ADVERTISEMENT

ಕಲಬುರಗಿಯಲ್ಲಿ ಸೆ.29ರಿಂದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 9:45 IST
Last Updated 25 ಸೆಪ್ಟೆಂಬರ್ 2024, 9:45 IST
<div class="paragraphs"><p>ಪತ್ರಿಕಾಗೋಷ್ಠಿಯಲ್ಲಿ ಮುಖಂಡರು</p><p></p></div>

ಪತ್ರಿಕಾಗೋಷ್ಠಿಯಲ್ಲಿ ಮುಖಂಡರು

   

– ಪ್ರಜಾವಾಣಿ ಚಿತ್ರ

ADVERTISEMENT

ಬೆಳಗಾವಿ: ‘ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಸಭೆ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ ಕಲಬುರಗಿಯಲ್ಲಿ ಸೆ.29, 30ರಂದು ನಡೆಯಲಿದೆ’ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಸಂಚಾಲಕ ಎನ್.ಎಲ್.ಭರತ್‌ರಾಜ್ ಹೇಳಿದರು‌.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಜತೆಗೆ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ತಮಿಳುನಾಡಿನ ಮುಖಂಡರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ದೇಶದ ಕಬ್ಬು ಬೆಳೆಗಾರರ ಸ್ಥಿತಿಗತಿ, ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು’ ಎಂದರು.

‘ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಶಾಮೀಲಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರಿಗೆ ಮೋಸ ಮಾಡುತ್ತಿವೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದದ್ದರೆ, ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಎಫ್ಆರ್‌ಪಿ ನಿಗದಿಪಡಿಸಬೇಕಿತ್ತು. ರಾಜ್ಯ ಸರ್ಕಾರ ಪ್ರತಿ ಟನ್ ಗೆ ₹500 ಎಸ್‌ಎಪಿ ನಿಗದಿಪಡಿಸಬೇಕಿತ್ತು’ ಎಂದರು.

‘1994–95ರಲ್ಲಿ ಶೇ 8.5 ಇಳುವರಿ ಆಧರಿಸಿ, ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸುತ್ತಿದ್ದರು. ನಂತರ ಶೇ 9.5 ಇಳುವರಿ ಆಧಾರದಲ್ಲಿ ಬೆಲೆ ನಿಗದಿಗೊಳಿಸಿದರು. ಈಗ ಶೇ 10.25 ಇಳುವರಿ ಆಧರಿಸಿ, ಟನ್‌ ಕಬ್ಬಿಗೆ ₹3,150ರಿಂದ ₹3,400 ದರ ನೀಡುತ್ತಿದ್ದಾರೆ. ಇದರ ಬದಲಿಗೆ, ಎಂ.ಎಸ್‌.ಸ್ವಾಮಿನಾಥನ್‌ ಆಯೋಗದ ವರದಿಯಂತೆ ಪ್ರತಿ ಟನ್‌ಗೆ ₹5,370 ದರ ನೀಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಸಚಿವರು, ಶಾಸಕರೇ ಸಕ್ಕರೆ ಕಾರ್ಖಾನೆಗಳ ಮಾಲೀಕರಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವೂ ಕಬ್ಬಿನ ಉಪ ಉತ್ಪನ್ನಗಳ ಲಾಭ ಆಧರಿಸಿ ಎಸ್‌ಎಪಿ ನಿಗದಿಪಡಿಸುತ್ತಿಲ್ಲ’ ಎಂದರು.

‘ಕಬ್ಬು ಕಟಾವು, ಸಾಗಾಣಿಕೆ ವೆಚ್ಚದ ಕುರಿತಾಗಿ ಚರ್ಚಿಸಲು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಕಬ್ಬು ಬೆಳೆಗಾರರ ಸಂಘದ ಮುಖಂಡರನ್ನು ಒಳಗೊಂಡು ಸಭೆ ನಡೆಸಿ, ದ್ವಿಪಕ್ಷೀಯ ಸಮಿತಿ ರಚಿಸಬೇಕು’ ಎಂದರು.

ಮುಖಂಡರಾದ ಬಿ.ಎಸ್‌.ಸೊಪ್ಪಿನ, ಜಿ.ಎಂ.ಜೈನೇಖಾನ್‌, ಸಿದಗೌಡ ಮೋದಗಿ, ಚಂದ್ರಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.