ADVERTISEMENT

ಆಳಂದ: ಬಸ್‌ಗಾಗಿ ವಿದ್ಯಾರ್ಥಿಗಳ ನಿತ್ಯ ಪರದಾಟ

ಬಸ್‌ ಪಾಸ್‌ಗೆ ವಿಳಂಬ: ಆಳಂದ ತಾಲ್ಲೂಕಿನಲ್ಲಿ ಬಸ್‌ ಸೌಕರ್ಯ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 7:13 IST
Last Updated 9 ಜುಲೈ 2024, 7:13 IST
ಆಳಂದ–ನಿರಗುಡಿ ಮಾರ್ಗದಲ್ಲಿ ತೆರಳುವ ಬಸ್‌ಗಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವುದು
ಆಳಂದ–ನಿರಗುಡಿ ಮಾರ್ಗದಲ್ಲಿ ತೆರಳುವ ಬಸ್‌ಗಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವುದು   

ಆಳಂದ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶಾಲಾ–ಕಾಲೇಜುಗಳಿಗೆ ದಿನಿನಿತ್ಯ ಸಂಚರಿಸುವ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿದ ಪರಿಣಾಮ ವಿದ್ಯಾರ್ಥಿಗಳು ಬಸ್‌ ಸಂಚಾರಕ್ಕಾಗಿ ಪರದಾಡುವ ಸ್ಥಿತಿ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಅನಿವಾರ್ಯವಾಗಿ ಸಿಕ್ಕ ಬಸ್‌ಗಳಲ್ಲಿ ಸಂಚರಿಸುವ ಸಂಕಷ್ಟ ಎದುರಾಗಿದೆ.

ಆಳಂದ ಪಟ್ಟಣ ತಾಲ್ಲೂಕು ಕೇಂದ್ರವಾಗಿರುವ ಕಾರಣ ಬಹುತೇಕ ಗ್ರಾಮದ ವಿದ್ಯಾರ್ಥಿಗಳು ಶಾಲಾ ಕಾಲೇಜು ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬಸ್‌ ಪಾಸ್‌ ಅವಲಂಬಿಸಿದ್ದಾರೆ. ಈಗೀಗ ಬಸ್‌ ಪಾಸ್‌ ಮತ್ತು ಸರ್ಕಾರದ ಗ್ಯಾರೆಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಕಲ್ಪಿಸಿದ ಪರಿಣಾಮ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಇದರಿಂದ ಯುವ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಆಸನ ಹಿಡಿದು ಸಂಚರಿಸುವರು. ಆದರೆ ಹೆಣ್ಣುಮಕ್ಕಳಿಗೆ ಬಸ್‌ನಲ್ಲಿ ಜಾಗ ಸಿಕ್ಕರೆ ಸಾಕು ಅನ್ನುವ ಪರಿಸ್ಥಿತಿ ಇದೆ. ಕಿರಿಕಿರಿ, ಒತ್ತಡ, ಜಗ್ಗಾಟ, ತಳ್ಳುವಿಕೆ ನಡುವೆ ಹೆಣ್ಣುಮಕ್ಕಳ ಹೈರಾಣ ಮಾತ್ರ ಹೇಳದಂತೆ ಆಗಿದೆ.

ಮುಖ್ಯವಾಗಿ ಆಳಂದ- ಮಾದನ ಹಿಪ್ಪರಗಿ, ಆಳಂದ-ಖಜೂರಿ ಗಡಿಗ್ರಾಮಗಳಾದ ಹೊದಲೂರು, ತಡೋಳಾ, ಅಳಂಗಾ, ಆಳಂದ- ನಿಂಬರ್ಗಾ, ಆಳಂದ- ಬೆಳಮಗಿ, ಆಳಂದ-ಹಿರೋಳಿ, ಆಳಂದ-ನಿರಗುಡಿ, ಆಳಂದ- ಮಾಡಿಯಾಳ, ಆಳಂದ- ರುದ್ರವಾಡಿ ಮಾರ್ಗದಲ್ಲಿ ಬಸ್‌ ಸಂಚಾರ ವ್ಯವಸ್ಥೆ ಇದೆ. ಆದರೆ ಬಹುತೇಕ ಬಸ್‌ ಸಮಯಕ್ಕೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಮಯಕ್ಕೂ ಹೊಂದಾಣಿಕೆ ಸಮಸ್ಯೆ ಕಾಡುತ್ತಿದೆ. ಇದರಿಂದ ಬಸ್‌ಗಾಗಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ಬಸ್‌ ನಿಲ್ದಾಣ, ಕಾಲೇಜುಗಳಲ್ಲಿ ಕುಳಿತು ಕಾಯುವ ಸ್ಥಿತಿ ಇದೆ ಎಂದು ಸಕ್ಕರಗಾ ಗ್ರಾಮದ ವಿದ್ಯಾರ್ಥಿ ವೀಣಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜು ಮತ್ತು ಕೆಲವು ಪಿಯು ಕಾಲೇಜುಗಳು ಮಧ್ಯಾಹ್ನ 2ಕ್ಕೆ ಬಿಟ್ಟರೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಸಂಜೆ ಬಸ್‌ವರೆಗೆ ಕಾಯಬೇಕು. ಹಿರೋಳಿ, ಸಾಲೇಗಾಂವ, ಹೊದಲೂರು, ಕಣಮಸ, ಚಿತಲಿ, ಎಲೆ ನಾವದಗಿ, ಭೂಸನೂರು ಮತ್ತಿತರ ಗ್ರಾಮದ ಬಸ್‌ಗಳು ಮುಖ್ಯರಸ್ತೆವರೆಗೆ ಮಾತ್ರ ಸಂಚರಿಸುತ್ತವೆ. ಬಸ್‌ ನಿಲುಗಡೆ ಸ್ಥಳದಿಂದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಕನಿಷ್ಠ 1 ಕಿ.ಮೀ ಕ್ರಮಿಸಬೇಕು. ಗ್ರಾಮದವರೆಗೆ ಸಂಚರಿಸುವ ಬಸ್‌ಗಳಿಗಾಗಿ ಸಾಯಂಕಾಲದವರೆಗೂ ಕಾಯಬೇಕು.

ಬಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ದಟ್ಟಣೆ, ಕಿರಿಕಿರಿ ತಡೆಯಲು ಬಸ್‌ ನಿರ್ವಾಹಕರಿಗೂ ಕಷ್ಟವಾಗುತ್ತಿದೆ. ಕೆಲವೆಡೆ ಬಸ್‌ಗಳಲ್ಲಿ ಯುವಕರ ನಡುವೆ ವಾದವಿವಾದಗಳು ಹೆಚ್ಚುತ್ತಿವೆ. ಮಧ್ಯದಲ್ಲಿ ಬಸ್‌ ಕೆಟ್ಟು ಹೋದರೆ, ವಿಳಂಬವಾದರೆ ಶಾಲಾಕಾಲೇಜುಗಳಿಗೆ ತಡವಾಗುವುದು ಸಾಮಾನ್ಯವಾಗುತ್ತಿದೆ. ಇದು ಸಹ ವಿಶೇಷವಾಗಿ ಹೆಣ್ಣುಮಕ್ಕಳಿಗೆ ತಲೆನೋವು ತಂದಿದೆ.

ತಾಲ್ಲೂಕಿನ ಎಲ್ಲೆಡೆ ಬಸ್‌ ಸೇವೆ ಕಲ್ಪಿಸಿದರೂ ವಿದ್ಯಾರ್ಥಿ ಸ್ನೇಹಿಯಾಗಿಲ್ಲ. ಇದರಿಂದ ವಿಶೇಷವಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಮೇಘಾ ಚಿಚಕೋಟಿ ವಿದ್ಯಾರ್ಥಿ ತಡಕಲ
ಮುಖ್ಯರಸ್ತೆಗಳ ಮೇಲೆ ಬಸ್‌ ಸಂಚಾರ ವ್ಯವಸ್ಥೆ ಹೆಚ್ಚಿದೆ. ಆದರೆ ಗ್ರಾಮೀಣ ಭಾಗದ ಒಳಮಾರ್ಗದ ವಿದ್ಯಾರ್ಥಿಗಳಿಗೆ ಬಸ್‌ ಅನನುಕೂಲ ಮುಂದುವರಿದಿದೆ. ಉತ್ತಮ ಸಂಚಾರ ಸೌಲಭ್ಯಕ್ಕಾಗಿ ಕನಿಷ್ಠ ಮೂರು ಅವಧಿಗೆ ಬಸ್ ಹೆಚ್ಚಳ ಮಾಡಬೇಕು.
ಶಿವಕುಮಾರ ಪುಟ್ಟುಸ್ವಾಮಿ ಸಂಗೋಳಗಿ
ಆಳಂದ ಬಸ್‌ ಘಟಕದಿಂದ ದಿನಾಲೂ ನೂರು ಬಸ್‌ ಸಂಚರಿಸುತ್ತವೆ. ಹೊಸ ಮಾರ್ಗದಲ್ಲಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸ್‌ ಹೆಚ್ಚಿದ್ದರಿಂದ ಜನದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
ಯೋಗಿರಾಜ ಸರಸಂಬಿ ವ್ಯವಸ್ಥಾಪಕ ಬಸ್‌ ಘಟಕ ಆಳಂದ
‘ಬಸ್‌ ಸಮಸ್ಯೆ ಪರಿಹಾರಕ್ಕೆ ಕ್ರಮ’
ಆಳಂದ ಬಸ್‌ ಘಟಕದಿಂದ ದಿನಾಲೂ ನೂರು ಬಸ್‌ ಸಂಚರಿಸುತ್ತವೆ. ಹೊಸ ಮಾರ್ಗದಲ್ಲಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸ್‌ ಹೆಚ್ಚಿದ್ದರಿಂದ ಜನದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಳಂದ ಬಸ್‌ ಘಟಕದ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.