ADVERTISEMENT

ಕಲಬುರಗಿ ರಂಗಾಯಣಕ್ಕೆ ನಿರ್ದೇಶಕಿಯಾಗಿ ಸುಜಾತಾ ಜಂಗಮಶೆಟ್ಟಿ ನೇಮಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 17:05 IST
Last Updated 12 ಆಗಸ್ಟ್ 2024, 17:05 IST
   

ಕಲಬುರಗಿ: ದಶಕದ ಹಿಂದೆ ಆರಂಭವಾದ ಕಲಬುರಗಿ ರಂಗಾಯಣಕ್ಕೆ ನಗರದ ಹವ್ಯಾಸಿ ರಂಗಭೂಮಿ ಕಲಾವಿದೆ ಸುಜಾತಾ ಜಂಗಮಶೆಟ್ಟಿ ಅವರು ನಿರ್ದೇಶಕಿಯಾಗಿ ನೇಮಕವಾಗುವ ಮೂಲಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಈ ಸ್ಥಾನ ಒಲಿದು ಬಂದಂತಾಗಿದೆ.

ರಂಗಸಂಗಮ ಕಲಾವೇದಿಕೆಯ ಮೂಲಕ ರಂಗ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಸುಜಾತಾ ಅವರು ಪ್ರತಿ ವರ್ಷ ತಮ್ಮ ತಂದೆ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ಅವರ ಹೆಸರಿನಲ್ಲಿ ರಾಜ್ಯದ ಹಿರಿಯ ರಂಗಕರ್ಮಿಗಳನ್ನು ಗುರುತಿಸಿ ರಂಗ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಮಾಡಿರುವ ಸುಜಾತಾ ಅವರು ಸುಮಾರು ಮೂರು ದಶಕದಿಂದ ಹವ್ಯಾಸಿ ರಂಗಭೂಮಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಆಕಾಶವಾಣಿಯ ನಾಟಕ ವಿಭಾಗದಲ್ಲಿ, ‘ಬಿ’ ಹೈ ಶ್ರೇಣಿ ಕಲಾವಿದರು. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದರು. ಟಿವಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ADVERTISEMENT

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ. ಸಿಂಡಿಕೇಟ್ ಸದಸ್ಯರಾಗಿ, ರಂಗಸಮಾಜದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ ರಂಗಭೂಮಿಯವರಿಗೆ ಕೊಡಮಾಡುವ ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಸಮಿತಿ ಸದಸ್ಯರಾಗಿ ‌ಕಾರ್ಯನಿರ್ವಹಿಸಿದ್ದಾರೆ.

ಸುಜಾತಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ನಾಟಕ ಅಕಾಡೆಮಿ ಸಿ.ಜಿ.ಕೆ ಯುವ ರಂಗಪ್ರಶಸ್ತಿ, ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರಲ್ಲಿ ಕೊಡಮಾಡುವ ವಿಶ್ವಚೇತನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಒಲಿದು ಬಂದಿವೆ.

ಸುಜಾತಾ ಜಂಗಮಶೆಟ್ಟಿ ಅವರು ರಾಯಚೂರಿನ ಪ್ರಸಿದ್ಧ ಗಜಲ್ ಕವಿ, ಲೇಖಕ ದಿ. ಶಾಂತರಸ ಹೆಂಬೆರಾಳು ಅವರ ಸೋದರ ಸೊಸೆ.

ಸರ್ಕಾರದ ಅಚ್ಚರಿಯ ಆಯ್ಕೆ
ರಂಗಾಯಣ ನಿರ್ದೇಶಕರನ್ನಾಗಿ ತಮ್ಮನ್ನು ನೇಮಕ ಮಾಡುವ ಕುರಿತು ಸ್ವತಃ ಸುಜಾತಾ ಜಂಗಮಶೆಟ್ಟಿ ಅವರಿಗೇ ಅಚ್ಚರಿ ಮೂಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಲೇಖಕ ರಾಜಪ್ಪ ದಳವಾಯಿ ಸೇರಿದಂತೆ ರಂಗ ಸಮಾಜದ ಸದಸ್ಯರು ಭಾಗವಹಿಸಿದ್ದ ಸಮಿತಿಯು ಕಲಬುರಗಿ ರಂಗಾಯಣಕ್ಕೆ ಹಿರಿಯ ರಂಗಕರ್ಮಿಗಳಾದ ಶಂಕ್ರಯ್ಯ ಘಂಟಿ, ಮಹಿಪಾಲರೆಡ್ಡಿ ಮುನ್ನೂರ್, ಯುವ ಕಲಾವಿದ ಸಂದೀಪ್ ಅವರ ಹೆಸರುಗಳನ್ನು ಅಂತಿಮಗೊಳಿಸಿತ್ತು. ಮೂವರ ಹೆಸರನ್ನೂ ಕೈಬಿಟ್ಟ ಸರ್ಕಾರ ಸುಜಾತಾ ಅವರನ್ನು ಪರಿಗಣಿಸಿದೆ. 
ಕನ್ನಡ ಮತ್ತು ಸಂಸ್ಕೃತಿ ಸಚಿವರ ಕಚೇರಿಯಿಂದ ಕರೆ ಬರುವವರೆಗೂ ನಿರ್ದೇಶಕಿಯಾಗಿ ನೇಮಕವಾದ ಬಗ್ಗೆ ಮಾಹಿತಿ ಇರಲಿಲ್ಲ. ಎಲ್ಲರ ಸಹಕಾರದೊಂದಿಗೆ ರಂಗಾಯಣದ ಚಟುವಟಿಕೆಗಳನ್ನು ನಡೆಸುವೆ
ಸುಜಾತಾ ಜಂಗಮಶೆಟ್ಟಿ ಕಲಬುರಗಿ ರಂಗಾಯಣ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.