ADVERTISEMENT

ಏಕಕಾಲದಲ್ಲಿ ಎರಡು ಸೆಮಿಸ್ಟರ್‌ ಪರೀಕ್ಷೆ ಬೇಡ: ಎಐಡಿಎಸ್‌ಒ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 8:29 IST
Last Updated 27 ಜುಲೈ 2021, 8:29 IST
ಕಲಬುರ್ಗಿಯಲ್ಲಿ ಮಂಗಳವಾರ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಬಾರಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಅಖಿಲ ಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಕಲಬುರ್ಗಿಯಲ್ಲಿ ಮಂಗಳವಾರ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಬಾರಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಅಖಿಲ ಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಒಂದೇ ಸಮಯದಲ್ಲಿ ಡಿಪ್ಲೊಮಾ ಅಂತಿಮ ವರ್ಷದ ಎರಡು ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ನಡೆಸದಂತೆ ಆಗ್ರಹಿಸಿ ಅಖಿಲ ಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ನೇತೃತ್ವದಲ್ಲಿ ಮಂಗಳವಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಘೋಷಣೆ ಕೂಗಿದರು.

ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಎಸ್‌.ಎಚ್.ಹಣಮಂತ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರಿಂದ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ. ಶಿಕ್ಷಣ ಸಂಸ್ಥೆಗಳ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ’ ಎಂದರು.

ADVERTISEMENT

‘ಹೊಸ ಆದೇಶದಿಂದ ವಿದ್ಯಾರ್ಥಿಗಳು ನಿರಾಳರಾಗಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳು ಇನ್ನೂ ಸಂಕಷ್ಟದಲ್ಲೇ ಇದ್ದಾರೆ. ಅವರಿಗೂ ಪರಿಹಾರ ನೀಡದೆ ತಾರತಮ್ಯ ಎಸಗಲಾಗಿದೆ. ಕೋವಿಡ್ ಅಸಾಮಾನ್ಯ ಸ್ಥಿತಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ಪರೀಕ್ಷೆಗಳನ್ನು ಅಕ್ಟೋಬರ್ ತಿಂಗಳ ಒಳಗೆ ಎದುರಿಸಬೇಕಿದೆ. ಇದರಿಂದ ಅವರು ಆತಂಕದಲ್ಲಿದ್ದಾರೆ’ ಎಂದು ಹೇಳಿದರು.

‘ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರವಾಗಿ ಯಾವುದಾದರೂ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಪಡಿಸಬೇಕು. ಇದರಿಂದ ಅವರಲ್ಲಿನ ಮಾನಸಿಕ ಒತ್ತಡ ತಗ್ಗುತ್ತದೆ. ಯುಜಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಆದರೆ, ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷದ ಫಲಿತಾಂಶದ ಗುಣಮಟ್ಟ ನೆಪವೊಡ್ಡಿ ಒಂದೇ ಬಾರಿ ಎರಡು ಪರೀಕ್ಷೆ ನಡೆಸುತ್ತಿವೆ’ ಎಂದರು.

ಕಲಬುರ್ಗಿ ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಗುಲಬರ್ಗ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಇಸಬಾ, ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಸದಸ್ಯರಾದ ಎನ್‌.ಕೆ. ತುಳಜರಾಮ, ಬಿ.ಕೆ.ಶಿಲ್ಪಾ, ಪ್ರೀತಿ ದೊಡ್ಡಮನಿ, ಭೀಮು ಆಂದೋಲ, ನಾಗರಾಜ ರಾವುರ್ಕರ್, ಜೆ.ಕೆ.ಶಿಲ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.