ADVERTISEMENT

ಕಲಬುರಗಿ ‌| ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಎದುರು ಬೆಟ್ಟದಷ್ಟು ಸವಾಲು

ಮನೋಜ ಕುಮಾರ್ ಗುದ್ದಿ
Published 9 ಜೂನ್ 2024, 6:07 IST
Last Updated 9 ಜೂನ್ 2024, 6:07 IST
ರಾಧಾಕೃಷ್ಣ ದೊಡ್ಡಮನಿ
ರಾಧಾಕೃಷ್ಣ ದೊಡ್ಡಮನಿ   

ಕಲಬುರಗಿ: ಗುಲಬರ್ಗಾ ಕ್ಷೇತ್ರದ ನೂತನ ಸಂಸದರಾಗಿ ಚುನಾಯಿತರಾದ ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಡಮನಿ ಅವರ ಎದುರು ಬೆಟ್ಟದಷ್ಟು ಸವಾಲುಗಳಿದ್ದು, ಅವುಗಳನ್ನು ನಿಭಾಯಿಸುವ ಕುರಿತು ಮತದಾರರಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನೂ ಸಂಸದನಾಗಿ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ಕೆಲಸ ಮಾಡಬಹುದು’ ಎಂದು ರಾಧಾಕೃಷ್ಣ ಅವರು ಚುನಾವಣೆ ಸಂದರ್ಭದಲ್ಲಿ ನಡೆದ ಹಲವು ಸಮಾವೇಶಗಳಲ್ಲಿ ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಈ ಮಾತಿಗೆ ದನಿಗೂಡಿಸಿದ್ದರು.

ಕಲಬುರಗಿ ಜಿಲ್ಲೆಯ ಜನರು, ಕಲಬುರಗಿ ರೈಲ್ವೆ ವಿಭಾಗ ರಚನೆ ಹಾಗೂ ನರೇಂದ್ರ ಮೋದಿ ಅವರು ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ‘ಪಿಎಂ ಮಿತ್ರ’ ಯೋಜನೆಯಡಿ ಘೋಷಿಸಿದ್ದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕಾರ್ಯಾರಂಭ ವಿಳಂಬವಾಗುತ್ತಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಜವಳಿ ತಯಾರಿಕಾ ಕಂಪನಿಗಳು ಇಲ್ಲಿ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕಿದೆ. ಕಲಬುರಗಿ ನಗರಕ್ಕೆ ಎರಡನೇ ರಿಂಗ್ ರೋಡ್‌ಗೆ ಬೇಡಿಕೆ ಇದ್ದು, ಅದನ್ನು ಹೊಸ ಸರ್ಕಾರದಲ್ಲಿ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರಾಗಲಿರುವವರೊಂದಿಗೆ ಮಾತುಕತೆ ನಡೆಸಿ ಶೀಘ್ರ ಅನುಷ್ಠಾನಕ್ಕೆ ತರಬೇಕಿದೆ. ಖರ್ಗೆ ಪೆಟ್ರೋಲ್ ಪಂಪ್‌ ಬಳಿಯ ರಿಂಗ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೇಲ್ಸೇತುವೆ ನಿರ್ಮಿಸುವ ಘೋಷಣೆ ಹೊರಡಿಸಿದ್ದು, ಅದರ ಕಾಮಗಾರಿಯನ್ನೂ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ.

ADVERTISEMENT

ಅಫಜಲಪುರ ಹಾಗೂ ಜೇವರ್ಗಿ ತಾಲ್ಲೂಕಿನಲ್ಲಿ ಹಾಯ್ದು ಹೋಗುತ್ತಿರುವ ಚೆನ್ನೈ–ಸೂರತ್ ಎಕ್ಸ್‌ಪ್ರೆಸ್ ಗ್ರೀನ್ ಕಾರಿಡಾರ್ ರಸ್ತೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸಬೇಕಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಬಡವರು ಬೆಂಗಳೂರು, ಪುಣೆ, ಮುಂಬೈಗೆ ವಲಸೆ ಹೋಗುತ್ತಿದ್ದು, ಅವರ ಅನುಕೂಲಕ್ಕಾಗಿ ಹೆಚ್ಚುವರಿ ಜನರಲ್ ಬೋಗಿಗಳನ್ನು ಅಳವಡಿಸಲು ರೈಲ್ವೆ ಮಂಡಳಿಯ ಮೇಲೆ ಒತ್ತಡ ತರಬೇಕಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ನಿರ್ಮಿಸಿರುವ ಇಎಸ್‌ಐಸಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನಿಂದ ಲಕ್ಷಾಂತರ ರೋಗಿಗಳಿಗೆ ಅನುಕೂಲವಾಗಿದ್ದು, ಅದನ್ನೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.

ಬರಗಾಲದ ಸಂದರ್ಭದಲ್ಲಿ ಜಿಲ್ಲೆಯ ಬಡವರ ಕೈ ಹಿಡಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯಡಿ ನೀಡುತ್ತಿರುವ ಕೂಲಿ ಪ್ರಮಾಣವನ್ನು ಈಗ ಇರುವ ₹ 349ರ ಬದಲು ಇನ್ನಷ್ಟು ಹೆಚ್ಚಿಸಲು ಹಾಗೂ ಒಬ್ಬರಿಗೆ ಇರುವ 100 ಮಾನವ ದಿನಗಳ ಮಿತಿಯನ್ನು 150 ದಿನಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರೊಂದಿಗೆ ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿರುವ ಕೇಂದ್ರ ಸಚಿವಾಲಯಗಳ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಿ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಜಿಲ್ಲಾ ಮಟ್ಟದ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ (ದಿಶಾ) ಸಭೆಯನ್ನು ನಡೆಸಬೇಕಿದೆ. ಹಿಂದಿನ ದಿಶಾ ಸಮಿತಿಗಳಿಗೆ ಕ್ರಮವಾಗಿ ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದರು. ಆದರೆ, ನಿಗದಿಯಂತೆ ಸಭೆಗಳು ನಡೆದಿರಲಿಲ್ಲ. ಈ ಬಾರಿ ಹಾಗಾಗದಂತೆ ಮುಂಚೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಭೆಗಳನ್ನು ನಡೆಸಬೇಕಿದೆ.

‘ಬೆಂಗಳೂರು, ಮುಂಬೈ, ದೆಹಲಿಗೆ ವಿಮಾನ ಬೇಕು’

ಹೊಸದಾಗಿ ಚುನಾಯಿತರಾಗಿರುವ ಸಂಸದರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಮಾತನಾಡಿ, ಕಲಬುರಗಿಯಿಂದ ನಿತ್ಯ ಬೆಂಗಳೂರು, ಮುಂಬೈ, ದೆಹಲಿಗೆ ವಿಮಾನ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಕೆಕೆಸಿಸಿಐ)ಯ ಅಧ್ಯಕ್ಷ ಶಶಿಕಾಂತ ಪಾಟೀಲ ಒತ್ತಾಯಿಸಿದರು.

‘ಬೆಂಗಳೂರಿಂದ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ವಿಮಾನ ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ ಶೀಘ್ರ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಕೇಂದ್ರ ಜವಳಿ ಸಚಿವಾಲಯ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕು. ಮುಖ್ಯಮಂತ್ರಿ ಅವರ ಮನವೊಲಿಸಿ ರಾಷ್ಟ್ರೀಯ ಹೂಡಿಕೆದಾರರ ಸಮಾವೇಶವನ್ನು ಕಲಬುರಗಿಯಲ್ಲಿ ಆಯೋಜಿಸಬೇಕು. ಕಲಬುರಗಿಯಲ್ಲಿ ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು.

ಈಗಷ್ಟೇ ಸಂಸದನಾಗಿ ಆಯ್ಕೆಯಾಗಿದ್ದೇನೆ. ಹಲವಾರು ಕೆಲಸಗಳನ್ನು ಮಾಡಬೇಕಿದೆ. ನನ್ನ ಮುಂದಿನ ಯೋಜನೆಗಳ ಬಗ್ಗೆ ಕಲಬುರಗಿಗೆ ಬಂದಾಗ ಹಂಚಿಕೊಳ್ಳುತ್ತೇನೆ.
ರಾಧಾಕೃಷ್ಣ ದೊಡ್ಡಮನಿ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.