ADVERTISEMENT

ಲಿಂಗಸುಗೂರು: ಗೌರಿ ಹುಣ್ಣಿಮೆಗೆ ಸಕ್ಕರೆ ಆರತಿ ಸಜ್ಜು

ಉತ್ತರ ಕರ್ನಾಟಕದಲ್ಲಿ ಕಂಡುಬರುವ ವಿಶಿಷ್ಟ ಸಾಂಪ್ರದಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 5:19 IST
Last Updated 10 ನವೆಂಬರ್ 2024, 5:19 IST
ಲಿಂಗಸುಗೂರು ಪಟ್ಟಣದ ಧನಶೆಟ್ಟಿ ಕುಟುಂಬಸ್ಥರು ಗೌರಿ ಹುಣ್ಣಿಮೆ ನಿಮಿತ್ತ ಸಕ್ಕರೆ ಆರತಿ ತಯಾರಿಕೆಯಲ್ಲಿ ನಿರತರಾಗಿರುವುದು
ಲಿಂಗಸುಗೂರು ಪಟ್ಟಣದ ಧನಶೆಟ್ಟಿ ಕುಟುಂಬಸ್ಥರು ಗೌರಿ ಹುಣ್ಣಿಮೆ ನಿಮಿತ್ತ ಸಕ್ಕರೆ ಆರತಿ ತಯಾರಿಕೆಯಲ್ಲಿ ನಿರತರಾಗಿರುವುದು   

ಲಿಂಗಸುಗೂರು: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳ ಆಚರಣೆ ಮತ್ತು ಆಹಾರ ಮತ್ತು ಪೂಜೆ ಸಿದ್ಧತೆಗಳು ವಿಭಿನ್ನವಾದ ಸಾಂಪ್ರದಾಯಗಳಿವೆ. ಅಂತೆಯೆ ಗೌರಿ ಹುಣ್ಣಿಮೆಗೆ ಸಕ್ಕರೆ ಆರತಿ ಬಳಕೆ ವೈಶಿಷ್ಟ್ಯಪೂರ್ಣವಾಗಿದ್ದು ವಿಶೇಷ ಗೊಂಬೆಗಳ ರೂಪದಲ್ಲಿ ಸಿದ್ಧಗೊಂಡು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ವಿಶೇಷ.

ದೀಪಾವಳಿ ಪಾಡ್ಯದ ದಿನ ಗೌರಿ ಮೂರ್ತಿ ಪ್ರತಿಷ್ಠಾನ ನಡೆಯುತ್ತದೆ. ಹದಿನೈದು ದಿನ ಮಹಿಳೆಯರ ಮತ್ತು ಮಕ್ಕಳು ಸಂಭ್ರಮದಿಂದ ಆಚರಿಸುವುದು ವಾಡಿಕೆ. ಈ ನಿಮಿತ್ತವಾಗಿ ಪೂಜಾ ಕೈಂಕರ್ಯ, ಮನೆಯ ಹೆಣ್ಣು ಮಕ್ಕಳಿಗೆ ಬುತ್ತಿ ಹೆಸರಲ್ಲಿ ಆರತಿ, ಸೀರೆ, ಕುಪ್ಪಸ ನೀಡಿ ಆರತಿ ಮಾಡುವ ಸಾಂಪ್ರದಾಯ ನಡೆಯುತ್ತವೆ. ವಿಶೇಷವಾಗಿ ಮಧುಮಗನ ಮನೆಯವರು ನಿಶ್ಚಯಿಸಿದ ಕನ್ಯೆಗೆ ಸಕ್ಕರೆ ಆರತಿ ನೀಡುವುದು ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಸಾಂಪ್ರದಾಯ.

ಗ್ರಾಮದ ಮಠಗಳಲ್ಲಿ ಪ್ರತಿಷ್ಠಾಪಿಸುವ ಗೌರಿ ಪೂಜೆಗೆ ದಿನಕ್ಕೊಂದು ಬಟ್ಟೆ ಧರಿಸಿ, ಆರತಿ ತಟ್ಟೆಯಲ್ಲಿ ಬಗೆಬಗೆಯ ಎಡೆ ಸಿದ್ಧಪಡಿಸಿಕೊಳ್ಳುವ ಜೊತೆಗೆ ಸಕ್ಕರೆ ಆರತಿಯ ವಿಭಿನ್ನ ಮಾದರಿ ಗೊಂಬೆಗಳ ಜೋಡಣೆ ಮಾಡಿ ಹಾಡುಗಳ ಹಾಡಿ, ಪೂಜೆ ಸಲ್ಲಿಸುವ ಸಡಗರ ಸಂಭ್ರಮ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮಾವನಾಗುವವರು ಆರತಿ ತಟ್ಟೆ ಹಾರಿ ಬಡಿಯುವ ಆಚರಣೆಯಿಂದ ಗ್ರಾಮೀಣ ಸೊಗಡಲ್ಲಿ ಪ್ರೀತಿ, ವಿಶ್ವಾಸಗಳು ನೆಲೆಗೊಳ್ಳುತ್ತವೆ.

ADVERTISEMENT

ಸಕ್ಕರೆ ಆರತಿ ಸಿದ್ಧತೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲ ಕುಟುಂಬಸ್ಥರು ಸಕ್ಕರೆ ಆರತಿ ಸಿದ್ಧಪಡಿಸಿ ಮಾರುಕಟ್ಟೆಗೆ ಮಾರಾಟಕ್ಕೆ ಕಳುಹಿಸುತ್ತಾರೆ. ಈ ಪೈಕಿ ಪಟ್ಟಣದ ಮಲ್ಲಪ್ಪ ಧನಶೆಟ್ಟಿ ಕುಟುಂಬಸ್ಥರು 40 ವರ್ಷಗಳಿಂದ ಸಕ್ಕರೆ ಆರತಿ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಲಾಭಕ್ಕಿಂತ ಸ್ವಾವಲಂಬನೆ ಬದುಕಿಗೆ ಹೆಚ್ಚು ಆಸರೆಯಾಗಿದೆ ಎಂಬುದು ಕುಟುಂಬಸ್ಥರ ಅನಿಸಿಕೆ.

ಸಕ್ಕರೆ ಆರತಿ ತಯಾರಿಸಲು ಸಕ್ಕರೆಗೆ ಹದಕ್ಕೆ ತಕ್ಕಷ್ಟು ನೀರು ಹಾಕಿ ಕುದಿಸಿ, ಲಿಂಬೆ ಹಣ್ಣು ಬಳಕೆ ಮಾಡುತ್ತಾರೆ. ರುಚಿ ಬರಲು ಯಾಲಕ್ಕಿ ಪೌಡರ್ ಹಾಕಲಾಗುತ್ತದೆ. ಹದಕ್ಕೆ ಬಂದ ಪಾಕವನ್ನು ಗೊಂಬೆ ಕೆತ್ತನೆ ಮಾಡಿರುವ ಅಚ್ಚುಪಡಿಗೆ ಹಾಕುತ್ತಾರೆ. ನಂತರದಲ್ಲಿ ನಾಜೂಕಿನಿಂದ ಅಚ್ಚಿನಿಂದ ಬೇರ್ಪಡಿಸಿ ಮಾರುಕಟ್ಟೆಗೆ ಮಾರಾಟಕ್ಕೆ ಕಳುಹಿಸುತ್ತಾರೆ. ಅಂದಿನ ದಿನದ ಸಕ್ಕರೆ ದರದ ಮೇಲೆ ಪ್ರತಿ ಕೇಜಿಗೆ ದರ ನಿಗದಿ ಮಾಡಿ ಮಾರಾಟ ಮಾಡುವುದು ವಾಡಿಕೆ.

‘ಅಡವಿಯಲ್ಲಿ ಜಮೀನಿಲ್ಲ, ಸ್ವಾವಲಂಬಿ ಬದುಕಿಗೆ ಸಕ್ಕರೆ ಆರತಿ, ಉಳಿದಂತೆ ಜಾತ್ರೆಗಳಿಗೆ ತೆರಳಿ ಜಿಲೇಬಿ, ಮಿರ್ಚಿ, ಉಳ್ಳಾಗಡ್ಡಿ ಬಜ್ಜಿ ಮಾರಾಟ ಮಾಡಿ ಬದುಕು ನಡೆಸುತ್ತೇವೆ. ನಮ್ಮ ಕಾಯಕಕ್ಕೆ ಸರ್ಕಾರದ ಯಾವೊಂದು ಯೋಜನೆಗಳ ಸೌಲಭ್ಯ ದೊರೆತಿಲ್ಲ. ಮಾರುಕಟ್ಟೆ ಪೈಪೋಟಿ ದರಲ್ಲಿ ಸಿಕ್ಕಷ್ಟು ಲಾಭ ಪಡೆದು ಕುಟುಂಬಸ್ಥರು ಬದುಕು ನಡೆಸುತ್ತಿದ್ದೇವೆ’ ಎಂದು ಕುಟುಂಬದ ಹಿರಿಯ ಮಲ್ಲಪ್ಪ ಧನಶೆಟ್ಟಿ ಹೇಳುತ್ತಾರೆ.

ಲಿಂಗಸುಗೂರು ಪಟ್ಟಣದ ಧನಶೆಟ್ಟಿ ಕುಟುಂಬಸ್ಥರು ಸಕ್ಕರೆ ಕುದಿಸಿ ಹದಕ್ಕೆ ಬಂದ ನಂತರದಲ್ಲಿ ಗೊಂಬೆಗಳ ಕಟ್ಟಿಗೆಯ ಅಚ್ಚಿಗೆ ಹಾಕಿ ಸಕ್ಕರೆ ಆರತಿ ಸಿದ್ಧತೆ ಕಾರ್ಯದಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.