ADVERTISEMENT

ಕಲಬುರ್ಗಿ: ಸಂಸದ, ಶಾಸಕರ ಮನೆ ಮುಂದೆ ಬೊಬ್ಬೆಹಾಕಿ ಪ್ರತಿಭಟನೆ

ವಿವಿಧೆಡೆ ಧರಣಿ ನಡೆಸಿದ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮುಖಂಡರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 10:47 IST
Last Updated 27 ಫೆಬ್ರುವರಿ 2021, 10:47 IST

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಎಲ್ಲ ಶಾಸಕರು ಹಾಗೂ ಸಂಸದರ ಮನೆ ಮುಂದೆ ಶನಿವಾರ ಗಂಟೆ ಬಾರಿಸುವ ಹಾಗೂ ಬಾಯಿ ಬಡಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.

ಕಲಬುರ್ಗಿ ನಗರದಲ್ಲಿರುವ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ರಾಜಕುಮಾರ ‍ಪಾಟೀಲ ತೆಲ್ಕೂರ, ಎಂ.ವೈ. ಪಾಟೀಲ, ಡಾ.ಅಜಯಸಿಂಗ್‌, ಡಾ.ಅವಿನಾಶ ಜಾಧವ ಹಾಗೂ ಸಂಸದ ಡಾ.ಉಮೇಶ ಜಾಧವ ಅವರ ಮನೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬೇರೆಬೇರೆ ಕಡೆ ಇರುವ ಮನೆಗಳ ಮುಂದೆಯೂ ಪ್ರತಿಭಟನೆ ಮಾಡಿದರು. ನಗರದಲ್ಲಿ ಒಬ್ಬರ ಮನೆ ಮುಗಿದ ಬಳಿಕ ಮತ್ತೊಬ್ಬರ ಮನೆಗೆ ಅಲೆದಾಡಿದ ಪ್ರತಿಭಟನಾಕಾರರು, ಎಲ್ಲರ ಮನೆ ಮುಂದೆಯೂ ಶಾಲಾ ಗಂಟೆಗಳನ್ನು ಬಾರಿಸಿದರು. ಬೊಬ್ಬೆ ಹಾಕುವ ಮೂಲಕ ತಮ್ಮ ಅಳಲು ತೋಡಿಕೊಂಡರು.

ಆದರೆ, ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಸಲುವಾಗಿ ಬಹುಪಾಲು ಶಾಸಕರು ಹಾಗೂ ಸಂಸದರು ಬೆಂಗಳೂರಿಗೆ ತೆರಳಿದ್ದರು. ಕಾರಣ, ಅವರ ಕುಟುಂಬ ವರ್ಗದವರು ಹಾಗೂ ಆಪ್ತ ಸಹಾಯಕರಿಗೇ ಮನವಿ ನೀಡಬೇಕಾಯಿತು.

ADVERTISEMENT

ತಮ್ಮ ಮನೆ ಮುಂದೆ ನಡೆದ ಧರಣಿ ಸ್ಥಳಕ್ಕೆ ಬಂದ ಶಾಸಕ ಎಂ.ವೈ. ಪಾಟೀಲ ಅವರು ಪ್ರತಿಭಟನಾಕಾರರ ದೂರು ಆಲಿಸಿದರು. ಈ ಸಂದರ್ಭ ಕೆಲ ಸಂಸ್ಥೆಗಳ ಮುಖ್ಯಸ್ಥರು ಶಾಸಕರ ಕಾಲಿಗೆ ಬಿದ್ದು, ನೆಲದ ಮೇಲೆ ಉರುಳಾಡಿದರು. ‘ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಅವರು ಸಾಲ ಬಾಧೆ ತಾಳದೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಸುಂಬಡ್‌ ಅವರೂ ಜಿಲ್ಲಾಧಿಕಾರಿ ಕಚೇರಿ ಎರುದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ. ಆದರೂ ಯಾರೂ ನಮ್ಮ ಅಳಲು ಕೇಳಿಲ್ಲ ಎಂದು ದೂರಿದರು.

1995ರಿಂದ 2015ರವರೆಗಿನ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಬೇಕು. ಕೆಕೆಆರ್‌ಡಿಬಿಯಲ್ಲಿರುವ ಶೈಕ್ಷಣಿಕ ಅನುದಾನವನ್ನು ಸೌಕರ್ಯ ನೀಡಲು ಬಳಸಬೇಕು. ಆರ್‌ಟಿಇ ಸಹಾಯಧವನ್ನು ಶೀಘ್ರ ಬಿಡುಗಡೆ ಮಾಡಬೇಕು. ಆದಷ್ಟು ಬೇಗ 1ನೇ ತರಗತಿಯಿಂದ ಎಲ್ಲ ತರಗತಿಗಳನ್ನು ಆರಂಭಿಸಬೇಕು. ಸಂಸ್ಥೆಗಳ ನವೀಕರಣಕ್ಕೆ ಇರುವ ಅಸಂಬದ್ಧ ನಿಯಮಗಳನ್ನು ಹಿಂದಕ್ಕೆ ಪಡೆಯಬೇಕು. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು. ಮುಂದಿನ ಶೈಕ್ಷಣಕ ವರ್ಷದ ತರಗತಿಗಳು ಆರಂಭವಾಗುವವರೆಗೂ ಬ್ಯಾಂಕ್‌ ಸಾಲ, ವಾಹನ ಸಾಲಗಳ ಕಂತು ತುಂಬಲು ಕಾಲಾವಕಾಶ ಕೊಡಿಸಬೇಕು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ 100 ಸೈನಿಕ ಶಾಲೆಗಳಲ್ಲಿ 2 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲೇ ಸ್ಥಾಪಿಸಬೇಕು ಎಂಬ ಇತರ ಬೇಡಿಕೆಗಳನ್ನೂ ಮುಂದಿಟ್ಟರು.

ಒಕ್ಕೂಟದ ಅಧ್ಯಕ್ಷ ಸುನೀಲ್‌ ಹುಡಗಿ, ಜಿಲ್ಲಾ ಸಂಚಾಲಕ ಅರುಣಕುಮಾರ ಪೋಚಾಲ, ಸಾಹೇಬಗೌಡ ಪುರದಾಳ, ಬಿ.ಜಿ. ಯಾಳಗಿ, ಶಿವಕುಮಾರ ಘಾವರಿಯಾ, ಚನ್ನಬಸಪ್ಪ ಗಾರಂಪಳ್ಳಿ, ವಿಜಯಕುಮಾರ ಸೂರನೂರ, ಭೀಮಶೆಟ್ಟಿ ಮುರುಡಾ, ಸಿದ್ದಾರೆಡ್ಡಿ, ಬಾಬುರಾವ್‌ ಸುಳ್ಳದ್, ಮಹ್ಮದ್‌ ಇಬ್ರಾಹಿಂ ಪಟೇಲ್, ಗೊಲ್ಲಾಳಪ್ಪ ಬಿರಾದಾರ, ರಾಜಶೇಖರ ಮರದಿ, ಮಹೇಶ ಧರಿ, ನಾಗರತ್ನಾ ನಂದ್ಯಾಳ, ಗುಂಡಮ್ಮ ಮಡಿವಾಳ ಹಲವರು ಇದ್ದರು.

ವಿಧಾನಸಭೆಯಲ್ಲಿ ಚರ್ಚೆ: ಭರವಸೆ
‘ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವುದು ಈಗ ಕಷ್ಟವಾಗಿದೆ. ಸ್ವತಃ ಸಂಸ್ಥೆ ನಡೆಸುತ್ತಿರುವುದರಿಂದ ನಿಮ್ಮ ಸಂಕಟ ಏನೆಂದು ನನಗೂ ಅರಿವಾಗಿದೆ. ಒಕ್ಕೂಟದ ಬೇಡಿಕೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸುತ್ತೇನೆ.ಕಾಂಗ್ರೆಸ್‌ನ ಎಲ್ಲ ಶಾಸಕರೊಂದಿಗೆ ಮಾತನಾಡಿ ನಿಮಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಎಂ.ವೈ. ಪಾಟೀಲ ಭರವಸೆ ನೀಡಿದರು.

ತಮ್ಮ ಮನೆ ಮುಂದೆ ನಡೆದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ‘ಶಿಕ್ಷಣ ಸಂಸ್ಥೆಗಳ ಮುಖಂಡರು ಆತ್ಮಹತ್ಯೆಯಂಥ ಕೆಲಸಕ್ಕೆ ಮುಂದಾಗಬೇಡಿ. ಧೈರ್ಯದಿಂದ ಸಮಸ್ಯೆ ಎದುರಿಸಿ. ಈ ಬಾರಿಯ ಬಜೆಟ್‌ನಲ್ಲಿ ಅನುದಾನದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡುತ್ತೇನೆ. ಎಲ್ಲ ಬೇಡಿಕೆಗಳು ಸಾಧ್ಯವಾಗದಿದ್ದರೂ ಕಾಯ್ದೆ ಪ್ರಕಾರ ಸಿಗುವ ಸೌಕರ್ಯಗಳನ್ನಾದರೂ ಕೊಡಲು ಕೊರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.