ADVERTISEMENT

ಕಲಬುರಗಿ: ಎರಡನೇ ದಿನವೂ ಮುಂದುವರೆದ ಅಂಗನವಾಡಿ ನೌಕರರ ಪ್ರತಿಭಟನೆ

ಅಂಗನವಾಡಿ ಬಂದ್ ಮಾಡುವ ಆರೋಪ: ಜನಪ್ರತಿನಿಧಿಗಳ ಮನೆ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:28 IST
Last Updated 18 ಜೂನ್ 2024, 16:28 IST
ಕಲಬುರಗಿಯ ತಮ್ಮ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಚಿವ ಡಾ. ಶರಣಪ್ರಕಾಶ ‍ಪಾಟೀಲ ಅವರು ಮಾತುಕತೆ ನಡೆಸಿದರು
ಕಲಬುರಗಿಯ ತಮ್ಮ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಚಿವ ಡಾ. ಶರಣಪ್ರಕಾಶ ‍ಪಾಟೀಲ ಅವರು ಮಾತುಕತೆ ನಡೆಸಿದರು   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುವ ಮೂಲಕ ಸರ್ಕಾರ ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಜನಪ್ರತಿನಿಧಿಗಳ ಮನೆ ಮುಂದೆ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು. 

ಕೆಕೆಆರ್‌ಡಿಬಿ ಅಡಿಯಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಪ್ರಾರಂಭಿಸುವ ಆದೇಶ ಹಿಂಪಡೆದು, 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭ ಮಾಡುವಂತೆ ಒತ್ತಾಯಿಸಿದರು.

ADVERTISEMENT

ಎಲ್‌ಕೆಜಿ, ಯುಕೆಜಿ ಪ್ರಾರಂಭ ಆದೇಶ ನಿಲ್ಲಿಸಬೇಕು. ಈಗಾಗಲೇ ಶಿಕ್ಷಣ ಇಲಾಖೆಯಡಿಯಲ್ಲಿರುವ ಎಲ್‌ಕೆಜಿ, ಯುಕೆಜಿ ಮತ್ತು ಕೆಪಿಎಸ್‌ ಶಾಲೆಗಳಲ್ಲಿ ಮಕ್ಕಳ ಒಟ್ಟು ಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿರುವ ಮಕ್ಕಳ ಸ್ಥಿತಿ–ಗತಿ ಬಗ್ಗೆ ಅಧ್ಯಯನ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಎಸ್‌.ಘಂಟೆ, ಜಿಲ್ಲಾ ಅಧ್ಯಕ್ಷೆ ಗೌರಮ್ಮ ಪಿ. ಪಾಟೀಲ, ಖಜಾಂಚಿ ಮಹಾದೇವಿ ಕುಡಳ್ಳಿಕರ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಪ್ರಮುಖರಾದ ದೇವಮ್ಮ ಅನ್ನದಾನಿ, ರಾಧಾ ಲಕ್ಕನೂರ, ಸಾಬಮ್ಮ ಎಂ. ಹಾಜರಿದ್ದರು.

ಅಂಗನವಾಡಿ ಮುಚ್ಚಲ್ಲ: ಶರಣಪ್ರಕಾಶ

ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಎಲ್‌ಕೆಜಿ ಯುಕೆಜಿ ಮಕ್ಕಳನ್ನು ಪೋಷಕರು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆ ಆರಂಭಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಮಜಾಯಿಷಿ ನೀಡಿದರು.

ಮಂಗಳವಾರ ತಮ್ಮ ಮನೆ ಮುಂದೆ ಧರಣಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿದ ಸಚಿವರು ‘ಅಂಗನವಾಡಿಗಳನ್ನು ಮುಚ್ಚುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಭಟನಾಕಾರರು ‘ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ನಡೆಸುವ ಬದಲು ಅಂಗನವಾಡಿಗಳಲ್ಲೇ ತೆರೆಯಿರಿ. ಇಲ್ಲದಿದ್ದರೆ ಅಂಗನವಾಡಿ ಕಾರ್ಯಕರ್ತೆಯರನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಿಕೊಳ್ಳಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.