ADVERTISEMENT

ಕಲಬುರಗಿ: ಐಟಿಎಫ್‌ ಟೆನಿಸ್‌ ಟೂರ್ನಿಗೆ ಅದ್ದೂರಿ ತೆರೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:40 IST
Last Updated 24 ನವೆಂಬರ್ 2024, 15:40 IST
ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಸಂಭ್ರಮದ ಕ್ಷಣ. ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಸಂಭ್ರಮದ ಕ್ಷಣ. ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಪುರುಷರ ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿಯ ಚಾಂಪಿಯನ್‌ ಸುಲ್ತಾನೋವ್‌ ಹಾಗೂ ರನ್ನರ್‌ ಅಪ್‌ ಬಾಬ್‌ರೋವ್‌ ಅವರಿಗೆ ಪ್ರಶಸ್ತಿ ವಿತರಿಸುವ ಮೂಲಕ ಟೂರ್ನಿಗೆ ಅದ್ದೂರಿಯಾಗಿ ತೆರೆ ಎಳೆಯಲಾಯಿತು.

ದೇಶ–ವಿದೇಶಗಳಿಂದ ಬಂದಿದ್ದ ಟೆನಿಸ್‌ ತಾರೆಯರು ಒಂದು ವಾರ ಭರಪೂರ ಟೆನಿಸ್‌ ರಸದೌತಣ ಬಡಿಸಿದರು. ಜತೆಗೆ ನೂರಾರು ಸಿಹಿ ನೆನಪುಗಳೊಂದಿಗೆ ತವರಿಗೆ ಮರಳಿದರು. ಮಹಿಳೆಯರು, ಮಕ್ಕಳು, ಯುವಕ–ಯುವತಿಯರು ಬಂದು, ಟೆನಿಸ್‌ ರೋಚಕತೆಯನ್ನು ಕಣ್ತುಂಬಿಕೊಂಡರು. 12 ಲೈನ್‌ ಅಂಪೈರ್‌ಗಳು, 50 ಬಾಲ್‌ ಬಾಯ್ಸ್‌ ಮತ್ತು ಗರ್ಲ್ಸ್‌ಗಳು ಆಟಗಾರರಿಗೆ ನೆರವಾದರು. 

ಟೆನಿಸ್‌ ಮಾಜಿ ಆಟಗಾರರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಹಾಗೂ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಪ್ರಶಸ್ತಿ ವಿತರಿಸಿದರು. 

ADVERTISEMENT

ಬಳಿಕ ಶಶೀಲ್‌ ನಮೋಶಿ ಮಾತನಾಡಿ, ‘ವಿಶ್ವ ಟೆನಿಸ್‌ನ ದೇಶಗಳ ಪಟ್ಟಿಯಲ್ಲಿ ಕಲಬುರಗಿಯ ಹೆಜ್ಜೆಗುರುತುಗಳು ಬಲವಾಗಿ ಮೂಡುತ್ತಿವೆ. ಟೂರ್ನಿಯ ಆಯೋಜನೆ ನಿರಂತರ ನಡೆಯಬೇಕು. ಇದರಿಂದ ಈ ಭಾಗದ ಟೆನಿಸ್‌ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿದೆ. ಟೂರ್ನಿಯ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದರು. 

ಕೃಷ್ಣ ಬಾಜಪೇಯಿ ಮಾತನಾಡಿ, ‘ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ’ ಎಂದು ಹೇಳಿದರು.

ಕೆಎಸ್‌ಎಲ್‌ಟಿಎ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಮಾತನಾಡಿ, ‘ಕಲಬುರಗಿಯಲ್ಲಿ ಟೆನಿಸ್ ಅಭಿವೃದ್ಧಿಯಾಗಿರುವುದನ್ನು ಗಮನಿಸಿದರೆ ನನಗೆ ಹೆಮ್ಮೆಯೆನಿಸುತ್ತಿದೆ. ಜಿಲ್ಲೆಯಲ್ಲಿರುವಷ್ಟು ಕ್ರೀಡಾ ಸೌಲಭ್ಯಗಳು ಬೇರೆ ಜಿಲ್ಲೆಯಲ್ಲಿ ಇಲ್ಲ. ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳಿದ್ದು, ಇದನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು. ಶಿಕ್ಷಣದೊಂದಿಗೆ ಕ್ರೀಡೆಯ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು’ ಎಂದು ಹೇಳಿದರು.

‘2002ರಲ್ಲಿ ಟೆನಿಸ್‌ ಆಯೋಜನೆಗೆ ಮೊದಲ ಬಾರಿಗೆ ಅನುಮತಿ ದೊರೆಯಿತು. ಆಗ ಇಲ್ಲಿ ಏನೂ ಇರಲಿಲ್ಲ. ಈ ಅಂಗಣವನ್ನು 22 ವರ್ಷಗಳ ಹಿಂದೆ ಕೇವಲ 55 ದಿನಗಳಲ್ಲಿ ಪೂರ್ಣಗೊಳಿಸಿದ್ದೇವೆ. ಬೆಂಗಳೂರು ಬಿಟ್ಟರೆ ಟೂರ್ನಿ ಆಯೋಜನೆ ಮಾಡಿದ್ದು ಕಲಬುರಗಿಯಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಗಣನೀಯವಾಗಿ ಅಭಿವೃದ್ಧಿಯಾಗಿರುವುದು ಸಂತಸದ ಸಂಗತಿ’ ಎಂದು ಅವರು ಹೇಳಿದರು.

ಪ್ರಶಸ್ತಿ ವಿತರಣೆ ವೇಳೆ ಸಂಭ್ರಮಾಚರಣೆಗಾಗಿ ಹಾರಿಸಿದ್ದ ಬಣ್ಣದ ಪೇಪರ್‌ ಚೂರುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಶೀಘ್ರ ಅಲ್ಲಿಗೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು.

ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ರಷ್ಯಾದ ಬಾಗ್ದಾನ್‌ ಬಾಬ್‌ರೋವ್‌  ಪ್ರಜಾವಾಣಿ ಚಿತ್ರ; ತಾಜುದ್ದೀನ್‌ ಆಜಾದ್‌

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಅಬ್ದುಲ್ ಅಜೀಂ, ಟೂರ್ನಿ ನಿರ್ದೇಶಕ ಪೀಟರ್‌ ವಿಜಯಕುಮಾರ್‌, ಮೇಲ್ವಿಚಾರಕ ಪುನೀತ ಗುಪ್ತಾ, ತರಬೇತುದಾರರಾದ ಸಂಜಯ ಬಾಣಾದ, ಪ್ರವೀಣ ಪುಣೆ ಹಾಜರಿದ್ದರು.

ಚಾಂಪಿಯನ್‌ ಸುಲ್ತಾನೋವ್‌ ತಾಯಿ ಟ್ರೋಫಿ ಹಿಡಿದ ಸಂಭ್ರಮಿಸಿದರು
ನನಗೆ ಈ ಗೆಲುವು ಬಹುಮುಖ್ಯವಾಗಿತ್ತು. ಮುಂಬರುವ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಸುತ್ತಿಗೆ ಈ ಅಂಕಗಳು ನೆರವಾಗುತ್ತವೆ. ಭಾರತದಲ್ಲಿ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ಸಂತಸವಿದೆ
ಖುಮೋಯುನ್‌ ಸುಲ್ತಾನೋವ್ ವಿನ್ನರ್‌ ಉಜ್ಬೇಕಿಸ್ತಾನ್‌
ಪ್ರಶಸ್ತಿ ಗೆದ್ದಿರುವುದಕ್ಕೆ ಸುಲ್ತಾನೋವ್‌ಗೆ ಅಭಿನಂದನೆಗಳು. ಅವರು ಡ್ರಾಪ್‌ಶಾಟ್‌ ರಿವರ್ಸ್‌ಗಳೊಂದಿಗೆ ಅತ್ಯುತ್ತಮ ಆಟವಾಡಿದರು. ಅವರು ಗೆದ್ದಿರುವುದಕ್ಕೆ ನನಗೆ ಹೊಟ್ಟೆಕ್ಕಿಚ್ಚಿದೆ
ಬಾಬ್‌ರೋವ್‌ ರನ್ನರ್‌ಅಪ್‌ ರಷ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.