ADVERTISEMENT

ಕಲಬುರಗಿ: ಬಿಸಿಯೂಟದ ಗುಣಮಟ್ಟದ ಮೇಲೆ ಹದ್ದಿನ ಕಣ್ಣು, ಕ್ಷಿಪ್ರ ಕಾರ್ಯಪಡೆ ರಚನೆ

ಮಲ್ಲಿಕಾರ್ಜುನ ನಾಲವಾರ
Published 18 ಜುಲೈ 2023, 5:33 IST
Last Updated 18 ಜುಲೈ 2023, 5:33 IST
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)   

ಕಲಬುರಗಿ: ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡಲು ರಾಜ್ಯ ಸರ್ಕಾರದ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳ(ಎಸ್‌ಒಪಿ) ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದಲ್ಲಿ ಐದು ಕ್ಷಿಪ್ರ ಕಾರ್ಯಪಡೆ ತಂಡಗಳನ್ನು(ಟಾಸ್ಕ್ ಫೋರ್ಸ್) ರಚಿಸಲಾಗಿದೆ.

ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ ಶಾಲಾ ವಿದ್ಯಾರ್ಥಿಗಳು ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ (ಮಧ್ಯಾಹ್ನ ಉಪಾಹಾರ ಯೋಜನೆ) ನಿರ್ದೇಶಕರು ಕ್ಷಿಪ್ರ ಕಾರ್ಯಪಡೆಯ ಐದು ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾದಗಿರಿಯ ಕೆಂಭಾವಿ, ರಾಯಚೂರಿನ ಅಪ್ಪನದೊಡ್ಡಿ ಮತ್ತು ಬೀದರ್‌ನ ಹುಮನಾಬಾದ್‌ ಸರ್ಕಾರಿ ಶಾಲೆಯ ಮಕ್ಕಳು ಬಿಸಿಯೂಟ್ಟದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿದ್ದರು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಯಾ ಶಾಲೆಗಳ ಮುಖ್ಯಶಿಕ್ಷಕರು, ಅಧಿಕಾರಿಗಳು ಸೇರಿ 6 ಜನರನ್ನು ಅಮಾನತು ಮಾಡಲಾಯಿತು. ಅಡುಗೆ ಸಿಬ್ಬಂದಿಯನ್ನು ತೆಗೆದುಹಾಕಲಾಯಿತು. ಈ ಸರಣಿ ಅವಘಡಗಳ ಬಳಿಕ ಬಿಸಿಯೂಟ ಯೋಜನೆಯ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದೆ.

ADVERTISEMENT

ಈ ತಂಡಗಳು ಕಲಬುರಗಿ ವಿಭಾಗದ ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬಿಸಿಯೂಟ ಮತ್ತು ಎನ್‌ಜಿಒ ನಿರ್ವಹಣೆಯ ಅಡುಗೆ ಕೇಂದ್ರಗಳಿಗೆ ಭೇಟಿ ಕೊಡಲಿವೆ.

ಬಿಸಿಯೂಟಕ್ಕೆ ಅಗತ್ಯ ಇರುವ ಆಹಾರ ಧಾನ್ಯ ಮತ್ತು ತರಕಾರಿ ಖರೀದಿ ಪ್ರಕ್ರಿಯೆಯಿಂದ ಮಕ್ಕಳಿಗೆ ಊಟ ಬಡಿಸುವವರೆಗಿನ ಎಲ್ಲ ಹಂತಗಳಲ್ಲಿ ಆಹಾರ ಪದಾರ್ಥಗಳ ಗಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಲಿವೆ. ಸಮಸ್ಯೆಗಳ ನಿರ್ವಹಣೆಗೆ ಸೂಕ್ತ ಸಲಹೆಗಳನ್ನು ನೀಡಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ಮುಖ್ಯಶಿಕ್ಷಕರಿಗೆ ಅವಘಡಗಳು ಮರುಕಳಿಸದಂತೆ ಎಚ್ಚರಿಕೆಯೂ ಕೊಡಲಿವೆ.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಭಿವೃದ್ಧಿ ಉಪನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಪಿ.ಎಂ. ಪೋಷಣೆ ಶಿಕ್ಷಣಾಧಿಕಾರಿ ಮತ್ತು ಸಹಾಯಕ ನಿರ್ದೇಶಕರ ನೇತೃತ್ವದ ತಂಡಗಳು 20 ಅಂಶಗಳ ಎಸ್‌ಒಪಿಯನ್ನು ಪರಿಶೀಲಿಸಲಿವೆ. ಭೇಟಿಯ ವರದಿಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ತಂಡವಾರು ಕ್ರೋಢೀಕರಿಸಿ ನೇರವಾಗಿ ರಾಜ್ಯ ಕಚೇರಿಗೆ ಕಳುಹಿಸಲಾಗುತ್ತದೆ. ಒಂದು ಪ್ರತಿಯನ್ನು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಸಲ್ಲಿಸಲಾಗುತ್ತದೆ.

ಬಿಸಿಯೂಟ ಆಹಾರ ಸಿದ್ಧತೆ ಹಾಗೂ ವಿತರಣೆಯ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿರ್ವಹಣೆಯ ಮೇಲೆ ನಿಗಾ ಇರಿಸಲು ಐದು ಕ್ಷಿಪ್ರ ಕಾರ್ಯಾಪಡೆಗಳು ಶೀಘ್ರವೇ ತೊಡಗಿಸಿಕೊಳ್ಳಲಿವೆ
–ಬಸವರಾಜ ಗವನಹಳ್ಳಿ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.