ಕಲಬುರಗಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲದಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಕನ್ನಡಿಗ ಭಕ್ತರ ಮೇಲೆ ನಡೆದ ಹಲ್ಲೆಗೆ ವಿಷಾದ ವ್ಯಕ್ತಪಡಿಸಿರುವ ಶ್ರೀಶೈಲ–ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕ ಸರ್ಕಾರವು ಶ್ರೀಶೈಲದಲ್ಲಿ ರಾಜ್ಯದ ಭಕ್ತರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಯುಗಾದಿ ಮಹೋತ್ಸವದ ಅಂಗವಾಗಿ ಶ್ರೀಶೈಲದ ಮಠದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿರುವ ಸ್ವಾಮೀಜಿ ’ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇಂತಹ ಘಟನೆಗಳಿಂದ, ತಿಂಗಳಾನುಗಟ್ಟಲೇ ಕಾಲ್ನಡಿಗೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಲು ಬಂದಿರುವ ರಾಜ್ಯದ ಭಕ್ತರಿಗೆ ಆತಂಕವುಂಟಾಗುತ್ತದೆ. ಶ್ರೀಶೈಲಯದಲ್ಲಿ ಸುಮಾರು 25 ಲಕ್ಷ ಜನರು ಬೀಡುಬಿಟ್ಟಿದ್ದು, ಅವರನ್ನು ವಾಪಸ್ ಹೋಗು ಎಂದರೆ ತಕ್ಷಣಕ್ಕೆ ಹೋಗುವುದು ಅಸಾಧ್ಯ. ಸದ್ಯಕ್ಕೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆಂಧ್ರಪ್ರದೇಶ ಸರ್ಕಾರ ಅಗತ್ಯಬಿದ್ದರೆ ಭದ್ರತೆಗಾಗಿ ಮಿಲಿಟರಿಯನ್ನು ಕರೆಸಬೇಕು. ರಾಜ್ಯದ ಭಕ್ತರಿಗೆ ನಮ್ಮ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆಯಿಂದ ಎಂಟು ಕ್ವಿಂಟಲ್ ಅಕ್ಕಿ ಖರ್ಚಾಗಿದೆ’ ಎಂದರು.
‘ಕರ್ನಾಟಕ ಸರ್ಕಾರವು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ರಾಜ್ಯದ ಭಕ್ತರ ರಕ್ಷಣೆಯನ್ನು ಮಾಡಬೇಕು. ಬಜೆಟ್‌ನಲ್ಲಿ ಘೋಷಿಸಿದಂತೆ ₹ 93 ಕೋಟಿ ವೆಚ್ಚದ ಕರ್ನಾಟಕ ಭವನವನ್ನು ಶ್ರೀಶೈಲದಲ್ಲಿ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ಇದರಿಂದ ರಾಜ್ಯದ ಭಕ್ತರು ನೆಮ್ಮದಿಯಿಂದ ಉಳಿದು ದರ್ಶನ ಪಡೆಯಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.