ಕಲಬುರಗಿ: ‘ಕಬ್ಬು ಕಟಾವು ಮತ್ತು ಸಾಗಣೆಗೆ ರಾಜ್ಯದಾದ್ಯಂತ ಏಕರೂಪದ ದರ ನಿಗದಿ ಮಾಡಿದ್ದರೂ ಸಕ್ಕರೆ ಕಾರ್ಖಾನೆಗಳು ಕಟಾವು ಮತ್ತು ಸಾಗಣೆಯಲ್ಲಿ ಬೆಳೆಗಾರರಿಂದ ಸುಲಿಗೆ ಮಾಡುತ್ತಿವೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಕಬ್ಬು ಬೆಳೆಗಾರ ರೈತರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಕಬ್ಬು ಕಟಾವು ಮತ್ತು ಸಾಗಣೆಗೆ ₹800 ನಿಗದಿ ಮಾಡಲಾಗಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ₹1,200 ಪಡೆಯುವ ಮೂಲಕ ಅಧಿಕೃತವಾಗಿ ಮೋಸ ಮಾಡುವಂತಹ ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ಕಾಯ್ದೆ ಜಾರಿಯಲ್ಲಿದ್ದರೂ ಇಳುವರಿ ಹಾಗೂ ಎಫ್ಆರ್‌ಪಿ ಆಧಾರದ ಮೇಲೆ ನ್ಯಾಯಯುತ ದರ ಸಿಗುತ್ತಿಲ್ಲ’ ಎಂದರು.
‘ಕಬ್ಬು ಬೆಳೆಗಾರರು ಜಾಗೃತರಾಗಿ ಸಕ್ಕರೆ ಕಾರ್ಖಾನೆಗಳು ಹಾಗೂ ರಾಜಕಾರಣಿಗಳು ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಿದೆ. ಸಂಘದ ಪದಾಧಿಕಾರಿಗಳು ಬೆಳೆಗಾರರಲ್ಲಿ ಜಾಗೃತಿ ಮೂಡಿಸಿ, ಹೋರಾಟಗಳನ್ನು ರೂಪಿಸಬೇಕು’ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಬಸವರಾಜ ಪಟೀಲ ಮಾತನಾಡಿ, ‘ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಆಗಬೇಕು. ಒಪ್ಪಂದ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಒಮ್ಮೆ ಕಬ್ಬಿನ ದರ ನಿಗದಿಯಾದರೆ ಐದು ವರ್ಷಗಳವರೆಗೆ ಬದಲಾವಣೆ ಆಗಬಾರದು. ಎಫ್‌ಆರ್‌ಪಿ ದರವನ್ನು ಹೆಚ್ಚಳ ಮಾಡಬೇಕು’ ಎಂದರು.
‘ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆ ನಡೆಸಬೇಕು. ಕಬ್ಬು ಕಟಾವಿನ ವೇಳೆ ಪಡೆಯುವ ಲಂಚ ನಿಲ್ಲಬೇಕು. ಸಿದ್ಧಸಿರಿ ಕಾರ್ಖಾನೆ ಶೀಘ್ರವಾಗಿ ಆರಂಭ ಮಾಡಬೇಕು. ಸೋಲಾರ್ ಪಂಪ್‌ಸೆಟ್‌ಗಳ ಖರೀದಿಗೆ ಕೆಕೆಆರ್‌ಡಿಬಿ ಅಥವಾ ಸರ್ಕಾರದಿಂದ ಅನುದಾನ ನೀಡಬೇಕು’ ಎಂದು ಕೋರಿದರು.
ಮುಖಂಡ ಜಗದೀಶ ಪಾಟೀಲ ಮಾತನಾಡಿ, ‘ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆಗೆ ಕಬ್ಬು ನುರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ನವೆಂಬರ್ 4ರಿಂದ ಚಿಂಚೋಳಿಯಲ್ಲಿ ಧರಣಿ ನಡೆಸಲಾಗುವುದು’ ಎಂದರು.
ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಿ, ಜಿಲ್ಲಾ ಅಧ್ಯಕ್ಷ ರಮೇಶ ಎಸ್.ಹೂಗಾರ, ಉಪಾಧ್ಯಕ್ಷ ಶಾಂತವೀರಪ್ಪ ಹೆಬ್ಬಾಳ, ಮುಖಂಡರಾದ ಶರಣು ಬಿಲ್ಲಾಡ, ಕರಬಸಪ್ಪ ಉಜ್ಜಾ, ನಾಗೇಂದ್ರರಾವ ದೇಶಮುಖ, ಶರಣಬಸಪ್ಪ ಜಿ.ಬೈರಪ್ಪ ಉಪಸ್ಥಿತರಿದ್ದರು.
ಸಮಾವೇಶಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.
‘ಪಿತೂರಿ ರಾಜಕಾರಣ: ಕಾರ್ಖಾನೆ ಮುಚ್ಚಲು ಯತ್ನ’
‘ಬೀದರ್‌ನ ಮಂತ್ರಿಯೊಬ್ಬರಿಗೆ ತನ್ನದೇ ಕಾರ್ಖಾನೆಯ ಬೆಳೆಗಾರರಿಗೆ ಸರಿಯಾಗಿ ದುಡ್ಡು ಕೊಡಲು ಆಗುತ್ತಿಲ್ಲ. ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆಯವರು ಬೆಳೆಗಾರಿಗೆ ಒಳ್ಳೆಯ ಬೆಲೆ ಕೊಡುತ್ತಿದ್ದರು. ರಾಜಕಾರಣಕ್ಕಾಗಿ ಆ ಕಾರ್ಖಾನೆ ಮೇಲೆ ಪಿತೂರಿ ಮಾಡಿ ಮುಚ್ಚಲು ಯತ್ನಿಸುತ್ತಿದ್ದಾರೆ’ ಎಂದು ಕುರುಬೂರು ಶಾಂತಕುಮಾರ್ ಆರೋಪಿಸಿದರು.
‘ಕಾರ್ಖಾನೆಯವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಕೊಡಿಸಿ. ಕಬ್ಬು ಬೆಳೆದ 12 ಸಾವಿರ ಬೆಳೆಗಾರರು ಏನು ಮಾಡಬೇಕು? ರೈತರ ಬದುಕಿನ ಜತೆಗೆ ಚೆಲ್ಲಾಟ ಆಡುತ್ತಾ ಅನ್ಯಾಯದ ರಾಜಕಾರಣ ಮಾಡಬೇಡಿ. ಸಾಧ್ಯವಾದರೆ ರಾಜ್ಯದ 76 ಕಾರ್ಖಾನೆಗಳು ಮಾಡುತ್ತಿರುವ ಮೋಸವನ್ನು ತಪ್ಪಿಸಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.