ಕಲಬುರಗಿ: ಪುರುಷರ ಐಟಿಎಫ್ ಟೆನಿಸ್ ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಟೆನಿಸ್ ಅಂಗಣ ಹಲವು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ದೇಶಿಯ ಹಾಗೂ ವಿದೇಶಿ ಆಟಗಾರರು ಒಂದು ವಾರ ಪೂರ್ತಿ ಜಿಲ್ಲೆಯ ಟೆನಿಸ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.
ಅಂಗಣದಲ್ಲಿ ಆಟಗಾರರು ಬೆವರು ಹರಿಸುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ನಗರದ ಶಿಕ್ಷಣ ಸಂಸ್ಥೆಗಳೂ ಕೂಡ ಟೆನಿಸ್ ಪ್ರೇಮ ಮೆರೆದವು. ತಮ್ಮ ಶಾಲೆಯ ಮಕ್ಕಳನ್ನು ಟೆನಿಸ್ ಪಂದ್ಯ ವೀಕ್ಷಣೆಗೆ ಕಳುಹಿಸುವ ಮೂಲಕ ಟೆನಿಸ್ ಆಟದ ಮೇಲಿನ ಪ್ರೇಮವನ್ನು ಹೆಚ್ಚಿಸಿದವು.
ಫೈನಲ್ ಹಣಾಹಣಿ ಇಂದು: ಪುರಷರ ಐಟಿಎಫ್ ಟೆನಿಸ್ ಟೂರ್ನಿಯು ಹೊಸ ಚಾಂಪಿಯನ್ ಉದಯಕ್ಕೆ ಸಾಕ್ಷಿಯಾಗಲಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ತಮಿಳುನಾಡಿನ ರಾಮಕುಮಾರ್ ರಾಮನಾಥನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಭಾನುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಹಾಗೂ 2ನೇ ಶ್ರೇಯಾಂಕದ ರಷ್ಯಾದ ಬಾಗ್ದಾನ್ ಬಾಬ್‌ರೋವ್ ಅವರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಸುಲ್ತಾನೋವ್, ಮುಂಬೈ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೇರಿದ್ದರು. ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಬಾಬ್‌ರೋವ್ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸಿದ್ದರು. ಈಗ ಮತ್ತೆ ಬಾಬ್‌ರೋವ್ ಎದುರಾಳಿಯಾಗಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸ ಇಮ್ಮಡಿಯಾಗಿದೆ. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಸುಲ್ತಾನೋವ್, ಬಾಬ್‌ರೋವ್ ಅವರಿಗಿಂತ 167 ಸ್ಥಾನ ಮೇಲಿದ್ದಾರೆ. ಅವರು ಸೆಮಿಯಲ್ಲಿ ಭಾರತದ ದೇವ್ ಜೇವಿಯಾ ಮತ್ತು ಕ್ವಾರ್ಟರ್‌ನಲ್ಲಿ ರಷ್ಯಾದ ಮ್ಯಾಕ್ಸಿಂ ಝುಕೋವರನ್ನು ಪರಾಭವಗೊಳಿಸಿದ್ದರು.
ಇತ್ತ ಬಾಬ್‌ರೋವ್, ಮುಂಬೈ ಸೋಲಿಗೆ ತಿರುಗೇಟು ನೀಡಲು ಕಾಯುತ್ತಿದ್ದಾರೆ. 395 ಎಟಿಪಿ ರ‍್ಯಾಂಕಿಂಗ್ ಹೊಂದಿರುವ ಅವರು, ಸೆಮಿಫೈನಲ್‌ನಲ್ಲಿ ಅಮೆರಿಕದ ನಿಕ್ ಚಾಪೆಲ್ ಅವರನ್ನು ಸೋಲಿಸಿ ಫೈನಲ್‌ಗೇರಿದ್ದು, ಪ್ರಶಸ್ತಿಯನ್ನು ಎತ್ತಿಹಿಡಿಯುವ ವಿಶ್ವಾಸದಲ್ಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ 5ನೇ ಶ್ರೇಯಾಂಕದ 19 ವರ್ಷ ಆರ್ಯನ್ ಷಾ ವಿರುದ್ಧ ಗೆಲುವು ಸಾಧಿಸಿದ್ದರು.
ಡಬಲ್ಸ್ ಪ್ರಶಸ್ತಿ ವಿತರಣೆ: ಡಬಲ್ಸ್ ಪ್ರಶಸ್ತಿ ಗೆದ್ದ ರಷ್ಯಾದ ಬಾಬ್‌ರೋವ್–ಅಗಾಫೋನೊವ್ ಜೋಡಿಗೆ ಯುವಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯದ ಆಯುಕ್ತ ಚೇತನ್ ಆರ್. ಅವರು ಪ್ರಶಸ್ತಿ ವಿತರಿಸಿದರು. ರನ್ನರ್ ಅಪ್ ಜೋಡಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪ್ರಶಸ್ತಿ ವಿತರಿಸಿದರು.
ಬಳಿಕ ಚೇತನ್‌ಕುಮಾರ್ ಆರ್. ಮಾತನಾಡಿ, ‘ಸತತ ಎರಡನೇ ಬಾರಿಗೆ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾಗಿದೆ. ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಪ್ರತಿಭೆಗಳ ಉದಯಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದರು.
ಟೂರ್ನಿಯ ನಿರ್ದೇಶಕ ಪೀಟರ್ ವಿಜಯಕುಮಾರ, ಪುನೀತ್ ಗುಪ್ತಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಎಂ., ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ತರಬೇತುದಾರರಾದ ಸಂಜಯ ಬಾಣಾದ, ಪ್ರವೀಣ ಪುಣೆ, ಅಂಪೈರ್‌ಗಳು, ಬಾಲ್‌ಬಾಯ್–ಗರ್ಲ್ಸ್‌ಗಳು ಹಾಜರಿದ್ದರು.
ಸಿಂಗಲ್ಸ್ ಫೈನಲ್ ಪಂದ್ಯದ ಆರಂಭ: ಬೆಳಿಗ್ಗೆ 10.30ಕ್ಕೆ
ರನ್ನರ್ ಅಪ್ ಚಾಪೆಲ್–ನಿತಿನ್ ಜೋಡಿಗೆ ಅಭಿನಂದನೆಗಳು. ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸವಿದೆ. ಮುಂದಿನ ಬಾರಿಯೂ ಟೂರ್ನಿಯಲ್ಲಿ ಪಾಲ್ಗೊಳ್ಳುವೆಬಾಗ್ದಾನ್ ಬಾಬ್‌ರೋವ್ ಡಬಲ್ಸ್ ಪ್ರಶಸ್ತಿ ವಿಜೇತ ರಷ್ಯಾ ಆಟಗಾರ
ಕರ್ನಾಟಕಕ್ಕೆ ನಾನು ಎರಡನೇ ಬಾರಿಗೆ ಬರುತ್ತಿದ್ದೇನೆ. ಇದೊಂದು ಅತ್ಯುತ್ತಮ ಟೂರ್ನಿಯಾಗಿತ್ತು. ಇಂದಿನ ದಿನ ನನಗೆ ಅವಿಸ್ಮರಣೀಯವಾಗಿದೆ. ಮುಂದಿನ ಬಾರಿಯೂ ಬರುವೆನಿತಿನ್ ಕುಮಾರ್ ಸಿನ್ಹಾ ರನ್ನರ್ ಅಪ್ ಆಟಗಾರ
ಅಂಕಿ ಅಂಶ 232 ಉಜ್ಬೇಕಿಸ್ತಾನದ ಸುಲ್ತಾನೋವ್ ಎಟಿಪಿ ರ‍್ಯಾಂಕಿಂಗ್ 395 ರಷ್ಯಾದ ಬಾಗ್ದಾನ್ ಬಾಬ್‌ರೋವ್ ಎಟಿಪಿ ರ‍್ಯಾಂಕಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.