ತಾಜಸುಲ್ತಾನಪುರ: ಮಕ್ಕಳನ್ನು ಹೊರಗೆ ಕಳಿಸಲು ಭಯವಾಗುತ್ತದೆ. ಗ್ರಾಮದಲ್ಲಿ ಒಬ್ಬೊಬ್ಬರೇ ಒಡಾಡುವಂತಿಲ್ಲ. ಮನೆಯಲ್ಲಿ ಮಾಡಿಟ್ಟ ಅಡುಗೆಯನ್ನೂ ಮಂಗಗಳು ತೆಗೆದುಕೊಂಡು ಹೋಗುತ್ತವೆ...
–ಇದು ಕಲಬುರಗಿ ತಾಲ್ಲೂಕಿನ ತಾಜಸುಲ್ತಾನಪುರ ಗ್ರಾಮದಲ್ಲಿ ಮಂಗಗಳ ಹಾವಳಿಯಿಂದ ಬೇಸತ್ತಿರುವ ಗ್ರಾಮಸ್ಥರ ಅಳಲು.
ಕೆಲವು ತಿಂಗಳುಗಳಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಕಚ್ಚಿವೆ. ಅಲ್ಲದೆ, ಹಲವು ವಾಹನ ಸವಾರರ ಮೇಲೆ ದಾಳಿ ನಡೆಸಿವೆ.
ಬೆಳಿಗ್ಗೆ ಮತ್ತು ಸಂಜೆ ವೇಳೆ ಗುಂಪು ಗುಂಪಾಗಿ ಮನೆಯೊಳಗೆ ನುಗ್ಗುವ ಮಂಗಗಳು ರೊಟ್ಟಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಹೊತ್ತೊಯ್ಯುತ್ತವೆ. ಮನೆಗಳ ಛಾವಣೆ ಮೇಲೆ ಹತ್ತಿ ಓಡಾಡುತ್ತವೆ.
ಗ್ರಾಮದಲ್ಲಿ 1,500ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಬಹುತೇಕರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಮಂಗಗಳ ಕಾಟದಿಂದ ಕೆಲಸಕ್ಕೂ ಹೋಗದೆ ಮನೆ ಬಾಗಿಲು ಹಾಕಿಕೊಂಡು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
’ಮನೆಯಲ್ಲಿ ಅಡುಗೆ ಮಾಡುವುದೇ ದುಸ್ತರವಾಗಿದೆ. ಮನೆ ಬಾಗಿಲು ಹಾಕಿದರೆ ಕಿಟಕಿ ಸರಳುಗಳ ಮೂಲಕ ಒಳಗೆ ನುಸುಳುತ್ತವೆ. ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಹೊಡೆಯಲು ಹೋದರೆ ನಮ್ಮ ಮೇಲೆಯೇ ದಾಳಿ ನಡೆಸುತ್ತವೆ. ಕೈಯಲ್ಲಿ ಸದಾ ಬಡಿಗೆ ಹಿಡಿದುಕೊಂಡು ಓಡಾಡಬೇಕಿದೆ‘ ಎಂದು ಗ್ರಾಮದ ನಿವಾಸಿ ಶಾರದಾಬಾಯಿ ಸಮಸ್ಯೆ ಬಿಚ್ಚಿಟ್ಟರು.
ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ. ಒಬ್ಬರನ್ನೇ ಕಳಿಸಿದರೆ ಎಲ್ಲಿ ಮಂಗಳಗಳು ದಾಳಿ ನಡೆಸುತ್ತವೆ ಎಂಬ ಆತಂಕ ಕಾಡುತ್ತದೆ. ಹೀಗಾಗಿ ಪೋಷಕರೇ ಮಕ್ಕಳನ್ನು ಶಾಲೆವರೆಗೂ ಬಿಟ್ಟು ಬರಬೇಕಾಗಿದೆ ಎಂದು ಗ್ರಾಮದ ಮುಖಂಡ ರಾಮಣ್ಣ ಚೌಡಾಪುರ ಹೇಳಿದರು.
’ಐದು ವರ್ಷಗಳ ಈಚೆಗೆ ಇಲ್ಲಿ ಮಂಗಗಳ ಸಂಖ್ಯೆ ಹೆಚ್ಚಾಗಿದೆ. ಮೊದಲು ದಾಳಿ ಮಾಡುತ್ತಿರಲಿಲ್ಲ, ಆಹಾರ ಪದಾರ್ಥಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದವು. ಈಗ ಕೆಲವು ತಿಂಗಳಿಂದ ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸಿವೆ‘ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಆನಂದ ಖೇಳಗಿ.
ಗ್ರಾಮದ ಸುತ್ತ ಎಲ್ಲಿಯೂ ಅರಣ್ಯ ಪ್ರದೇಶ ಇಲ್ಲ. ಆದರೂ ಇಷ್ಟು ಸಂಖ್ಯೆಯ ಮಂಗಗಳು ಎಲ್ಲಿಂದ ಬಂದವು ಎಂಬುದು ತಿಳಿಯುತ್ತಿಲ್ಲ. ಜಾಲಿಗಿಡಗಳು, ಪೊದೆಗಳಲ್ಲಿ ಅಡಗಿ ಕುಳಿತಿರುತ್ತವೆ. ಬೆಳಿಗ್ಗೆ ಅಡುಗೆ ಮಾಡುವ ಸಮಯಕ್ಕೆ ಮನೆ ಒಳಗೆ ನುಗ್ಗುತ್ತವೆ. ಇದು ಗ್ರಾಮದ ಜನರ ನೆಮ್ಮದಿಯನ್ನೇ ಕಸಿದಿದೆ ಎಂದರು.
ಹೊಲಗಳಿಗೆ ನುಗ್ಗುವ ಮಂಗಗಳು ಬೆಳೆಯನ್ನೂ ಹಾಳು ಮಾಡುತ್ತಿವೆ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜತೆಗೆ ಬೆಳೆಯನ್ನೂ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ತಾಜಸುಲ್ತಾನಪುರದಲ್ಲೇ ಗ್ರಾಮ ಪಂಚಾಯಿತಿ ಕಚೇರಿ ಇದೆ. ಮಂಗಗಳ ಹಾವಳಿ ನಿಯಂತ್ರಿಸುವಂತೆ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಆದಷ್ಟು ಬೇಗ ಮಂಗಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಮಂಗಗಳನ್ನು ಹಿಡಿಯಲು ಕ್ರಮ
ತಾಜಸುಲ್ತಾನಪುರದಲ್ಲಿರುವ ಮಂಗಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಒಂದು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ಸಚಿನ್ ಪಾಟೀಲ ಹೇಳಿದರು.
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. 300ಕ್ಕೂ ಹೆಚ್ಚು ಮಂಗಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಅವುಗಳಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮಂಗಗಳನ್ನು ಹಿಡಿಯುವ ಪರಿಣತರನ್ನು ಸಂಪರ್ಕಿಸಲಾಗಿದೆ ಎಂದರು.
ಈ ಕಾರ್ಯಾಚರಣೆಗೆ ಸಿಸಿಎಫ್ ಅವರಿಂದ ಅನುಮತಿ ಪಡೆಯಬೇಕು. ಇದಕ್ಕೆ ಇಲಾಖೆಯಿಂದ ಯಾವುದೇ ಅನುದಾನ ನೀಡುವುದಿಲ್ಲ. ಗ್ರಾಮ ಪಂಚಾಯಿತಿಯಿಂದ ಇದಕ್ಕೆ ತಗುಲುವ ವೆಚ್ಚವನ್ನು ಭರಿಸಬೇಕು. ಇದನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಗಮನಕ್ಕೆ ತಂದು ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸಲಾಗುವುದು. ಆ ನಂತರ ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡಲಾಗುವುದು ಎಂದು ತಿಳಿಸಿದರು.
***
ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಇವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಇವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ಇದಕ್ಕೆ ಪಂಚಾಯಿತಿಯಿಂದ ಸಹಕಾರ ನೀಡುತ್ತೇವೆ
–ಬಸವರಾಜ ಪಾಟೀಲ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ತಾಜಸುಲ್ತಾನಪುರ
***
ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಮಂಗವೊಂದು ಬಂದು ದಾಳಿ ನಡೆಸಿತು. ಪ್ರಜ್ಞೆ ತಪ್ಪಿ ಬಿದ್ದಿದ್ದ ನನ್ನನ್ನು ಅಕ್ಕಪಕ್ಕದವರು ಬಂದು ರಕ್ಷಿಸಿದರು. ಮಂಗಗಳ ಹಾವಳಿಯಿಂದಾಗಿ ಮನೆಯಿಂದ ಹೊರಬರಲು ಭಯಪಡಬೇಕಾಗಿದೆ
ಅಂಜುಮ್, ನಿವಾಸಿ, ತಾಜಸುಲ್ತಾನಪುರ
***
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. 12 ಕಿ.ಮೀ ದೂರದ ಕಲ್ಲಹಂಗರಗಾ ಗ್ರಾಮದಲ್ಲಿ ಇದೆ. ಮಂಗಗಳು ಕಚ್ಚಿದಾಗ ಅಲ್ಲಿ ಹೋದರೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಇದರಿಂದ ಕಲಬುರಗಿಗೆ ತೆರಳಬೇಕು
ಆನಂದ ಖೇಳಗಿ, ಯುವ ಮುಖಂಡ, ತಾಜಸುಲ್ತಾನಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.