ADVERTISEMENT

ಚಿಂಚೋಳಿ: ವೇತನದಲ್ಲಿ 35 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ ಶಿಕ್ಷಕಿ

ಚಿಮ್ಮನಚೋಡ: ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕೊಡುಗೆ ನೀಡಿದ ಜ್ಞಾನೇಶ್ವರಿ ಎಂ.ಸಜ್ಜನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 4:38 IST
Last Updated 6 ನವೆಂಬರ್ 2024, 4:38 IST
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ಅವರು ವೈಯಕ್ತಿಕವಾಗಿ ಸಮವಸ್ತ್ರ ಕೊಡಿಸಿದರು
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ಅವರು ವೈಯಕ್ತಿಕವಾಗಿ ಸಮವಸ್ತ್ರ ಕೊಡಿಸಿದರು   

ಚಿಂಚೋಳಿ: ಒಂದು ಹುದ್ದೆಗೆ ಸೇರಿದಾಗ ಅವರು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಶಿಕ್ಷಕಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಮಕ್ಕಳಿಗೆ ಕೊಡುಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಎಲ್‌ಕೆಜಿ ಮತ್ತು ಯುಕೆಜಿ ಅಭ್ಯಾಸ ಮಾಡುತ್ತಿರುವ 35 ಮಕ್ಕಳಿಗೆ ಸಹಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ಅವರು ವೇತನದಲ್ಲಿ ಸಮವಸ್ತ್ರ ಕೊಡಿಸಿ, ಅವರ ನಲಿವಿಗೆ ಕಾರಣರಾಗಿದ್ದಾರೆ.

ಸರ್ಕಾರ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ದಾಖಲಾದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸುತ್ತಿದೆ. ಆದರೆ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಇದು ವಿಸ್ತರಣೆಯಾಗಿಲ್ಲ.

ADVERTISEMENT

‘ಸಹಶಿಕ್ಷಕಿ ಜ್ಞಾನೇಶ್ವರಿ ಎಂ.ಸಜ್ಜನ ಅವರು ಎಲ್‌ಕೆಜಿಯ 27 ಮತ್ತು ಯುಕೆಜಿಯ 8 ಸೇರಿ ಒಟ್ಟು 35 ಮಕ್ಕಳಿಗೆ ಸಮವಸ್ತ್ರ ಖರೀದಿಸಿ ತಂದು ವಿತರಿಸಿದ್ದಾರೆ. ಇದು ಇತರ ಶಿಕ್ಷಕರಿಗೆ ಪ್ರೇರಣೆ ನೀಡುವಂತಹದ್ದಾಗಿದೆ’ ಎಂದು ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಶ್ಲಾಘಿಸಿದರು.

ಮಂಗಳವಾರ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಸಿಆರ್‌ಪಿ ಕೃಷ್ಣ ರಾಠೋಡ್, ಮುಖ್ಯಶಿಕ್ಷಕ ಜಗನ್ನಾಥರಡ್ಡಿ ರಂಜೋಳ, ಚಂದ್ರಕಲಾ ಪಿರಡ್ಡಿ, ರಂಜಿತಾ ಸಿಂಧೆ, ವಿಜಯಲಕ್ಷ್ಮಿ, ಜ್ಯೋತಿ, ವಿಶಾಲಾಕ್ಷಿ, ಗಂಗಮ್ಮಾ, ಮಹಾನಂದಾ, ಪ್ರೇಮಾ, ಆಕಾಶ, ಜಾಫರ್, ಮಂಗಲಾ, ವಾಣಿಶ್ರೀ ಉಪಸ್ಥಿತರಿದ್ದರು.

ಇದೇ ವೇಳೆ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ಸಹ ಶಿಕ್ಷಕಿ(ಸಮವಸ್ತ್ರ ದಾನಿ)
ಬೇರೆ ತರಗತಿಯ ಮಕ್ಕಳು ಸಮವಸ್ತ್ರ ಧರಿಸಿ ಬಂದರೆ ಎಲ್‌ಕೆಜಿ – ಯುಕೆಜಿ ಪುಟಾಣಿಗಳು ಸಮವಸ್ತ್ರ ಇಲ್ಲದೇ ಬರುತ್ತಿದ್ದರು. ಇದನ್ನು ನೋಡಿದ ನಾನು ಅವರಿಗೆ ಆರಂಭದಿಂದಲೇ ಶಿಸ್ತು ಕಲಿಸಬೇಕೆಂದು ಸಮವಸ್ತ್ರ ಕೊಡಿಸಿದ್ದೇನೆ
ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ ಸಹ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.