ADVERTISEMENT

ಕಾಳಗಿ | ದುರಸ್ತಿಯಾಗದ ಹೆದ್ದಾರಿ: ಸಂಚಾರ ಕಿರಿಕಿರಿ

ಗುಂಡಪ್ಪ ಕರೆಮನೋರ
Published 4 ಜುಲೈ 2024, 6:15 IST
Last Updated 4 ಜುಲೈ 2024, 6:15 IST
ಕಾಳಗಿ ತಾಲ್ಲೂಕಿನ ತೆಂಗಳಿ–ತೊನಸನಹಳ್ಳಿ (ಟಿ) ಕ್ರಾಸ್ ನಡುವೆ ಹದಗೆಟ್ಟ ರಾಜ್ಯಹೆದ್ದಾರಿ
ಕಾಳಗಿ ತಾಲ್ಲೂಕಿನ ತೆಂಗಳಿ–ತೊನಸನಹಳ್ಳಿ (ಟಿ) ಕ್ರಾಸ್ ನಡುವೆ ಹದಗೆಟ್ಟ ರಾಜ್ಯಹೆದ್ದಾರಿ   

ಕಾಳಗಿ: ಪಟ್ಟಣದಿಂದ ಚಿತ್ತಾಪುರಕ್ಕೆ ಸಂಚರಿಸುವ ಮಾರ್ಗಮಧ್ಯೆ ಇರುವ ತೆಂಗಳಿ–ತೊನಸನಹಳ್ಳಿ (ಟಿ) ಕ್ರಾಸ್ ನಡುವಿನ ರಾಜ್ಯ ಹೆದ್ದಾರಿಯು ತೀವ್ರ ಹದಗೆಟ್ಟಿದೆ. 

ತೆಲಂಗಾಣದ ಪುಟಫಾಕ್‌ನಿಂದ ಬಸವಕಲ್ಯಾಣ ತಾಲ್ಲೂಕಿನ ಭೋಸಗಾ ಸಂಪರ್ಕಿಸುವ ಈ ರಾಜ್ಯಹೆದ್ದಾರಿ–126 ಚಿತ್ತಾಪುರ, ತೆಂಗಳಿ ಕ್ರಾಸ್, ಕಲಗುರ್ತಿ, ಮಲಘಾಣ ತಾಂಡಾ, ಅಶೋಕನಗರ, ಹೆಬ್ಬಾಳ ಮಾರ್ಗವಾಗಿ ಹಾದುಹೋಗುತ್ತದೆ. 

ಈ ಹೆದ್ದಾರಿಯಲ್ಲಿ ಚಿತ್ತಾಪುರ, ಕಾಳಗಿ, ಚಿಂಚೋಳಿ ಮತ್ತು ಸೇಡಂ ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನರು ನಿತ್ಯ ಸಂಚರಿಸುತ್ತಾರೆ. ಆದರೆ ಈ ಹೆದ್ದಾರಿಯು ಬಹುವರ್ಷಗಳಿಂದ 21ಕ್ಕೂ ಹೆಚ್ಚು ಕಿ.ಮೀ.ನಷ್ಟು ಹದಗೆಟ್ಟು ಹೋಗಿತ್ತು. ಈ ನಡುವೆ ತೆಂಗಳಿ ಕ್ರಾಸ್–ತೊನಸನಹಳ್ಳಿ (ಟಿ) ಕ್ರಾಸ್‌ವರೆಗೆ ಮತ್ತು ತೆಂಗಳಿ ಅಂಬಾಭವಾನಿ ದೇವಸ್ಥಾನದ ಬಳಿ ಕೆಲವೊಂದಿಷ್ಟು ದುರಸ್ತಿ ಕಾರ್ಯ ಕೈಗೊಂಡು ಡಾಂಬರೀಕರಣ ಮಾಡಲಾಗಿದೆ.

ADVERTISEMENT

ಇನ್ನುಳಿದ 1.5 ಕಿಮೀ (ತೊನಸನಹಳ್ಳಿ (ಟಿ) ಮೈಹಿಬೂಬ ಸುಭಾನಿ ದರ್ಗಾ ಬಳಿ) ಮತ್ತು ತೆಂಗಳಿ ಅಂಬಾಭವಾನಿ ದೇವಸ್ಥಾನದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಿಂದ ಹೆಬ್ಬಾಳವರೆಗಿನ ಕನಿಷ್ಠ 18 ಕಿ.ಮೀ. ಹೆದ್ದಾರಿಯು ಸಿಕ್ಕಾಪಟ್ಟೆ ಕೆಟ್ಟುಹೋಗಿದೆ. ಮಳೆಗಾಲದಲ್ಲಿ ಸಂಪೂರ್ಣ ಕೆಸರುಗದ್ದೆಯಂತಾಗಿ ಪ್ರಯಾಣಿಕರು ಪಡಬಾರದ ಕಷ್ಟ ಪಡುವಂತಾಗಿದೆ.

‘ಹೆದ್ದಾರಿಯ ಎಲ್ಲೆಂದರಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಜಲ್ಲಿಕಲ್ಲುಗಳು ತೇಲಿ ದೂಳಿನ ರಾಶಿ ಮನೆ ಮಾಡಿದೆ. ಇಷ್ಟೇ ಕಿ.ಮೀ. ಪ್ರಯಾಣಿಸಲು ಒಂದು ತಾಸು ಸಮಯ ಬೇಕಾಗುತ್ತಿದೆ. ವಾಹನಗಳು ಸ್ವಲ್ಪವೇ ಆಯತಪ್ಪಿದರೆ ಭಾರಿ ಅನಾಹುತದ ದಾರಿ ಹಿಡಿಯುತ್ತಿವೆ’ ಎಂದು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತೊನಸನಹಳ್ಳಿ (ಟಿ) ದರ್ಗಾದ ಬಳಿ ಸದ್ಯ ಕೆಟ್ಟಿರುವ 1.5 ಕಿ.ಮೀ ಹೆದ್ದಾರಿ ಚಿತ್ತಾಪುರ ಲೋಕೋಪಯೋಗಿ ಇಲಾಖೆ ಉಪವಿಭಾಗಕ್ಕೆ ಸೇರಿದೆ. ಇದರ ದುರಸ್ತಿ ಕಾರ್ಯ ಅವರೇ ಮಾಡುತ್ತಾರೆ ಎನ್ನುತ್ತಾರೆ ಕಾಳಗಿ ಉಪವಿಭಾಗದ ಎಇಇ ಮಲ್ಲಿಕಾರ್ಜುನ ದಂಡಿನ್.

ಆದರೆ ಇನ್ನುಳಿದ ಹೆದ್ದಾರಿಯ (ಕನಿಷ್ಠ 18 ಕಿ.ಮೀ) ದುರಸ್ತಿಕಾರ್ಯ ಕಾಳಗಿ ಉಪವಿಭಾಗಕ್ಕೆ ಸೇರಿದೆಯಾದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. 

ಈ ಹದಗೆಟ್ಟ ರಾಜ್ಯಹೆದ್ದಾರಿಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರಿಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು
ಪ್ರಸಾದ ಹಳ್ಳಿ ಯುವ ಮುಖಂಡ ತೆಂಗಳಿ
ತೊನಸನಹಳ್ಳಿ (ಟಿ) ನಮ್ಮ ತಾಲ್ಲೂಕಿಗೆ ಬಂದಿದ್ದರೂ ಈ ರಾಜ್ಯಹೆದ್ದಾರಿಯು ಪೂರ್ಣ ಪ್ರಮಾಣದಲ್ಲಿ ನಮಗೆ ಬರುವುದಿಲ್ಲ ನಮ್ಮ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ
ಮಲ್ಲಿಕಾರ್ಜುನ ದಂಡಿನ್ ಲೋಕೋಪಯೋಗಿ ಇಲಾಖೆ ಎಇಇ
ದಿನಾಲೂ ನಮ್ಮ ಊರಿನಿಂದ ಬೈಕ್ ಮೇಲೆ ಚಿತ್ತಾಪುರಕ್ಕೆ ಹೋಗಿ ಬರುತ್ತೇನೆ. ಈ ಹದಗೆಟ್ಟ ಹೆದ್ದಾರಿಗೆ ಬೈಕ್ ಹಾಳಾಗುವುದರ ಜತೆಗೆ ಆರೋಗ್ಯ ಕೆಡುತ್ತಿದೆ ಬಹಳ ತ್ರಾಸ್ ಆಗುತ್ತಿದೆ
ಉದಯಕುಮಾರ ಪಸ್ತಾಪುರ ಮಳಗಾ (ಕೆ) ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.