ಕಲಬುರ್ಗಿ: ‘ಮ್ಯಾನ್‌ಹೋಲ್‌ನಲ್ಲಿ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವ ಬೀರಿದರೂ ಹಿಂದೆ ಸರಿಯುವುದಿಲ್ಲ’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
‘ನಾನು ಆಯೋಗದ ಅಧ್ಯಕ್ಷನಾಗಿ ಎರಡೇ ತಿಂಗಳಾಗಿದೆ. ಅಷ್ಟರಲ್ಲಿ ಈ ದುರಂತ ಸಂಭವಿಸಿದ್ದು, ನನಗೂ ದುಃಖ ತಂದಿದೆ.ಇದನ್ನು ದಾರಿ ತಪ‍್ಪಲು ಬಿಡುವುದಿಲ್ಲ. ನನ್ನ ಜೀವನದ ಅನುಭವವನ್ನು ಒರೆಗೆ ಹಚ್ಚಿ ಈ ಕೆಲಸ ಮಾಡುತ್ತೇನೆ. ಸಮಾಜದ ಗಲೀಜು ಸ್ವಚ್ಛ ಮಾಡಲು, ನಮ್ಮನ್ನು ಆರೋಗ್ಯವಾಗಿ ಇಡಲು ದುಡಿಯುವವರ ಪ್ರಾಣಗಳಿಗೆ ದೊಡ್ಡ ಬೆಲೆ ಇದೆ. ಅವರನ್ನು ಸಮಾನತೆಯಿಂದ, ಗೌರವದಿಂದ ಕಾಣಬೇಕು’ ಎಂದರು.
‘2013ರಲ್ಲೇ ಮಲ ಹೊರುವ ಪದ್ಧತಿಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದು ಅಪರಾಧ ಎಂದು ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿದೆ. ಆದರೆ, 2013ರಲ್ಲಿ 302ರಷ್ಟಿದ್ದ ಮಲ ಹೊರುವವರ ಸಂಖ್ಯೆ ಈಗ 3238 ದಾಟಿದೆ. ಹೊಣೆಗೇಡಿ ಅಧಿಕಾರಿಗಳಿಂದ ಇದು ಮುಂದುವರಿದೇ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸೂಚನೆಗಳು: ಪೌರಕಾರ್ಮಿಕರಿಗೆ ಪ್ರತಿ ದಿನ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ನೀಡುವುದು ಕಡ್ಡಾಯ. ಉಪಾಹಾರಕ್ಕೆ ₹ 20 ನಿಗದಿ ಮಾಡಲಾಗಿದೆ. ಇದನ್ನು ₹ 50ಕ್ಕೆ ಏರಿಸಬೇಕು. ವಿಶ್ರಾಂತಿಗೆ ಕೊಠಡಿ ನಿರ್ಮಿಸಬೇಕು. ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದೂ ಅವರು ಸೂಚಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ರಮಾ, ಸದಸ್ಯರಾದ ಗೀತಾ ವಾಡೇಕರ್, ನಾಗರಾಜ ಎಸ್., ಎಂ.ವಿ. ವೆಂಕಟೇಶ, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಸದಸ್ಯರಾದ ಎಚ್.ವೆಂಕಟೇಶ ದೊಡ್ಡೇರಿ, ಮಹಾನಗರ ಪಾಲಿಕೆಯ ಅಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವಲಯದ ಮುಖ್ಯ ಎಂಜಿನಿಯರ್ ದಿನೇಶ ಎಸ್.ಎನ್., ಅಧೀಕ್ಷಕ ಎಂಜಿನಿಯರ್ ಬಸವರಾಜ ಅಲೇಗಾಂವ, ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ ರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಇದ್ದರು.
‘ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರೂ ಹೊಣೆ’
‘ಲಾಲ್‌ಅಹಮದ್ ಹಾಗೂ ರಶೀದ್ ಶೇಖ್ ಅವರು ಮೃತಪಟ್ಟ ಘಟನೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಯು ಆಯುಕ್ತರೂ ಹೊಣೆಗಾರರಾಗಿದ್ದಾರೆ’ ಎಂದು ಎಂ.ಶಿವಣ್ಣ ಹೇಳಿದರು.
‘ಮ್ಯಾನ್‌ಹೋಲ್‌ನಲ್ಲಿ ಮನುಷ್ಯರನ್ನು ಇಳಿಸುವುದು ಅಪರಾಧ. ಇದು ಗೊತ್ತಿದ್ದೂ 20 ಅಡಿ ಆಳದ ಮ್ಯಾನ್‌ಹೋಲ್ ಸ್ವಚ್ಛತೆಗೆ ಕಾರ್ಮಿಕರನ್ನು ಇಳಿಸಿರುವುದು ಅಮಾನವೀಯ. ಆಯೋಗದ ಮುಂದೆ ಯಾರು ಏನೇ ಹೇಳಿದರೂ ಅಪರಾಧಿಗಳು ತಪ್ಪಿಸಿಕೊಳ್ಳಲಾಗುವುದಿಲ್ಲ’ ಎಂದರು.
ತಲಾ ₹ 10 ಲಕ್ಷ ಪರಿಹಾರ, ಸರ್ಕಾರಿ ನೌಕರಿ
ಮೃತಪಟ್ಟವರ ಕುಟಂಬಗಳಿಗೆ ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಆಯೋಗದಿಂದ ಕೂಡ ತಲಾ ₹ 10 ಲಕ್ಷ ಪರಿಹಾರ ಘೋಷಿಸಿದ್ದು, ಇದರಲ್ಲಿ ₹ 5 ಲಕ್ಷದ ಚೆಕ್ ಅನ್ನು ಶನಿವಾರವೇ ನೀಡಲಾಯಿತು.
ಇಬ್ಬರೂ ಪೌರಕಾರ್ಮಿಕರ ಕುಟುಂಬಗಳು ಇನ್ನೂ ಬಾಡಿಗೆ ಮನೆಯಲ್ಲೇ ವಾಸವಾಗಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ, ಯಾವುದಾದರೂ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡಬೇಕು. ಅವರ ಪತ್ನಿಯರು 7ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾರೆ. ಆದ್ದರಿಂದ ಇಬ್ಬರಿಗೂ ಡಿ ದರ್ಜೆಯ ಸರ್ಕಾರಿ ನೌಕರಿ ನೀಡಬೇಕು. ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಅವರ ಪೂರ್ಣ ಶಿಕ್ಷಣದ ಜವಾಬ್ದಾರಿ ಹೊರಬೇಕು ಎಂದೂ ಎಂ.ಶಿವಣ್ಣ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಗುತ್ತಿಗೆದಾರರ ಬಂಧನಕ್ಕೆ ಸೂಚನೆ
ಕಲಬುರ್ಗಿ: ‘ಮ್ಯಾನ್ಯುವಲ್ ಸ್ಕ್ಯಾವೆಂಜರ್ ಕೆಲಸ ಮಾಡಿಸಿದ ಗುತ್ತಿಗೆದಾರರನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದು, ಹೊಣೆಗೇಡಿತನ ತೋರಿದ ಎಲ್ಲ ಅಧಿಕಾರಿಗಳ ಮೇಲೂ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಶಿವಣ್ಣ ತಿಳಿಸಿದರು.
ಆಯೋಗದಿಂದ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗುತ್ತದೆಯೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೃತಪಟ್ಟವರ ಪತ್ನಿಯರು ನೀಡಿದ ಎಫ್‌ಐಆರ್‌ನಲ್ಲಿ ಪೂರ್ಣ ಪ್ರಕರಣ ದಾಖಲಾಗಿದೆ. ಅದನ್ನೇ ಅತ್ಯಂತ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ’ ಎಂದರು.
‘42 ರೀತಿಯ ಸುರಕ್ಷತಾ ಕ್ರಮ ಅಗತ್ಯ’
ಕಲಬುರ್ಗಿ: ‘ಚರಂಡಿ ದುರಸ್ತಿ ಅಥವಾ ಸ್ವಚ್ಛತಾ ಕೆಲಸ ಮಾಡುವಾಗ ಅನುಸರಿಸಲೇಬೇಕಾದ 42 ರೀತಿಯ ಸುರಕ್ಷತಾ ಕ್ರಮಗಳಿವೆ. ಕಲಬುರ್ಗಿಯಲ್ಲಿ ಸಾವು ಸಂಭವಿಸಿದ ವೇಳೆ ಒಂದೂ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂಬುದನ್ನು ನಮಗೆ ಗೊತ್ತಾಗಿದೆ’ ಎಂದು ಆಯೋಗದ ಅಧ್ಯಕ್ಷರು ಹೇಳಿದರು.
‘ಸಕ್ಕಿಂಗ್ ಯಂತ್ರ, ಜಟ್ಟಿಂಗ್ ಯಂತ್ರ ಬಳಕೆ, ಕೈಗವಸು ನೀಡುವುದಷ್ಟೇ ಸುರಕ್ಷತಾ ಕ್ರಮ ಎಂದು ಬಹಳಷ್ಟು ಅಧಿಕಾರಿಗಳು ತಿಳಿದಂತಿದೆ. ಇಂಥ ದುರಂತಗಳು ಮತ್ತೆ ಸಂಭವಿಸದಂತೆ ಎಚ್ಚರಿಕೆ ವಹಿಸಲು ಆಯಾ ಜಿಲ್ಲಾಡಳಿತಗಳಿಗೆ ತಾಕೀತು ಮಾಡಲಾಗುವುದು. ಇನ್ನಷ್ಟು ಆಧುನಿಕ ಯಂತ್ರಗಳ ಬಳಕೆಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಹೆಚ್ಚಿನ ಸಂಶೋಧನೆ ನಡೆಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.