ADVERTISEMENT

ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿ ಸಮಸ್ಯೆ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ!

ಸಂಪರ್ಕಕ್ಕೆ ಸಿಗದ ಸಹಾಯವಾಣಿ– ಅರ್ಜಿದಾರರ ಅಳಲು

ಮಲ್ಲಿಕಾರ್ಜುನ ನಾಲವಾರ
Published 2 ಮಾರ್ಚ್ 2024, 5:26 IST
Last Updated 2 ಮಾರ್ಚ್ 2024, 5:26 IST
ಯುವನಿಧಿ ಲೋಗೊ
ಯುವನಿಧಿ ಲೋಗೊ   

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಯುವನಿಧಿ’ ಯೋಜನೆಯ ನೋಂದಣಿಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ತವರಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪದವೀಧರ ಅರ್ಜಿದಾರರಿಂದ ಬೇಸರ ವ್ಯಕ್ತವಾಗುತ್ತಿದೆ.

‘ಯುವನಿಧಿ’ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು 2022–23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಯುವನಿಧಿ ಯೋಜನೆಯ ಹಣವನ್ನು ನೇರವಾಗಿ ಜಮೆ ಮಾಡಲಾಗುತ್ತಿದೆ.

ನೋಂದಣಿಗೆ ಚಾಲನೆ ದೊರೆತು ಎರಡು ತಿಂಗಳಾಗಿದ್ದರೂ ಕೆಲವು ಪದವೀಧರರ ನೋಂದಣಿ ಪ್ರಕ್ರಿಯೆ ಪೂರ್ಣವಾಗುತ್ತಿಲ್ಲ. ಆಧಾರ್ ಕಾರ್ಡ್ ಹಾಗೂ ಪದವಿ ಪರೀಕ್ಷೆಯ ಪ್ರವೇಶಾತಿ ಸಂಖ್ಯೆಗಳು ನಮೂದಿಸಿದ ನಂತರದ ಪ್ರಕ್ರಿಯೆಯು ಮುಂದಕ್ಕೆ ಹೋಗುತ್ತಿಲ್ಲ ಎಂಬ ಮಾತುಗಳು ಅರ್ಜಿದಾರರಿಂದ ಕೇಳಿಬರುತ್ತಿವೆ.

ADVERTISEMENT

2022–23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದಿದ್ದರೂ ರಾಷ್ಟ್ರೀಯ ಶೈಕ್ಷಣಿಕ ಠೇವಣೆಯಲ್ಲಿ (ಎನ್‌ಎಡಿ) ಡೇಟಾ ಕಂಡುಬರದಿದ್ದರೆ ದಯವಿಟ್ಟು ನಿಮ್ಮ ಸಂಬಂಧಿತ ಕಾಲೇಜು, ಬೋರ್ಡ್ ಅಥವಾ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಎಂಬ ಸಂದೇಶ ಬರುತ್ತಿದೆ. ಸಂಬಂಧಿತ ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ, ವಿಶ್ವವಿದ್ಯಾಲಯದತ್ತ ಬೆರಳು ತೋರಿಸುತ್ತಿದ್ದಾರೆ. ಆದರೆ, ವಿವಿಯಿಂದ ಸಮಸ್ಯೆ ಇತ್ಯರ್ಥದ ಉತ್ತರವೇ ಸಿಗುತ್ತಿಲ್ಲ ಎಂದು ಅರ್ಜಿದಾರರು ಅಲವತ್ತುಕೊಳ್ಳುತ್ತಿದ್ದಾರೆ.

‘ಗುಲಬರ್ಗಾ ವಿವಿ ವ್ಯಾಪ್ತಿಯ ಯಾದಗಿರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು 2022–23ನೇ ಸಾಲಿನಲ್ಲಿ ಪಡೆದಿದ್ದೆ. ಯುವನಿಧಿ ಪೋರ್ಟಲ್‌ನಲ್ಲಿ ನೋಂದಣಿ ಆಗುತ್ತಿಲ್ಲ. ಆಧಾರ್ ಕಾರ್ಡ್, ಹಾಲ್‌ಟಿಕೆಟ್ ನಂಬರ್ ನೀಡಿದ ಬಳಿಕ ಸ್ಥಗಿತವಾಗುತ್ತಿದೆ’ ಎಂದು ಪದವೀಧರೆ ಮಂದಾಕಿನಿ ದೋಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿನವರು ವಿವಿಯನ್ನು ಕೇಳಿ ಎನ್ನುತ್ತಾರೆ. ಆದರೆ, ವಿವಿಯಿಂದ ಸ್ಪಷ್ಟ ಉತ್ತರ ಬರುತ್ತಿಲ್ಲ. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ವಾಡಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಸ್ಪಂದನೆ ಸಿಗಲಿಲ್ಲ’ ಎಂದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಗುಲಬರ್ಗಾ ವಿವಿಯ ಮೌಲ್ಯಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ, ‘2021–22 ಮತ್ತು 2022–23ನೇ ಸಾಲಿನಲ್ಲಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಎನ್‌ಎಡಿನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆದರೆ, ಈ ಬಗ್ಗೆ ಕೆಲವರಿಂದ ದೂರುಗಳು ಬಂದಿದ್ದು, ಅವರಿಗಾಗಿ ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಅರ್ಜಿದಾರರ ಆ ಸಂಖ್ಯೆಯನ್ನು ಸಂಪರ್ಕಿಸಿದರೆ ತಕ್ಷಣವೇ ಇತ್ಯರ್ಥಪಡಿಸಲಾಗುವುದು’ ಎಂದರು.

‘ಕೆಲವರ ಪೇಪರ್‌ಗಳು ತೇರ್ಗಡೆಯಾಗದೆ ಬ್ಯಾಕ್‌ ಉಳಿಸಿಕೊಂಡಿರುತ್ತಾರೆ. ಅಂತಹ ಅರ್ಜಿದಾರರ ತಾಂತ್ರಿಕ ಸಮಸ್ಯೆ ಕಂಡುಬರುತ್ತದೆ. ಅವುಗಳನ್ನು ಬಗೆಹರಿಸಲಾಗುತ್ತಿದೆ’ ಎಂದು ತಿಳಿಸಿದರು.

ನೋಂದಣಿಗೂ ಮುನ್ನ ವಿಶ್ವವಿದ್ಯಾಲಯದವರು ಪದವೀಧರರ ಎಲ್ಲ ಅಂಕಪಟ್ಟಿಗಳು ಎನ್‌ಎಡಿಯಲ್ಲಿ ಅಪ್‌ಲೋಡ್ ಮಾಡಿರಬೇಕು. ಈ ಬಗ್ಗೆ ಮಾಹಿತಿ ಪಡೆದು ಇತ್ಯರ್ಥ ಪಡಿಸಲಾಗುವುದು.
-ಡಾ.ಶರಣಪ್ರಕಾಶ ಪಾಟೀಲ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.