ಚಿತ್ತಾಪುರ: ತಾಲ್ಲೂಕಿನ ಆಲೂರು ಗ್ರಾಮದ ಸರ್ಕಾರಿ ಸರ್ವೆ ನಂಬರ್ 48ರಲ್ಲಿನ ಸರ್ಕಾರಿ ಗೈರಾಣು ಜಮೀನು ಒತ್ತುವರಿ ಮಾಡಿಕೊಂಡು ಮಠ, ಶಿವಲಿಂಗ ಸ್ಥಾಪನೆ, ಬಸವಣ್ಣ ಮೂರ್ತಿ ಕಟ್ಟೆ, ಮನೆ ಕಟ್ಟಿಸಿರುವುದು ಹಾಗೂ ಸರ್ಕಾರಿ ಜಮೀನು ವ್ಯಕ್ತಿಯೊಬ್ಬರ ಹೆಸರಿಗೆ ಖಾತಾ ಮಾಡಿ ಹೆಸರು ಪಹಣಿಯಲ್ಲಿ ಸೇರ್ಪಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಗೈರಾಣು ಜಮೀನು ಇರುವ ಸರ್ವೆ ನಂ.48ರಲ್ಲಿ ಒಟ್ಟು 18 ಎಕರೆ 24 ಗುಂಟೆ ಜಮೀನಿದೆ. ಈ ಜಮೀನಿನಲ್ಲಿ ವ್ಯಕ್ತಿಯೊಬ್ಬರ ಹೆಸರಿಗೆ 3 ಎಕರೆ ಖಾತಾ ಮಾಡಿ ಅವರ ಹೆಸರು ಪಹಣಿಯಲ್ಲಿ ನಮೂದಿಸಲಾಗಿದೆ. ವ್ಯಕ್ತಿಯೊಬ್ಬರ ಹೆಸರಿಗೆ ಖಾತಾ ಮಾಡಿಕೊಟ್ಟಿದ್ದು ಅಧಿಕೃತವೋ ಅಥವಾ ಅನಧಿಕೃತವೋ ಎಂಬುದು ಕಂದಾಯ ಅಧಿಕಾರಿಗಳು ದಾಖಲೆ ಪರಿಶೀಲಿಸಿ, ತನಿಖೆ ಮಾಡಿ ಸತ್ಯ ಹೊರಹಾಕುವ ಕೆಲಸ ಮಾಡಬೇಕಿದೆ.
ಆಲೂರು–ಸೂಲಹಳ್ಳಿ ಸಂಪರ್ಕ ರಸ್ತೆ ಇದೇ ಸರ್ಕಾರಿ ಜಮೀನಿನಲ್ಲಿ ಹಾದು ಹೋಗಿದೆ. ಎರಡು ಎಕರೆಯಷ್ಟು ಜಮೀನನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ರಸ್ತೆ ಪಕ್ಕದಲ್ಲಿನ ಅಂದಾಜು ಮೂರು ಎಕರೆಯಷ್ಟು ಸರ್ಕಾರಿ ಜಮೀನನ್ನು ಸ್ವಾಮೀಜಿಯೊಬ್ಬರು ಒತ್ತುವರಿ ಮಾಡಿಕೊಂಡು ಮಠದ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಮಠದ ಮುಂದೆ ಎರಡು ಶಿವಲಿಂಗ ಸ್ಥಾಪನೆ ಹಾಗೂ ಎರಡು ಬಸವಣ್ಣ ಮೂರ್ತಿ ಸ್ಥಾಪನೆಗೆ ಪ್ರತ್ಯೇಕ ದೊಡ್ಡ ಕಟ್ಟೆಗಳನ್ನು ಕಟ್ಟಿಸಿ ಶಿವಲಿಂಗ ಮತ್ತು ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ರಸ್ತೆಯ ಒಂದು ಪಕ್ಕದಲ್ಲಿ ಸರ್ಕಾರಿ ಜಮೀನಿನಲ್ಲಿ ಮಠ ಕಟ್ಟಿರುವುದನ್ನು ಗಮನಿಸಿದ ಕೆಲವರು ರಸ್ತೆಯ ಮತ್ತೊಂದು ಪಕ್ಕದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಈಗಾಗಲೇ ಆರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮತ್ತೆ ಕೆಲವರು ಕಟ್ಟಿರುವ ಮನೆಗಳ ಪಕ್ಕದಲ್ಲಿಯೇ ನಿವೇಶನಗಳ ಸರಹದ್ದು ರೂಪಿಸಿಕೊಂಡು ಕಲ್ಲುಗಳನ್ನು ತಂದು ಹಾಕಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ.
ಆಲೂರು ಗ್ರಾಮದಲ್ಲಿ ಪ್ರತಿ ಎಕರೆಗೆ ₹19 ಲಕ್ಷ ಮಾರುಕಟ್ಟೆ ಬೆಲೆ ಇದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗುತ್ತಿದೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಈ ಹಿಂದೆ ಅಕ್ರಮವಾಗಿ ಕಲ್ಲಿನ ಗಣಿಗಾರಿಕೆ ನಡೆಸಿ ಗಣಿ ಸಂಪತ್ತು ಲೂಟಿ ಮಾಡಿದ್ದಾರೆ. ವ್ಯಕ್ತಿಯೊಬ್ಬರಿಗೆ 3 ಎಕರೆ ಖಾತಾ ಮಾಡಿದ ನಂತರ ಹೆಸರಿಗಷ್ಟೇ ಪ್ರಸಕ್ತ ಸಾಲಿನ ಪಹಣಿಯಲ್ಲಿ 15 ಎಕರೆ 24 ಗುಂಟೆ ಜಮೀನು ಉಳಿದಿದೆ. ಆದರೆ ಬಹಳಷ್ಟು ಜಮೀನು ಅನಧಿಕೃತವಾಗಿ ಒತ್ತುವರಿಯಾಗಿದೆ.
‘ಬಹಳಷ್ಟು ದೇವಸ್ಥಾನಗಳು ಸರ್ಕಾರಿ ಜಮೀನಿನಲ್ಲಿವೆ. ಸನ್ಯಾಸಿಯಾಗಿರುವ ನಾನು 20 ವರ್ಷಗಳಿಂದ ಭೀಮಣ್ಣ ತಾತಾ ಹೆಸರಿನಲ್ಲಿ ಮಠ ಕಟ್ಟಿಕೊಂಡು ವಾಸ ಮಾಡುತ್ತಿದ್ದೇನೆ. ಬಹಳ ಕಡೆಗೆ ದೇವಸ್ಥಾನಗಳು ಸರ್ಕಾರಿ ಜಮೀನಿನಲ್ಲಿವೆ. ಸರ್ಕಾರವೇ ನಮ್ಮ ಮಠಕ್ಕೆ ಜಾಗದ ವ್ಯವಸ್ಥೆ ಮಾಡಿಕೊಡಬಹುದು’ ಎಂದು ಮಠದ ಚಂದ್ರಶೇಖರ ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಗ್ರಾಮ ಆಡಳಿತಾಧಿಕಾರಿಯಿಂದ ಸ್ಥಳ ಪರಿಶೀಲಿಸಿ ವರದಿ ತರಿಸಿಕೊಂಡು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡುತ್ತೇವೆ. ವಿಚಾರಣೆ ಮಾಡಿದ ನಂತರ ಒತ್ತುವರಿಯಾಗಿದ್ದರೆ ತೆರವುಗೊಳಿಸುತ್ತೇವೆನಾಗಯ್ಯ ಹಿರೇಮಠ ತಹಶೀಲ್ದಾರ್ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.