ADVERTISEMENT

ತಾ.ಪಂ.ಸಾಮಾನ್ಯ ಸಭೆ: ₹114 ಕೋಟಿಗೆ ಅನುಮೋದನೆ

ಉದ್ಯೋಗ ಖಾತ್ರಿ ಅನುಷ್ಠಾನ; ಜಿಲ್ಲೆಗೆ ಚಿಂಚೋಳಿ ತಾಲ್ಲೂಕು ಪ್ರಥಮ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:46 IST
Last Updated 22 ಜುಲೈ 2024, 15:46 IST
ಚಿಂಚೋಳಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಮದ್ ಪಟೇಲ್ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು
ಚಿಂಚೋಳಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಮದ್ ಪಟೇಲ್ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು    

ಚಿಂಚೋಳಿ: ತಾಲ್ಲೂಕು ಪಂಚಾಯಿತಿಯಿಂದ 2024-25ನೇ ಸಾಲಿಗಾಗಿ ವಿವಿಧ ಇಲಾಖೆಗಳಿಗೆ ₹114.84 ಕೋಟಿ ಅನುದಾನಕ್ಕೆ ತಾ.ಪಂ.ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಆಡಳಿತಾಧಿಕಾರಿಯಾಗಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ, ‘ಶಿಕ್ಷಣ ₹85.86 ಕೋಟಿ, ಆರೋಗ್ಯ ಇಲಾಖೆ ₹1.28 ಕೋಟಿ, ನೀರು ಸರಬರಾಜು ₹23 ಲಕ್ಷ, ಸಮಾಜ ಕಲ್ಯಾಣ ₹3.01ಕೋಟಿ, ಬಿಸಿಎಂ ₹10.2 ಲಕ್ಷ, ಮಹಿಳಾ ಮತ್ತು ಮಕ್ಕಳ ಇಲಾಖೆ ₹14.22 ಕೋಟಿ, ಕೃಷಿ ₹88 ಲಕ್ಷ, ಪಶು ಪಾಲನಾ ಇಲಾಖೆ ₹6.18 ಲಕ್ಷ, ಇತರೆ ಗ್ರಾಮೀಣ ಅಭಿವೃದ್ಧಿ ₹4.42 ಲಕ್ಷ, ರೇಷ್ಮೆ ₹0.35 ಲಕ್ಷ ಅನುದಾನ ನಿಗದಿಯಾಗಿದೆ’ ಎಂದು ಇಒ ಶಂಕರ ರಾಠೋಡ್ ತಿಳಿಸಿದರು.

‘ಉದ್ಯೋಗ ಖಾತ್ರಿಯಲ್ಲಿ 9.99 ಲಕ್ಷ ಮಾನವ ದಿನ ಸೃಜನೆಯ ಗುರಿನಿಗದಿಯಾಗಿದ್ದು, ಈವರೆಗೆ 4.91ಲಕ್ಷ ಮಾನವ ದಿನ ಸೃಜಿಸಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ನಾಲ್ಕು ಹಂತಗಳಲ್ಲಿ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ನೀರು ಪೂರೈಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಈವರೆಗೆ 213 ಕಾಮಗಾರಿಗಳ ಪೈಕಿ 154 ಕಾಮಗಾರಿ ಪೂರ್ಣಗೊಂಡಿವೆ. 59 ಕಾಮಗಾರಿಗಳು ವಿವಿಧ ಹಂತದಲ್ಲಿವೆ’ ಎಂದು ಶಾಖಾಧಿಕಾರಿ ಯುವರಾಜ ರಾಠೋಡ್ ತಿಳಿಸಿದರು. 87 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 46 ಕಾರ್ಯನಿರ್ವಹಿಸುತ್ತಿವೆ’ ಎಂದರು.

‘ತಾಲ್ಲೂಕಿನಲ್ಲಿ ಶೇ 96ರಷ್ಟು ಬಿತ್ತನೆಯಾಗಿದೆ. ಮಳೆ ಬೆಳೆ ಸ್ಥಿತಿ ಚನ್ನಾಗಿದೆ. ಅಲ್ಪಾವಧಿ ಬೆಳೆಗಳು ಹೂವಾಡುವ ಹಂತದಲ್ಲಿವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು. ಬೆಳೆ ಹಾನಿ, ನೆಟೆರೋಗ, ಬರಗಾಲ ಮತ್ತು ಬೆಳೆ ವಿಮೆ ಅಡಿಯಲ್ಲಿ ತಾಲ್ಲೂಕಿನ 64ಸಾವಿರಕ್ಕೂ ಅಧಿಕ ರೈತರಿಗೆ ₹53 ಕೋಟಿ ಹಣ ಜಮಾ ಮಾಡಲಾಗಿದೆ’ ಎಂದರು.

ತಾಲ್ಲೂಕಿನಲ್ಲಿ ತೋಟಗಾರಿಕೆಗೆ ವಿಪುಲ ಅವಕಾಶವಿದೆ. ರೈತರಿಗೆ ಹೊಸ ಬೆಳೆಗಳನ್ನು ಬೇಸಾಯ ಮಾಡಲು ಪರಿಚಯಿಸೇಕು. ಮಳೆಗಾಲ ಇರುವುದರಿಂದ ಅಧಿಕಾರಿಗಳು ಶುಚಿತ್ವ ಕಾಪಾಡಬೇಕು. ವಸತಿ ನಿಲಯಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆಡಳಿತಾಧಿಕಾರಿ ಸಮದ್ ಪಟೇಲ್ ಸೂಚಿಸಿದರು.

ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗುಡ್‌ನೈಟ್ ದ್ರಾವಣ ಇರಿಸಬೇಕು. ಇದರಿಂದ ಮಕ್ಕಳನ್ನು ಡೆಂಗಿಯಿಂದ ರಕ್ಷಿಸಬಹುದಾಗಿದೆ ಎಂದರು. ಕೃಷಿ ಸಲಹೆ ಕುರಿತು ಅಧಿಕಾರಿಗಳು ಚಿಕ್ಕ ಚಿಕ್ಕ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಟಿಎಚ್‌ಒ ಡಾ ಮಹಮದ್ ಗಫಾರ್, ತೋಟಗಾರಿಕೆ ಸಹಾಯಕ ನಿರ್ದೆಶಕ ರಾಜಕುಮಾರ ಗೋವಿನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.