ಕಲಬುರಗಿ: ‘ಕನ್ನಡದ ಬಗ್ಗೆ ಎಲ್ಲರೂ ಕಾಳಜಿವಹಿಸಿ ಬಳಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಹೊರರಾಜ್ಯದಿಂದ ವೈದ್ಯಕೀಯ ಅಧ್ಯಯನಕ್ಕಾಗಿ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯವಾಗಿ ಕಲಿಯಬೇಕು’ ಎಂದು ಕೆಬಿಎನ್ ಆಸ್ಪತ್ರೆಯ ಡೀನ್ ಡಾ.ಸಿದ್ದೇಶ್ ಶಿರವಾರ ಹೇಳಿದರು.
ಇಲ್ಲಿನ ಕೆಬಿಎನ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಕರ್ನಾಟಕ ಕನ್ನಡ ಕನ್ನಡಿಗ ವಿಶೇಷ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಕಾಶವಾಣಿಯ ನಿವೃತ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ಮಾತನಾಡಿ, ‘ಕನ್ನಡ ಭಾಷೆಯ ಬಳಕೆಯ ಬಗ್ಗೆ ಕೀಳರಿಮೆ ಬಿಟ್ಟು ಕನ್ನಡದ ನಿತ್ಯ ಬಳಕೆ ಮಾಡಿದರೆ ಕನ್ನಡ ಭಾಷೆಯು ಉಳಿದು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಕೆಬಿಎನ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಶಂಕರ್ ಕರ್ನಾಟಕ–ಕನ್ನಡ–ಕನ್ನಡಿಗ ವಿಷಯ ಕುರಿತಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ನಂತರ ಪ್ರಬಂಧ, ಚಿತ್ರ ರಚನೆ, ಗಾಯನ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೈದ್ಯಕೀಯ ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಸಿದ್ದಲಿಂಗ ಚೇಂಗಟಿ, ಡಾ.ಚಂದ್ರಕಲಾ ಪಿ, ಕುಮಾರ್ ಹುಮನಾಬಾದ್, ಡಾ.ಶ್ರೀರಾಜ್, ಡಾ.ಆಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.