ADVERTISEMENT

ಕೇಂದ್ರದ ತೆರಿಗೆ ನೀತಿ: ಉ.ಪ್ರದೇಶಕ್ಕೆ ₹ 333, ರಾಜ್ಯಕ್ಕೆ 12 ಪೈಸೆ; ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 8:05 IST
Last Updated 1 ನವೆಂಬರ್ 2024, 8:05 IST
   

ಕಲಬುರಗಿ: ‘ಕೇಂದ್ರ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿಯಿಂದಾಗಿ ₹ 100 ತೆರಿಗೆ ಕಟ್ಟುವ ಪ್ರದೇಶಕ್ಕೆ ವಾಪಸ್ ₹ 333 ಹೋಗುತ್ತಿದೆ. ಕರ್ನಾಟಕಕ್ಕೆ 12 ಪೈಸೆ ಮಾತ್ರ ವಾಪಸ್ ಬರುತ್ತಿದೆ. ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾದರಂತೂ ದಕ್ಷಿಣದ ರಾಜ್ಯಗಳು ತಮ್ಮ ಧ್ವನಿಯನ್ನೇ ಕಳೆದುಕೊಳ್ಳಲಿವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನಗರೇಶ್ವರ ಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಜಿಎಸ್ಟಿ, ಐಟಿ ರಫ್ತು, ಬಾಹ್ಯಾಕಾಶ ವಲಯದ ಉತ್ಪಾದನೆ, ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ತೆರಿಗೆ ಪಾಲನ್ನು ಕೇಂದ್ರಕ್ಕೆ ಸಲ್ಲಿಸುತ್ತಿದೆ. ಆದರೆ, ಕೇಂದ್ರದಿಂದ ವಾಪಸ್ ಬರುವ ಹಣದ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಶೇ 72ರಷ್ಟು ಖರ್ಚನ್ನು ರಾಜ್ಯದ ವಿವಿಧ ತೆರಿಗೆ ಮೂಲಗಳಿಂದ ಸಂಗ್ರಹಿಸಬೇಕಿದೆ’ ಎಂದರು.

‘₹ 100 ತೆರಿಗೆ ಪಾವತಿ ಮಾಡುವ ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರ ₹ 297, ಒಡಿಶಾಕ್ಕೆ ₹ 187 ಕೊಡುತ್ತಿದೆ. 11ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಕೇಂದ್ರದಿಂದ ಶೇ 21.10ರಷ್ಟು ತೆರಿಗೆ ಪಾಲು ವಾಪಸ್ ಬರುತ್ತಿತ್ತು. 15ನೇ ಹಣಕಾಸು ಆಯೋಗ ರಚನೆಯಾದ ಬಳಿಕ ಆ ಪ್ರಮಾಣ ಶೇ 15.8ಕ್ಕೆ ಇಳಿದಿದೆ. ಇದರಿಂದಾಗಿ ಪ್ರತಿವರ್ಷ ₹ 78 ಸಾವಿರ ಕೋಟಿ ಹಣ ಕಡಿತಗೊಂಡಿದೆ. ಈ ತೆರಿಗೆ ಅನ್ಯಾಯವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು’ ಎಂದು ಹೇಳಿದರು.

ADVERTISEMENT

‘ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗಳ ಬಳಿಕ ಲೋಕಸಭಾ ಸ್ಥಾನಗಳ ಸಂಖ್ಯೆ 545ರಿಂದ 846ಕ್ಕೆ ಏರಿಕೆಯಾಗಲಿದೆ. ಉತ್ತರ ಭಾರತದ ರಾಜ್ಯಗಳಿಗೆ 194 ಹೆಚ್ಚುವರಿ ಸ್ಥಾನಗಳು ಸಿಗಲಿವೆ. ದಕ್ಷಿಣ ಭಾರತಕ್ಕೆ ಕೇವಲ 23 ಸ್ಥಾನಗಳು ಸಿಗಲಿವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳು 20ಕ್ಕೆ ಕುಸಿಯಲಿವೆ. ಸುಮಾರು ಒಂದೂವರೆ ವರ್ಷದಲ್ಲಿ ಪುನರ್ ವಿಂಗಡಣೆ ಪ್ರಕ್ರಿಯೆ ಶುರುವಾಗಲಿದೆ. ಆಗ ರಾಜ್ಯದ ಹಿತಾಸಕ್ತಿ, ತೆರಿಗೆ ಅನ್ಯಾಯ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರದ ಧೋರಣೆಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ರಾಜ್ಯದ ಜನರಲ್ಲಿಯೂ ಜಾಗೃತಿ ಮೂಡಿಸಲಾಗುವುದು’ ಎಂದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ಜಿ. ನಮೋಶಿ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು., ಡಿಸಿಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ವೇದಿಕೆಯಲ್ಲಿದ್ದರು.

ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.