ADVERTISEMENT

ಬಿಜೆಪಿಯಲ್ಲೇ ಇದ್ದು ದುಡಿಯುತ್ತೇನೆ: ವಲ್ಲ್ಯಾಪುರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 14:26 IST
Last Updated 27 ಏಪ್ರಿಲ್ 2019, 14:26 IST
ಸುನಿಲ ವಲ್ಲ್ಯಾಪುರ
ಸುನಿಲ ವಲ್ಲ್ಯಾಪುರ   

ಕಲಬುರ್ಗಿ: ‘ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್‌ ನಿರಾಕರಿಸಿದ್ದಕ್ಕೆ ನನಗೆ ತೀವ್ರ ಬೇಸರವಾಗಿದೆ. ಆದರೆ, ಅದು ಕ್ಷಣಿಕ ಮಾತ್ರ. ಕ್ಷೇತ್ರದ ಕಾರ್ಯಕರ್ತರೊಂದಿಗೆ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇನೆ. ಅವರೆಲ್ಲರ ಸಲಹೆಯಂತೆ ಬಿಜೆಪಿಯಲ್ಲೇ ಇದ್ದು, ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ಮಾಜಿ ಸಚಿವ ಸುನಿಲ್‌ ವಲ್ಲ್ಯಾಪುರ ಹೇಳಿದರು.

‘ಕಳೆದ 25 ವರ್ಷಗಳಿಂದ ನಾನು ಬಿಜೆಪಿಗಾಗಿಯೇ ದುಡಿದಿದ್ದೇನೆ. ಹಲವು ವರ್ಷ ಸಾಮಾನ್ಯ ಕಾರ್ಯಕರ್ತನಾಗಿ, ಯುವ ಘಟಕದ ಮುಖಂಡನಾಗಿ, ಜಿಲ್ಲಾ ಘಟಕದ ಕಾರ್ಯದರ್ಶಿ ಆಗಿ, ಎರಡು ಬಾರಿ ಶಾಸಕನಾಗಿ, ಒಮ್ಮೆ ಸಚಿವನಾಗಿಯೂ ಜನಸೇವೆ ಮಾಡಿದ್ದೇನೆ. ಸಂಘ ಪರಿವಾದೊಂದಿಗೂ ಆಪ್ತತೆ ಬೆಳೆಸಿಕೊಂಡಿದ್ದೇನೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಗರಲ್ಲಿ ನಾನೂ ಒಬ್ಬ. ಅವರ ಸಲಹೆಯಂತೆ ನಡೆದುಕೊಳ್ಳುತ್ತೇನೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ.ಉಮೇಶ ಜಾಧವ ಅವರ ವಿರುದ್ಧವೇ ನಾನು ಸೋಲು ಅನುಭವಿಸಿದ್ದೆ. ಬದಲಾದ ರಾಜಕೀಯ ಸನ್ನಿವೇಶದಿಂದ ಈಗ ಜಾಧವ ಅವರು ನಮ್ಮ ಪಕ್ಷದಲ್ಲಿದ್ದಾರೆ. ಅವರ ಪುತ್ರ ಡಾ.ಅವಿನಾಶ ಜಾಧವಗೆ ಉಪಚುನಾವಣೆಯ ಟಿಕೆಟ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ. ಆದರೆ, ಪಕ್ಷವು ನನಗೂ ಗೌರವಯುತ ಸ್ಥಾನ ನೀಡಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೆಲವೊಮ್ಮೆ ತ್ಯಾಗಗಳು ಅನಿವಾರ್ಯ ಆಗುತ್ತವೆ’ ಎಂದು ಹೇಳಿದರು.

ADVERTISEMENT

‘ನನಗೆ ಎಷ್ಟೇ ನೋವಾಗಿದ್ದರೂ ಪಕ್ಷಕ್ಕಾಗಿ ಸಹಿಸಿಕೊಳ್ಳಬೇಕಿದೆ. ಈ ಹಿಂದೆ ಯಡಿಯೂರಪ್ಪ ಅವರ ಸಲಹೆಯಂತೆಯೇ ಶಾಸಕ ಸ್ಥಾನವನ್ನೂ ತ್ಯಾಗ ಮಾಡಿದ್ದೆ. ಈಗ ಸ್ಪರ್ಧಿಸುವ ನಿರ್ಧಾರವನ್ನೂ ಕೈ ಬಿಟ್ಟಿದ್ದೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‌ಬಿಜೆಪಿ ಗ್ರಾಮೀಣ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶೆಟ್ಟಿ, ನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ಬಾಬುರಾವ ಪಾಟೀಲ, ರೇವಣಸಿದ್ಧಪ್ಪ ಮಾಸ್ಟರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.