ADVERTISEMENT

ಕಲಬುರಗಿ: ರೈಲಿಗೆ ಕಾದು ನಿಂತ ಶ್ವಾನಗಳ ಹಿಂಡು!

ರೈಲ್ವೆ ಫ್ಲಾಟ್‌ಫಾರ್ಮ್‌ ಮೇಲೆ ಬೀದಿ ನಾಯಿಗಳ ಹಾವಳಿ: ಭಯದಲ್ಲಿ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 4:58 IST
Last Updated 30 ಆಗಸ್ಟ್ 2024, 4:58 IST
ಕಲಬುರಗಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ಒಂದರ ಮೇಲೆ ನಿಂತ ಬೀದಿ ನಾಯಿಗಳು
ಕಲಬುರಗಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ಒಂದರ ಮೇಲೆ ನಿಂತ ಬೀದಿ ನಾಯಿಗಳು   

ಕಲಬುರಗಿ: ‘ರೈಲು ಪ್ರಯಾಣಿಕರು ಲಗೇಜ್‌ ಸಮೇತ ಕಲುಬರಗಿ ರೈಲು ನಿಲ್ದಾಣಕ್ಕೆ ಬರುವ ಮುಂಚೆಯೇ ಬೀದಿ ನಾಯಿಗಳ ಹಿಂಡು ಫ್ಲಾಟ್‌ಫಾರ್ಮ್ ತುದಿಯಲ್ಲಿ ರೈಲು ಹತ್ತುವ ಧಾವಂತದಲ್ಲಿ ಇರುವಂತೆ ನಿಲ್ಲುತ್ತಿವೆ. ರೈಲ್ವೆ ಪೊಲೀಸರು, ನಿಲ್ದಾಣದ ಸಿಬ್ಬಂದಿ ಅಲ್ಲಿಯೇ ಓಡುಡಾತ್ತಿದ್ದರೂ ಅವುಗಳನ್ನು ಅಲ್ಲಿಂದ ಓಡಿಸುತ್ತಿಲ್ಲ. ಬಹುಶಃ ಅವರು ಶ್ವಾನಗಳನ್ನೂ ಪ್ರಯಾಣಿಕರೆಂದು ಪರಿಗಣಿಸಿರಬಹುದು...’

...ಹೀಗೆ ವ್ಯಂಗ್ಯವಾಗಿ ಹೇಳಿದ್ದು ರೈಲು ಪ್ರಯಾಣಿಕ, ನಗರದ ನಿವಾಸಿ ಶರಣಬಸವ ಪುರಾಣಿಕ್. ‘ರಸ್ತೆಯಲ್ಲಿ ಓಡಾಡುವಾಗಿ ಬೈಕ್‌ಗಳಿಗೆ ಅಡ್ಡ ಬಂದು ಕೆಳಗೆ ಬೀಳಿಸಿ ಗಾಯಗೊಳಿಸಿದ್ದವು. ತಿನ್ನಲು ಸಿಗದೆ ಇದ್ದಾಗ ಮಕ್ಕಳು, ವೃದ್ಧರ ಕೈಯಲ್ಲಿನ ಆಹಾರ ಪೊಟ್ಟಣಗಳಿಗೆ ಬಾಯಿ ಹಾಕಿ, ದಾಳಿ ಮಾಡಿದ್ದವು. ಈಗ ರೈಲು ನಿಲ್ದಾಣಕ್ಕೂ ನುಗ್ಗಿ ಪ್ರಯಾಣಿಕರ ಬ್ಯಾಗ್‌ ಮೂಸಿ ನೋಡಿ, ಅಡ್ಡಾದಿಡ್ಡಿ ಓಡಾಡುತ್ತಿದ್ದರೂ ನಿಲ್ದಾಣದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಿಂದ ಹತ್ತಾರು ಬೀದಿ ನಾಯಿಗಳು ಒಳ ಬಂದು ಸುತ್ತಾಡುತ್ತಿವೆ. ಬೀದಿ ನಾಯಿಗಳಿಂದಾಗಿ ಪ್ರಯಾಣಿಕರು ಭಯದಲ್ಲೇ ರೈಲಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲು ಹತ್ತುವ ಗಡಿಬಿಡಿಯಲ್ಲಿ ಪ್ರಯಾಣಿಕರ ಕಾಲಿಗೆ ಸಿಕ್ಕಿ ಮುಗ್ಗರಿಸಿ ಬೀಳುತ್ತಿದ್ದಾರೆ. ಚಿಕ್ಕ ಮಕ್ಕಳು ಕೈಯಲ್ಲಿ ತಿಂಡಿ ಪೊಟ್ಟಣ ಹಿಡಿದುಕೊಂಡು ಓಡಾಡುವಂತಿಲ್ಲ’ ಎಂದು ಮತ್ತೊಬ್ಬ ಪ್ರಯಾಣಿಕ ಸಂಜಯ್ ಹೇಳಿದರು.

ADVERTISEMENT

‘ಬೀದಿ ನಾಯಿಗಳಿಂದಾಗಿ ನಿಲ್ದಾಣದಲ್ಲಿ ಕುಳಿತುಕೊಳ್ಳುವುದಕ್ಕೆ ಭಯವಾಗುತ್ತಿದೆ. ರೈಲು ಹತ್ತುವ ಧಾವಂತದಲ್ಲಿ ಎಡವಿ ಬಿದ್ದರೆ ಅಥವಾ ನಾಯಿ ಕಚ್ಚಿದರೆ ಯಾರು ಹೊಣೆಗಾರರು? ನಿಲ್ದಾಣದಲ್ಲಿ ರೈಲ್ವೆ ಪೊಲೀಸರು, ಸ್ವಚ್ಛತಾ ಕಾರ್ಮಿಕರು, ಟಿಕೆಟ್‌ ಪರಿ ವೀಕ್ಷಕರು (ಟಿಟಿಇ), ಪಾರ್ಸಲ್ ವಿಭಾಗದವರು ಇದ್ದರೂ ಶ್ವಾನಗಳನ್ನು ನಿಯಂತ್ರಿಸಲು ಆಗುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ರೈಲು ನಿಲ್ದಾಣದ ಮ್ಯಾನೇಜರ್ ಜಿ.ಜಿ. ಮೋಹನ್, ‘ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಎರಡ್ಮೂರು ದಿನಗಳ ಹಿಂದೆಯೇ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಲಿಖಿತ ದೂರು ಕೊಟ್ಟಿದ್ದೆ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಗುರುವಾರ ನಿಲ್ದಾಣಕ್ಕೆ ಬಂದ ಪಾಲಿಕೆಯ ಆರೋಗ್ಯ ಅಧಿಕಾರಿ, ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಬೀದಿ ನಾಯಿಗಳಿಂದ ಪ್ರಯಾಣಕರಿಗೆ ಪ್ರಾಣಾಪಾಯ ಆಗುವ ಮುನ್ನ ಪಾಲಿಕೆ ಹಾಗೂ ನಿಲ್ದಾಣದ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಯಿಗಳನ್ನು ನಿಯಂತ್ರಿಸಬೇಕು
ಶರಣಬಸವ ಪುರಾಣಿಕ್ ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.