ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಆಸ್ತಿ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದು ಆಗಿದ್ದನ್ನು ವಿರೋಧಿಸಿ ತ್ರಿಮೂರ್ತಿ ಶಿವಾಚಾರ್ಯರು ಬುಧವಾರ ಪಾದಯಾತ್ರೆ ನಡೆಸಲು ಮುಂದಾದ ಬೆನ್ನಲ್ಲೇ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಲಾಗಿದೆ.
ಮಠಕ್ಕೆ ಸೇರಿದ 5 ಎಕರೆ 24 ಗುಂಟೆ ಜಮೀನಿನ ಪಹಣಿಯಲ್ಲಿ 2018ರಲ್ಲಿ ‘ಅಶುರ್‌ಖನ್ನ ವಕ್ಫ್’ ಎಂದು ಸೇರ್ಪಡೆಯಾಗಿತ್ತು. ಇದರ ವಿರುದ್ಧ ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡರೂ ಪ್ರತಿಭಟಿಸಿದ್ದರು.
ತ್ರಿಮೂರ್ತಿ ಶಿವಾಚಾರ್ಯರು ಮಠ–ಮಂದಿರ, ರೈತರ ಪಹಣಿಗಳಲ್ಲಿರುವ ವಕ್ಫ್ ಮಂಡಳಿ ಹೆಸರು ತೆಗೆಯುವುವಂತೆ ಒತ್ತಾಯಿಸಿ ನೂರಾರು ಬೆಂಬಲಿಗರೊಂದಿಗೆ ಸೇಡಂನ ಉಪವಿಭಾಗಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಅಧಿಕಾರಿಗಳು ಮಠದ ಪಹಣಿಯಿಂದ ವಕ್ಫ್ ಹೆಸರು ತೆಗೆದುಹಾಕಿದ್ದಾರೆ.
‘1974–76ರ ಗೆಜೆಟ್ ಅಧಿಸೂಚನೆಯನ್ನು ರುದ್ದುಗೊಳಿಸುವಂತೆ ಒತ್ತಡವಿದೆ. ಜನರ ಪರವಾಗಿ ಮುಖ್ಯಮಂತ್ರಿಗೆ ಮನವಿ ಮಾಡಿ ಚರ್ಚಿಸುತ್ತೇನೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪ್ರತಿಭಟನಕಾರರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.