ಕಲಬುರಗಿ: ‘ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಕಾಯ್ದೆಯನ್ನು ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅದನ್ನು ಜಾರಿಗೆ ತರುವಂತೆ ದೊಡ್ಡ ಹೋರಾಟ ಮಾಡಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಿ.ರವಿಂದ್ರನ್ ಹೇಳಿದರು.
ನಗರದಲ್ಲಿ ಭಾನುವಾರ ಕರ್ನಾಟಕ ಕಬ್ಬು ಬೆಳೆಗಾರ ಸಂಘ ಆಯೋಜಿಸಿದ್ದ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ತಮಿಳುನಾಡಿನಲ್ಲಿ ಎಸ್‌ಎಪಿ ಸ್ಥಗಿತದ ಘೋಷಣೆ ಹೊರ ಬಿದ್ದಾಗ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಅದರ ಪ್ರತಿಫಲವಾಗಿ ಇವತ್ತು ಬೆಳೆಗಾರರು ಪ್ರತಿ ಟನ್ ಕಬ್ಬಿನ ಮೇಲೆ ಹೆಚ್ಚುವರಿಯಾಗಿ ₹ 250 ಎಸ್‌ಎಪಿ ಪಡೆಯುತ್ತಿದ್ದಾರೆ. ಪಂಜಾಬ್, ಹರಿಯಾಣದ ಬೆಳೆಗಾರರಿಗೆ ಎಸ್‌ಎಪಿ ಸಿಗುತ್ತಿದೆ. ಆದರೆ, ಕರ್ನಾಟಕದಲ್ಲಿ ಉತ್ತಮ ಇಳುವರಿ ಇದ್ದಾಗಿಯೂ ಇಲ್ಲಿನ ಬೆಳೆಗಾರರಿಗೆ ಎಫ್‌ಆರ್‌ಪಿ, ಎಸ್‌ಎಪಿ ಸಿಗದೆ ಇರುವುದು ಬೇಸರ ತರಿಸಿದೆ’ ಎಂದರು.
‘ಕೇಂದ್ರ ಸರ್ಕಾರವು ಬೆಳೆಗಾರರನ್ನು ಕತ್ತಲಲ್ಲಿ ಇಟ್ಟು, ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಸಕ್ಕರೆ (ನಿಯಂತ್ರಣ) ಆದೇಶ– 1966ರ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ. ಈ ಕಾಯ್ದೆ ಜಾರಿಯಾದರೆ ಕೇಂದ್ರದ ಅನುಮತಿ ಇಲ್ಲದೆ ರಾಜ್ಯಗಳ ಕಾರ್ಖಾನೆಗಳು ಸಕ್ಕರೆ ಹಾಗೂ ಉಪ ಉತ್ಪನ್ನಗಳ ಮಾರಾಟದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ. ಕಬ್ಬು ಸಾಗಿಸಿದ 14 ದಿನಗಳ ಒಳಗೆ ಕಡ್ಡಾಯ ಹಣ ಪಾವತಿ ನಿಯಮವೂ ಕೊನೆಗೊಳ್ಳುತ್ತದೆ. ಇಂತಹ ಕಾಯ್ದೆ ಜಾರಿಗೆ ನಾವು ಬಿಡಬಾರದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.