂಬಿಸಲಾಗುತ್ತಿದೆ. ಮಳೆಯ ಕೊರತೆ ಕಾಣಿಸಿಕೊಂಡರೂ ಮುಂಗಾರು ಹಂಗಾಮಿನಲ್ಲಿ ಕಾಲುವೆ ನೀರು ಬಂದಾಗ ಕೆರೆಗೆ ನೀರು ತುಂಬಿಸಲಾಯಿತು. ಈಗ ನೀರಿನ ಸಂಗ್ರಹವಾಗಿದ್ದದರಿಂದ ಅಂತರ್ಜಲಮಟ್ಟ ಕುಸಿತವಾಗಿಲ್ಲ. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೊಳವೆಬಾವಿಯಲ್ಲಿ ನೀರಿನ ಕೊರೆತೆಯಾಗಿಲ್ಲ ಎನ್ನುತ್ತಾರೆ ಹೊಸಕೇರಾ ಗ್ರಾಪಂ ಪಿಡಿಒ ವೆಂಕಣ್ಣ ದೇವಾಪುರ.

ಪ್ರಸಕ್ತ ಬಾರಿ ತೀವ್ರ ಬರಗಾಲವನ್ನು ನಾವು ಎದುರಿಸುತ್ತಿದ್ದೇವೆ. ಕೆರೆಯಲ್ಲಿ ಕಾಲುವೆ ಮೂಲಕ ನೀರು ಸಂಗ್ರಹಗೊಂಡಿದ್ದರಿಂದ ನಮಗೆ ಹೊಸ ಜೀವ ಬಂದಂತೆ ಆಗಿದೆ. ಕೆರೆಯಲ್ಲಿ ನೀರು ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿಲ್ಲ. ಜಾನುವಾರುಗಳಿಗೂ ತೊಂದರೆಯಾಗಿಲ್ಲ. ಕೆರೆಯಲ್ಲಿ ನೀರು ಸಂಗ್ರಹದಿಂದ ಎಷ್ಟು ಅನುಕೂಲವಾಗುತ್ತದೆ ಎಂಬುವುದು ನಮ್ಮೂರಿನ ಕೆರೆಯೇ ಸಾಕ್ಷಿಯಾಗಿದೆ ಎನ್ನುತ್ತಾರೆ ಗ್ರಾಮದ ನಿವಾಸಿ ದೇವಿಂದ್ರಪ್ಪಗೌಡ.

ADVERTISEMENT

ಇನ್ನೂ ಕೆರೆಯ ಸುತ್ತಮುತ್ತಲು ಬೇಲಿ ತಂತಿ ಹಾಕಬೇಕು. ಕೆರೆ ದಂಡೆಯ ಪ್ರದೇಶದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಹಸಿರೀಕರಣಗೊಳಿಸಲು ಸಾಧ್ಯ ಎನ್ನುತ್ತಾರೆ ಅವರು.

ಕೆರೆಯ ಐತಿಹಾಸಿಕ ಕೊಂಡಿ: ಹೊಸಕೇರಾ ಕೆರೆಗೆ ತನ್ನದೆ ಆದ ಐತಿಹಾಸಿಕ ಕೊಂಡಿಯನ್ನು ತಳಕು ಹಾಕಿಕೊಂಡಿದೆ. ಸುರಪುರ ಸಂಸ್ಥಾನದ ರಾಜಾ ದೇವಿಂದ್ರ ವೆಂಕಟ ನಾಯಕ (1774-1801) ಅವರ ಅವಧಿಯಲ್ಲಿ ಹೊಸಕೇರಿಗೆ ಹೊಂದಿಕೊಂಡು ಬೇಟೆ ಅರಮನೆಯಲ್ಲಿ ನಿರ್ಮಿಸಿದ್ದರು. ಕೆರೆಗೆ ನೀರು ಕುಡಿಯಲು ಪ್ರಾಣಿಗಳು ಬಂದಾಗ ರಾಜರು ಅರಮನೆಯಲ್ಲಿ ಕುಳಿತುಕೊಂಡು ಬೇಟೆಯಾಡುತ್ತಿದ್ದರು. ಇಂದಿಗೂ ಬೇಟೆ ಅರಮನೆಯನ್ನು ಕಾಣುತ್ತೇವೆ. ಸೂಕ್ತ ಸಂರಕ್ಷಣೆ ಮಾಡಬೇಕಾಗಿದೆ ಎನ್ನುತ್ತಾರೆ ಸುರಪುರ ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ.

₹ 1 ಕೋಟಿ ವೆಚ್ಚದಲ್ಲಿ ಮೂರು ವರ್ಷದ ಹಿಂದೆ ಕೆರೆಗೆ ನೀರು ತುಂಬಿಸುವ ಯೋಜನೆಯ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅದರ ಫಲವಾಗಿ ನೀರು ಸಂಗ್ರಹಗೊಂಡಿದ್ದರಿಂದ ಅಂತರ್ಜಲ ಮಟ್ಟ ಕುಸಿತವಾಗಿಲ್ಲದಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ.
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರಿಂದ ಬರದ ನಡುವೆ ನಮಗೆ ನೀರಿನ ಕೊರತೆ ಉಂಟಾಗಿಲ್ಲ. ಜನ ಜಾನುವಾರು ಇದೇ ನೀರು ಆಶ್ರಯಿಸಿಕೊಂಡಿದ್ದೇವೆ. ಕೆರೆಯ ಸುತ್ತ ಬೇಲಿ ಅಳವಡಿಸಬೇಕು.
ದೇವಿಂದ್ರಪ್ಪಗೌಡ, ಹೊಸಕೇರಾ ನಿವಾಸಿ
ಕಾಲುವೆಯ ಮೂಲಕ ನೀರು ಸಂಗ್ರಹಿಸಿಕೊಂಡಿದ್ದರಿಂದ ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದು.
ವೆಂಕಣ್ಣ ದೇವಾಪುರ, ಪಿಡಿಒ, ಹೊಸಕೇರಾ
ಕೆರೆಗೆ ಹೊಂದಿಕೊಂಡಂತೆ ಬೇಟೆ ಅರಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.