ಕಲಬುರಗಿ: ‘ಇ–ಶ್ರಮ್’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ವಲಸೆ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ (ಆದ್ಯತಾ ಪಡಿತರ ಚೀಟಿ) ವಿತರಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹರಸಾಹಸ ಪಡುತ್ತಿದೆ.
‘ಇ–ಶ್ರಮ್’ದಲ್ಲಿ ನೋಂದಾಯಿತ ಕಾರ್ಮಿಕರಿಗೆ ಬಿಪಿಎಲ್ ಚೀಟಿ ವಿತರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಡಿತರ ಚೀಟಿಗಳ ವಿತರಣೆ ಕಾರ್ಯ ನಡೆಯುತ್ತಿದೆ. ಆದರೆ, ಫಲಾನುಭವಿಗಳನ್ನು ತಲುಪುವುದೇ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
‘ಪಡಿತರ ಚೀಟಿ ವಿತರಣೆಗೆ ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಕಲಬುರಗಿ ಜಿಲ್ಲೆಯ 7,214 ಫಲಾನುಭವಿಗಳನ್ನು ಗುರುತಿಸಲಾಗಿದೆ. ನ.4ರಿಂದ ಬಿಪಿಎಲ್ ಕಾರ್ಡ್‌ಗಳ ವಿತರಣೆಯೂ ಆರಂಭವಾಗಿದೆ. ನ.7ರ ತನಕ ಅಂದಾಜು 3,214 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ನ.19ರ ತನಕ ಕಾರ್ಡ್‌ಗಳ ವಿತರಣೆಗೆ ಅವಕಾಶವಿದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಭೀಮರಾಯ ಕಲ್ಲೂರ ಹೇಳುತ್ತಾರೆ.
‘ಪಡಿತರ ಚೀಟಿ ವಿತರಣೆಯಲ್ಲಿ ಸರಣಿ ಸವಾಲುಗಳು ಎದುರಾಗಿವೆ. ಮೊದಲಿಗೆ ಫಲಾನುಭವಿಗಳ ಪೈಕಿ ಕೆಲವರಷ್ಟೇ ಸ್ಥಳೀಯವಾಗಿದ್ದಾರೆ. ಬಹುತೇಕರು ವಲಸೆ ಕಾರ್ಮಿಕರು. ಹೆಚ್ಚಿನವರು ಪುಣೆ, ಬೆಂಗಳೂರು, ಮುಂಬೈನಂಥ ಮಹಾನಗರಗಳಿಗೆ ದುಡಿಯಲು ಹೋಗಿದ್ದಾರೆ. ಅವರನ್ನು ಸಂರ್ಪಕಿಸುವುದು, ಅವರಿಗೆ ವಸ್ತುಸ್ಥಿತಿ ತಿಳಿಸಿ ಅವರಿಂದ ಅರ್ಜಿ ಹಾಕಿಸಿ, ಕಾರ್ಡ್ ವಿತರಣೆಗೆ ನಾವೇ ದುಂಬಾಲು ಬೀಳುವಂತಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಪತ್ತೆಗೆ ಹರಸಾಹಸ: ‘ಫಲಾನುಭವಿಗಳ ಪೈಕಿ ಹೆಚ್ಚೆಂದರೆ ಶೇ 5ರಿಂದ ಶೇ 10ರಷ್ಟು ಮಂದಿ ಮಾತ್ರವೇ ಅರ್ಜಿ ಹಾಕಿದ್ದಾರೆ. ಮಿಕ್ಕವರಿಗೆ ನಾವೇ ಅರ್ಜಿ ಹಾಕಿಸಿ, ಕಾರ್ಡ್ ವಿತರಿಸಲಾಗುತ್ತಿದೆ. ಈ ಫಲಾನುಭವಿಗಳ ನಿಖರ ವಿಳಾಸವೂ ಸಿಗುತ್ತಿಲ್ಲ. ಉದಾಹರಣೆಗೆ– ಕೇವಲ ‘ಕಲ್ಲಪ್ಪ ಮಲ್ಲಪ್ಪ ಕಲಬುರಗಿ, ಕಲ್ಲಪ್ಪ ಮಲ್ಲಪ್ಪ ಆಳಂದ, ಕಲ್ಲಪ್ಪ ಮಲ್ಲಪ್ಪ ಅಫಜಲಪುರ’ ಎಂದಷ್ಟೇ ಇದೆ. ಇನ್ನು, ಜಿಲ್ಲೆಯ ಏಳು ಸಾವಿರದ ಪೈಕಿ ಎರಡು ಸಾವಿರದಷ್ಟು ಫಲಾನುಭವಿಗಳ ಮೊಬೈಲ್ ಸಂಖ್ಯೆಯೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತೆ ಕೆಲವು ಫಲಾನುಭವಿಗಳ ವಿಳಾಸ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಸಂಬಂಧಿಸಿದೆ. ಹೀಗಾಗಿ ಫಲಾನುಭವಿಗಳ ಪತ್ತೆಯೇ ತಲೆನೋವಾಗಿ ಪರಿಣಮಿಸಿದೆ’ ಎಂಬುದು ಅಧಿಕಾರಿಗಳ ಅಳಲು.
‘ಸವಾಲುಗಳ ನಡುವೆಯೂ, ನಿಗದಿತ ಫಲಾನುಭವಿಗಳ ಪತ್ತೆಗೆ ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಂಟಿಯಾಗಿ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ ಸಿಬ್ಬಂದಿ ನೆರವು ಪಡೆದು ಫಲಾನುಭವಿಗಳನ್ನು ಪತ್ತೆ ಮಾಡಿ ಕಾರ್ಡ್ ವಿತರಣೆಗೆ ಕ್ರಮವಹಿಸಲಾಗುತ್ತಿದೆ’ ಎಂದು ಭೀಮರಾಯ ಕಲ್ಲೂರ ಹೇಳುತ್ತಾರೆ.
‘ಇ–ಶ್ರಮ್ ಕಾರ್ಡ್‌ನ ಮಾಹಿತಿ ಆಧರಿಸಿ ಇಲಾಖೆಯಿಂದಲೇ ಕರೆ ಮಾಡಿದರೂ, ಫಲಾನುಭವಿಗಳು ಅದನ್ನು ಫ್ರಾಡ್ ಕಾಲ್(ವಂಚನೆ) ಎಂದುಕೊಂಡು ಮನಬಂದಂತೆ ಟೀಕಿಸುತ್ತಿದ್ದಾರೆ. ಅವರ ಪ್ರಶ್ನೆಗಳಿಗೆಲ್ಲ ಉತ್ತರಿಸಿ, ತಿಳಿವಳಿಕೆ ನೀಡಿದರೂ, ಅವರು ಒಪ್ಪುವ ಸ್ಥಿತಿಯಲ್ಲಿ ಇಲ್ಲ’ ಎಂದು ಫಲಾನುಭವಿಗಳ ಪತ್ತೆ ಇರುವ ಸವಾಲಿನ ಮೇಲೆ ಅವರು ಬೆಳಕು ಚೆಲ್ಲುತ್ತಾರೆ.
ಅರ್ಹ ಮತ್ತು ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರು ಮಾಹಿತಿಗೆ 1800-425-9339 ಅಥವಾ ಇಲಾಖೆಯ ಸಹಾಯವಾಣಿ 1967ಕ್ಕೆ, ಕೆಲಸದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಕರೆ ಮಾಡಬಹುದು.
ಕೋವಿಡ್ ಅವಧಿಯಲ್ಲಿ ವಲಸೆ ಕಾರ್ಮಿಕರ ಸಂಕಷ್ಟದ ಕುರಿತು 2020ರಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡ್ ವಿತರಿಸಲು ಕ್ರಮವಹಿಸುವಂತೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 2021ರಲ್ಲಿ ಆದೇಶಿಸಿತ್ತು. ಅದಾಗ್ಯೂ ಹಲವು ರಾಜ್ಯಗಳು ತಾಂತ್ರಿಕ ಕಾರಣ ಮುಂದೊಡ್ಡಿ ಪಡಿತರ ಚೀಟಿ ವಿತರಿಸಿರಲಿಲ್ಲ. ಈ ಸಂಬಂಧ ಹಲವು ಬಾರಿ ಗಡುವುಗಳನ್ನು ನೀಡಿದ್ದ ಸುಪ್ರೀಂಕೋರ್ಟ್ ನ.19 ಅಂತಿಮ ಗುಡುವು. ಅದರೊಳಗೆ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಕ್ಟೋಬರ್ 4ರಂದು ಎಚ್ಚರಿಸಿತ್ತು.
ಫಲಾನುಭವಿಗಳ ಪತ್ತೆಯೇ ಸವಾಲಾಗಿದೆ. ವಿವಿಧ ಇಲಾಖೆಗಳ ಸಹಯೋಗ ಪಡೆದು ನ.10ರೊಳಗೆ ಗುರಿ ತಲುಪುವ ನಿರೀಕ್ಷೆಗಳಿವೆ–ಭೀಮರಾಯ ಕಲ್ಲೂರ ಜಂಟಿ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.