ADVERTISEMENT

ಕಲಬುರಗಿ ಪ್ರವೇಶಕ್ಕೆ ಚಕ್ರವರ್ತಿ ಸೂಲಿಬೆಲೆಗೆ ವಿಧಿಸಿದ್ದ ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 12:41 IST
Last Updated 29 ಫೆಬ್ರುವರಿ 2024, 12:41 IST
ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ    

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುತ್ತಿರುವ ಚಿತ್ತಾಪುರದಲ್ಲಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಗುರುವಾರ ತೆರವುಗೊಳಿಸಿದೆ.

ಸೂಲಿಬೆಲೆ ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಕಲಬುರಗಿಯತ್ತ ಬರುತ್ತಿದ್ದರು. ಅವರಿಗೆ ಜಿಲ್ಲೆಯ ಗಡಿ ಪ್ರವೇಶಿಸದಂತೆ ಪೊಲೀಸರು ಕಮಲಾಪುರ ಬಳಿ ತಡೆಯೊಡ್ಡಿದರು. ತಡರಾತ್ರಿ ಕಲಬುರಗಿ ಉಪವಿಭಾಗಾಧಿಕಾರಿ ರೂಪಿಂದರ್ ಕೌರ್ ಅವರು ಸೂಲಿಬೆಲೆ ಜಿಲ್ಲೆ ಪ್ರವೇಶಕ್ಕೆ ನಿಷೇಧ ವಿಧಿಸಿ ಆದೇಶ ಹೊರಡಿಸಿದ್ದರು. ಅಲ್ಲದೇ, ಚಿತ್ತಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಷಾಷಾವಲಿ ಅನುಮತಿ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠವು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲು ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತು.

ADVERTISEMENT

ಸೂಲಿಬೆಲೆ ಪರವಾಗಿ ಹೈಕೋರ್ಟ್ ವಕೀಲ ಅರುಣ್ ಶ್ಯಾಂ ಮತ್ತು ಕಿರಣ್ ವಾದ ಮಂಡಿಸಿದರು.

ನಿರ್ಬಂಧ ತೆರವುಗೊಳಿಸಿದ ಬಳಿಕ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ, ‘ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮ ನಡೆಯಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತದ ಮೂಲಕ ನಿರ್ಬಂಧ ವಿಧಿಸಿದರು. ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಶಕ್ತಿಯನ್ನು ಬಳಸಿಕೊಂಡು ಕೋರ್ಟ್ ಮೊರೆ ಹೋಗಿ ನಿರ್ಬಂಧಕ್ಕೆ ತಡೆಯಾಜ್ಞೆ ತಂದಿದ್ದೇವೆ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.