ADVERTISEMENT

ಕಲಬುರಗಿ: ಡಿ.16ರಿಂದ ಮಂದಿರ ರಕ್ಷಣೆ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 20:22 IST
Last Updated 27 ನವೆಂಬರ್ 2023, 20:22 IST
ಗುರುಪ್ರಸಾದ ಗೌಡ
ಗುರುಪ್ರಸಾದ ಗೌಡ   

ಕಲಬುರಗಿ: ‘ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಡಿಸೆಂಬರ್ 16 ಮತ್ತು 17ರಂದು ಮಂದಿರ ರಕ್ಷಣೆಯ ಅಧಿವೇಶನ ಆಯೋಜಿಸಲಾಗುವುದು’ ಎಂದು ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ತಿಳಿಸಿದರು.

‘ಬೆಂಗಳೂರಿನ ಬಸವೇಶ್ವರ ನಗರದ ಗಂಗಯ್ಯ ತಿಮ್ಮಯ್ಯ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ರಾಜ್ಯದ ಕಾನೂನು ಪರಿಣಿತರು, ವಕೀಲರು, ದೇವಸ್ಥಾನಗಳ ಮುಖಂಡರು ಪಾಲ್ಗೊಳ್ಳುವರು. ಸರ್ಕಾರದ ಹಿಡಿತದಲ್ಲಿ ಇರುವ ದೇವಸ್ಥಾನಗಳನ್ನು ಕಾನೂನಿನ ಚೌಕಟ್ಟಿನ ಮೂಲಕ ವಶಕ್ಕೆ ಪಡೆದು, ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಸುಮಾರು 34,000 ದೇವಸ್ಥಾನಗಳಿವೆ. ಅವುಗಳಲ್ಲಿ ಬಹುತೇಕ ಸರ್ಕಾರದ ಅಧೀನದಲ್ಲಿ ಇವೆ. ದೇವಸ್ಥಾನಗಳಿಗೆ ಬರುತ್ತಿರುವ ಹುಂಡಿಯ ಹಣ, ಮಳಿಗೆಗಳ ಬಾಡಿಗೆ, ಇತರೆ ದುಡ್ಡು ಸರ್ಕಾರದ ಖಜಾನೆಗೆ ಹೋಗುತ್ತಿದೆ. ಆದರೆ, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಸರ್ಕಾರ ಸರಿಯಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ಹೀಗಾಗಿ, ದೇವಸ್ಥಾನಗಳನ್ನು ಹಿಂದೂ ಸಂಘಟನೆಗಳ ವಶಕ್ಕೆ ಪಡೆದು ಅವುಗಳನ್ನು ಅಭಿವೃದ್ಧಿ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ದೇವಸ್ಥಾನ ರಕ್ಷಣೆ ಮಹಾ ಸಂಘ ರಚಿಸುತ್ತೇವೆ’ ಎಂದರು.

ADVERTISEMENT

ದೇವಸ್ಥಾನ ಆಸ್ತಿ ಒತ್ತವರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇರುವ ದೇವಸ್ಥಾನಗಳ ಆಸ್ತಿ ವಿವರವನ್ನು ಕಲೆ ಹಾಕಲಾಗುವುದು. ಒತ್ತುವರಿ ಮಾಡಿಕೊಳ್ಳಲಾದ ದೇವಸ್ಥಾನದ ಆಸ್ತಿಯನ್ನು ಕಾನೂನಿನ ಹೋರಾಟದ ಮೂಲಕ ವಾಪಸ್ ಪಡೆಯುತ್ತೇವೆ. ಅದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು’ ಎಂದರು.

‘ಹಿಂದೂ ರಾಷ್ಟ್ರ ನಿರ್ಮಾಣ ಆಗುವವರೆಗೂ ಹಿಂದೂ ಜನಜಾಗೃತಿ ವೇದಿಕೆಯು ಹೋರಾಟ, ಸಮಾವೇಶಗಳನ್ನು ಮಾಡಲಿದೆ. ಈ ಮೂಲಕ ಪ್ರತಿಯೊಬ್ಬರಲ್ಲಿ ಹಿಂದೂ ರಾಷ್ಟ್ರದ ಕುರಿತು ಜಾಗೃತಿ ಮೂಡಿಸಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಮನ್ವಯಕ ವೆಂಕಟರಮಣ ನಾಯಕ, ಮುಖಂಡ ಲಕ್ಷ್ಮಿಕಾಂತ ಸ್ವಾದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.