ಕಲಬುರಗಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿರುವ 24 ಗಂಟೆಗಳ ಮುಷ್ಕರಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ, ನಗರದಲ್ಲಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಬಂದ್ ಆಗಿದ್ದರಿಂದ ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ಪರದಾಡುವಂತಾಯಿತು.
ಯುನೈಟೆಡ್ ಆಸ್ಪತ್ರೆ, ಯಶೋಧಾ ಆಸ್ಪತ್ರೆ, ಸದ್ಭಾವ ಆಸ್ಪತ್ರೆ, ವಿನಾಯಕ ನರವಿಜ್ಞಾನ ಮತ್ತು ಪುನರ್ವಸತಿ ಕೇಂದ್ರ,
ಶ್ರೀಗ್ಯಾಸ್ಟ್ರೋ, ಲಿವರ್ ಮತ್ತು ಎಂಡೋಸ್ಕೋಪಿ ಕ್ಲಿನಿಕ್, ಯಶೋಧಾ ಚಿಕ್ಕಮಕ್ಕಳ ಆಸ್ಪತ್ರೆ, ಸಮರ್ಥ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಿದ್ದು ಕಂಡು ಬಂತು. ನಗರದಲ್ಲಿರುವ ಕ್ಲಿನಿಕ್‌ಗಳೆಲ್ಲ ಬಾಗಿಲು ಮುಚ್ಚಿದ್ದವು.
ನಗರದ ಜಿಮ್ಸ್ ಆಸ್ಪತ್ರೆ, ಎಚ್‌ಕೆಇ ಸಂಸ್ಥೆಯ ಡಾ.ಮಲಕರೆಡ್ಡಿ ಹೋಮಿಯೊಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾಲೇಜು ವಿದ್ಯಾರ್ಥಿಗಳು ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು.
ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ‘ನಿಲ್ಲಿಸಿ ನಿಲ್ಲಿಸಿ ಅತ್ಯಾಚಾರ ನಿಲ್ಲಿಸಿ’, ‘ಬೇಕೇಬೇಕು ನ್ಯಾಯಬೇಕು’ ಎಂದು ಘೋಷಣೆ ಕೂಗಿದರು. ‘ಆಸ್ಪತ್ರೆಯಲ್ಲೇ ಸುರಕ್ಷಿತವಿಲ್ಲ ಎಂದಾರೆ ಮತ್ತೆಲ್ಲಿ ಸುರಕ್ಷೆ?’, ‘ನಾಗರಿಕನಿಗೆ ಇರುವ ಸ್ವಾತಂತ್ರ್ಯ ನಾರಿಗೆ ಏಕಿಲ್ಲ?’, ‘ನಾರಿ ಸುರಕ್ಷೆ, ರಾಷ್ಟ್ರ ಸುರಕ್ಷೆ’ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ಜಿಮ್ಸ್‌ನಲ್ಲಿರುವ ನರ್ಸಿಂಗ್, ಪ್ಯಾರಾ ಮೆಡಿಕಲ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 700ರಷ್ಟು ಮಂದಿ ಮುಷ್ಕರದಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸಿದವು. ರೋಗಿಗಳ ಜೀವ ಉಳಿಸುವ ವೈದ್ಯಕೀಯ ಸಿಬ್ಬಂದಿಯ ಜೀವಕ್ಕೆ ಸುರಕ್ಷತೆ ಇಲ್ಲವೆಂದಾರೆ ಹೇಗೆ’ ಎಂದು ಪ್ರತಿಭಟನನಿರತ ಸ್ನಾತಕೋತ್ತರ ವೈದ್ಯವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆ:
ಎಚ್‌ಕೆಇ ಸಂಸ್ಥೆಯ ಡಾ.ಮಲಕರೆಡ್ಡಿ ಹೋಮಿಯೊಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೂರಾರು ವಿದ್ಯಾರ್ಥಿಗಳು ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
‘ಹೊರ ರೋಗಿಗಳ ವಿಭಾಗಕ್ಕೆ ನಿತ್ಯ ನಮ್ಮಲ್ಲಿ 80ರಿಂದ 100 ರೋಗಿಗಳು ಬರುತ್ತಾರೆ. ಮಧ್ಯಾಹ್ನದ ತನಕ 10 ಹೆಚ್ಚು ಮಂದಿಯನ್ನು ವಾಪಸ್ ಕಳುಹಿಸಲಾಗಿದೆ. 30ಕ್ಕೂ ಹೆಚ್ಚು ಮಂದಿ ಕರೆ ಮಾಡಿ ವಿಚಾರಿಸಿದ್ದು, ಅವರಿಗೆ ದಿನದ ಮಟ್ಟಿಗೆ ಆಸ್ಪತ್ರೆಗೆ ಬರದಂತೆ ತಿಳಿಸಲಾಗಿದೆ’ ಎಂದು ಆಸ್ಪತ್ರೆಯೊಂದರ ಸಿಬ್ಬಂದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.