ADVERTISEMENT

ಬಿಸಿಲ ಧಗೆ: ವಿದ್ಯುತ್ ‘ಬಿಲ್ ಶಾಕ್’

ಎರಡು ತಿಂಗಳಲ್ಲಿ ಹೆಚ್ಚುವರಿಯಾಗಿ 32.21 ದಶಲಕ್ಷ ಯುನಿಟ್ ವಿದ್ಯುತ್ ಬಳಕೆ

ಮಲ್ಲಿಕಾರ್ಜುನ ನಾಲವಾರ
Published 1 ಜೂನ್ 2024, 7:28 IST
Last Updated 1 ಜೂನ್ 2024, 7:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಕಲಬುರಗಿ: ಬೇಸಿಗೆಯ ಕೆಂಡದಂತಹ ಬಿಸಿಲು ಮತ್ತು ಬಿಸಿಗಾಳಿಯಿಂದ ಪಾರಾಗಲು ಎಡೆಬಿಡದೇ ಫ್ಯಾನ್, ಕೂಲರ್, ಎ.ಸಿ., ಫ್ರಿಡ್ಜ್‌ಗಳ ಮೊರೆ ಹೋದ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ಗ್ರಾಹಕರಿಗೆ ವಿದ್ಯುತ್ ‘ಬಿಲ್ ಶಾಕ್’ ತಟ್ಟಿದೆ.

ಬೆಸಿಗೆಯ ಆರಂಭಕ್ಕೂ ಮುನ್ನವೇ ‘ಕಲ್ಯಾಣ’ದಲ್ಲಿ ಸೂರ್ಯನ ಶಾಖ ದಿನೇ ದೀನ ಹೆಚ್ಚುತ್ತಾ ಸಾಗಿತು. ಬರದಿಂದ ಬರಡಾದ ನೆಲ ಮತ್ತು ಬತ್ತಿದ ಜಲ ಮೂಲಗಳಿಂದಾಗಿ ಬೇಸಿಗೆಯು ಸಹಿಸಲಾಗದ ಋತುವಾಗಿ ಪರಿಣಮಿಸಿತ್ತು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. ಇದೆಲ್ಲದರ ಪರಿಣಾಮವಾಗಿ ವಿದ್ಯುತ್ ಬಳಕೆಯೂ ಜ್ವರದಂತೆ ಏರಿಕೆಯಾಯಿತು.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫೆಬ್ರುವರಿ ಮತ್ತು ಏಪ್ರಿಲ್‌ ತಿಂಗಳಲ್ಲಿ ಹೆಚ್ಚಾಗಿಯೇ ಗೃಹ ಬಳಕೆಯ ವಿದ್ಯುತ್ ಬಳಸಲಾಗಿದೆ. ‘ಗೃಹಜ್ಯೋತಿ’ ವಿದ್ಯುತ್ ಬಳಕೆಯೂ ಏರಿಕೆಯಾಗಿದೆ.

ADVERTISEMENT

ಜೆಸ್ಕಾಂ ಅಂಕಿ–ಅಂಶಗಳ ಪ್ರಕಾರ, ಬಿಸಿಲ ಧಗೆ ತಾರಕಕ್ಕೆ ಏರಿದ್ದರಿಂದ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಗರಿಷ್ಠ ಮಟ್ಟದಲ್ಲಿ ವಿದ್ಯುತ್ ಬಳಕೆಯಾಗಿದೆ. 2023ರ ಫೆಬ್ರುವರಿ ತಿಂಗಳಲ್ಲಿದ್ದ 96.84 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯು 2024ರ ಫೆಬ್ರುವರಿಗೆ 114.91 ದಶಲಕ್ಷ ಯುನಿಟ್‌ಗೆ ಮುಟ್ಟಿದೆ. ಕಳೆದ ವರ್ಷದ ಮಾರ್ಚ್‌ ತಿಂಗಳ ಬಳಕೆಯು 107.41 ದಶಲಕ್ಷ ಯುನಿಟ್ ಇತ್ತು. ಈ ವರ್ಷದ ಮಾರ್ಚ್‌ನಲ್ಲಿ ಅದು 121.55 ದಶಲಕ್ಷ ಯುನಿಟ್‌ಗೆ ಏರಿಕೆಯಾಗಿದೆ.

ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದು, ವಾತಾವರಣವನ್ನು ತಂಪಾಗಿಸಿತ್ತು. ಇದರಿಂದ ವಿದ್ಯುತ್ ಬಳಕೆಗೆ ಸ್ವಲ್ಪ ಕಡಿವಾಣ ಬಿತ್ತು. 2023ರ ಏಪ್ರಿಲ್‌ನಲ್ಲಿ 129.08 ದಶಲಕ್ಷ ಯುನಿಟ್ ಬಳಸಲಾಗಿತ್ತು. 2024ರ ಏಪ್ರಿಲ್‌ನಲ್ಲಿ 118.08 ದಶಲಕ್ಷ ಯುನಿಟ್ ಖರ್ಚಾಗಿದೆ.

ಫೆಬ್ರುವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ಗ್ರಾಹಕರು ಫ್ಯಾನ್, ಕೂಲರ್, ಎ.ಸಿ. ಫ್ರಿಡ್ಜ್‌ ಹಗಲು ರಾತ್ರಿ ಎನ್ನದೇ ಬಳಸಿದರು. ಕೆಲವರು ಎರಡೆರಡು ಕೂಲರ್‌ಗಳ ಮೊರೆ ಹೋದರು. ತಮ್ಮ ಗಮನಕ್ಕೆ ಬಾರದೇ ನಿಗದಿತ ಯುನಿಟ್‌ಗಳ ಮಿತಿ ದಾಟಿ ವಿದ್ಯುತ್ ಬಳಸಿದ್ದರಿಂದ ಹೆಚ್ಚುವರಿ ಯುನಿಟ್‌ಗಳ ಶುಲ್ಕ ಪಾವತಿಸಬೇಕಾಯಿತು.

‘ಗೃಹಜ್ಯೋತಿ’ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ 20.69 ಲಕ್ಷ ಫಲಾನುಭವಿಗಳು ಇದ್ದಾರೆ. ಇದರಲ್ಲಿ 78,561 ಗ್ರಾಹಕರು ‘ಗೃಹಜ್ಯೋತಿ’ ಯೋಜನೆಯ ಮಿತಿಯನ್ನು ದಾಟಿ, ಬಿಲ್ ಮೊತ್ತ ಪಾವತಿಸಬೇಕಿದೆ.

ಲೋಡ್ ಶೆಡ್ಡಿಂಗ್: ವಿಪರೀತ ಒಣ ಹವೆ ಸೃಷ್ಟಿಯಾಗಿ ತೆರೆದ ಬಾವಿಗಳು ಮತ್ತು ಕೆರೆ ಕಟ್ಟೆಗಳು ಬತ್ತಿದ್ದರಿಂದ ಕೊಳವೆಬಾವಿಗಳ ಮೋಟರ್‌ ಬಳಕೆ ಹೆಚ್ಚಾಯಿತು. ಕೈಗಾರಿಕೆಗಳಿಗೆ ದಿನವಿಡೀ ವಿದ್ಯುತ್ ಪೂರೈಕೆ, ಯಥೇಚ್ಛ ಗೃಹ ಬಳಕೆಯ ವಿದ್ಯುತ್ ಉಪಯೋಗಿಸಿದ್ದರಿಂದ ಓವರ್ ಲೋಡ್ ಆಯಿತು. ಇದಕ್ಕೆ ಕಡಿವಾಣ ಹಾಕಲು ಕೆಲ ಹೊತ್ತು ಲೋಡ್‌ಶೆಡ್ಡಿಂಗ್ ಮಾಡಬೇಕಾಯಿತು. ಲೋಡ್ ತಡೆಯಲು ಆಗದೆ ಕೆಲವೆಡೆ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.