ಆಳಂದ: ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ಸದ್ಯ ಇರುವ 3 ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತಾಲ್ಲೂಕಿನ ಸಕ್ಕರಗಾ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
ಸರಸಂಬಾ ಗ್ರಾ.ಪಂ ವ್ಯಾಪ್ತಿಯಲ್ಲಿನ ಸಕ್ಕರಗಾ ಗ್ರಾಮದಲ್ಲಿ 240ಕ್ಕೂ ಹೆಚ್ಚು ಮನೆಗಳಿವೆ. ಅಂದಾಜು 1,200 ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ರೈತರೊಬ್ಬರ ಗ್ರಾಮದಲ್ಲಿ ನೀರು ಕೊಡಲು ಸಿದ್ಧರಿದ್ದಾರೆ. ಆದರೆ ಗ್ರಾ.ಪಂ ಅಧಿಕಾರಿಗಳು ಹಾಗೂ ಕೊಳವೆ ಬಾವಿ ಮಾಲೀಕರ ನಡುವೆ ಖರೀದಿಗಾಗಿ ಹಣದ ಚೌಕಾಶಿಯಿಂದಾಗಿ ಹಗ್ಗಜಗ್ಗಾಟ ನಡೆದಿದೆ.
ಗ್ರಾಮದಲ್ಲಿ ಎರಡು ಖಾಸಗಿ ಟ್ಯಾಂಕರ್‌ಗಳು ಇರುವುದರಿಂದ ಗ್ರಾಮದ ಮಲ್ಲಿನಾಥ ಮುಲಗೆ ಅವರ ಕೊಳವೆ ಬಾವಿಯಿಂದ ಟ್ಯಾಂಕರ್‌ಗಳಿಗೆ ₹ 300 ದರ ನಿಗದಿಯಾಗಿದೆ. ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಕುಟುಂಬದವರು ಸೇರಿ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವವರು ಟ್ಯಾಂಕರ್ ಮೊರೆಹೋದರೆ ಬಡವರು, ಕೂಲಿಕಾರ್ಮಿಕರು ದಿನವಿಡೀ ನೀರಿಗಾಗಿ ಸಂಕಷ್ಟ ಪಡಬೇಕಾಗಿದೆ.
ಮಹಿಳೆಯರೂ ದಿನವಿಡಿ ನೀರಿಗಾಗಿ ಕಾಯುವ ಇಲ್ಲವೇ ಹೊಲಗದ್ದೆಗಳಿಗೆ ಅಲೆಯುವ ಸಂಕಷ್ಟ ಎದುರಾಗಿದೆ. ಸಕ್ಕರಗಾ ಗ್ರಾಮದಲ್ಲಿನ ನೀರಿನ ಮೂಲಗಳಾದ ಪಂಚಾಯಿತಿ ಮೂರು ಕೊಳವೆ ಬಾವಿ ಸಂಪೂರ್ಣ ಬತ್ತಿವೆ. ಗ್ರಾಮದಲ್ಲಿನ ಕೈಪಂಪ್ ಕೊಳವೆಬಾವಿಯಿಂದಲೂ ಹನಿ ನೀರು ಜಿನುಗುತ್ತಿಲ್ಲ. ಪಂಚಾಯಿತಿ ತೆರೆದಬಾವಿಯಲ್ಲೂ ನೀರು ಕಡಿಮೆಯಾಗಿದ್ದು, ಕೇವಲ ಅರ್ಧ ಗಂಟೆ ಮಾತ್ರ ನೀರು ಲಭ್ಯವಿದ್ದು, ಗ್ರಾಮಸ್ಥರೊಬ್ಬರ ತೋಟದಿಂದ ಖಾಸಗಿ ನೀರು ಖರೀದಿಸಲಾಗಿದೆ. ಈ ನೀರು ಮೋಟರ್ ಮೂಲಕ ನೀರಿನ ಟ್ಯಾಂಕ್‌ಗೆ ಸಂಗ್ರಹಿಸಿ, ಕೆಲವರಿಗೆ ಮಾತ್ರ ಸರದಿಯಲ್ಲಿ ನೀರು ಪೂರೈಸಲಾಗುತ್ತಿದೆ. ನೀರು ಸಮರ್ಪಕವಾಗಿ ಸಾಲುತ್ತಿಲ್ಲ. ಈ ನೀರು ಪಡೆಯಲು ಮಹಿಳೆಯರು ಹರಸಾಹಸ ಪಡುವ ಪರಿಸ್ಥಿತಿಯಿದೆ. ಉರಿ ಬಿಸಿಲು, ರಾತ್ರಿ ಲೆಕ್ಕಿಸದೆ ಸರದಿ ಸಾಲಿನಲ್ಲಿ ಕಾಯಬೇಕು. ಗ್ರಾಮದಲ್ಲಿ ಯಾರೂ ವಿದ್ಯುತ್ ಮೋಟಾರ್ ಬಳಸಬಾರದು ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮಾಡಿ, ನೀರು ಸರಬುರಾಜು ಮಾಡಲಾಗುತ್ತಿದೆ. ಹೀಗೆ ಮಾಡಿದರೂ ಸಹ ಬೆರಳೆಣಿಕೆಯ ಕುಟುಂಬಗಳಿಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ.
ಗ್ರಾಮ ಪಂಚಾಯಿತಿಯು ಸಹ ಈಗಾಗಲೇ ಕಾಮನಹಳ್ಳಿ ಮಾರ್ಗದಲ್ಲಿ ಮತ್ತು ಕೆರೆ ಸಮೀಪದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಐದು ನೂರು ಅಡಿ ಆಳದಲ್ಲಿ 2 ಕೊಳವೆ ಬಾವಿ ಕೊರೆಯಲಾಗಿದೆ. ನೀರು ಮಾತ್ರ ಕೊಳವೆಬಾವಿಯಲ್ಲಿ ಸಿಗಲಿಲ್ಲ. ಇದು ಗ್ರಾಮ ಪಂಚಾಯಿತಿಗೂ ಸವಾಲಾಗಿ ಪರಿಣಮಿಸಿದೆ ಎಂದು ಗ್ರಾ.ಪಂ ಸದಸ್ಯೆ ಅಂಬುಬಾಯಿ ಡೊಂಗರೆ ‘ಪ್ರಜಾವಾಣಿ’ಗೆ ತಿಳಿಸಿದರು.
ಸಕ್ಕರಗಾ ಗ್ರಾಮದ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯಲ್ಲಿನ ಕೊಳವೆ ಬಾವಿಗೂ ನೀರಿನ ಕೊರತೆ ಕಾಡುತ್ತಿದೆ. ಈಚೆಗೆ ಗ್ರಾಮದ ಶರಣಬಸಪ್ಪ ಅಣೂರೆ ಅವರು ಮನೆಯಲ್ಲಿ ಹಾಕಿದ ಕೊಳವೆಬಾವಿಗೆ ನೀರು ಲಭ್ಯವಾಗಿದ್ದು, ಅವರು ಉಚಿತವಾಗಿ ಸುತ್ತಲಿನ ಕೆಲ ಮನೆಗಳಿಗೆ ನೀರು ಪೂರೈಸುತ್ತಿದ್ದಾರೆ.
ಗ್ರಾಮದಲ್ಲಿ ಶಿವರಾತ್ರಿಗೆ ಶಿವ–ಪಾರ್ವತಿ ಜಾತ್ರೆ ನಡೆಯಿತು. ಜಾತ್ರೆಗೆ ಮುಂಬೈ, ಪುಣೆ, ಸಾತಾರ, ಸೋಲಾಪುರದಿಂದ ಅಧಿಕ ಸಂಖ್ಯೆಯಲ್ಲಿ ಸಂಬಂಧಿಕರು ಜಮಾಗೊಂಡರು. ಜಾತ್ರೆಗೆ ಬಂದ ಜನಕ್ಕೆ ನೀರಿನ ಕಷ್ಟ ಕಂಡರು. ಇದರಿಂದಾಗ ಗ್ರಾಮ ಪಂಚಾಯಿತಿ ವಿರುದ್ಧ ಜನರು ಆಕ್ರೋಶ ಹೊರಹಾಕಿದರು. ಬೆನ್ನಲ್ಲೆ ಪಂಚಾಯಿತಿಯು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡುವ ಪ್ರಯತ್ನ ಮಾಡಿ ಜನರ ಸಿಟ್ಟು ಶಮನಗೊಳಿಸಿದರು.
ಗ್ರಾಮದಲ್ಲಿನ ರೈತರೊಬ್ಬರೂ ಖಾಸಗಿ ಕೊಳವೆಬಾವಿಯಿಂದ ನೀರು ಕೊಡಲು ಸಿದ್ದವಾಗಿದ್ದು, ಆದರೆ ಪಂಚಾಯಿತಿ ಅಧಿಕಾರಿಗಳು ಹಣಕಾಸಿನ ಚೌಕಾಸಿ ಮಾಡುತ್ತಿರುವದರಿಂದ ನೀರು ಪೂರೈಕೆಗೆ ಸಮಸ್ಯೆ ಮುಂದುವರಿದಿದೆ. ಕೊಳವೆಬಾವಿ ಹಾಕಲು ಇಲ್ಲವೆ ಖಾಸಗಿ ರೈತರಿಂದ ಒಪ್ಪಂದ ಮಾಡಿಕೊಳ್ಳಲು ಪಂಚಾಯಿತಿಯು ವಿಳಂಬ ಮಾಡುವುದರಿಂದ ನೀರಿನ ಸಮಸ್ಯೆ ಇನ್ನು ತೀವ್ರಗೊಳ್ಳಲಿದೆ ಎಂದು ಮಹಿಳೆಯರು, ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಎಚ್ಚೆರಿಕೆ ನೀಡಿದ್ದಾರೆ.
ಸಕ್ಕರಗಾದಲ್ಲಿ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಕ್ಕಿಲ್ಲ. ತಕ್ಷಣವೇ ಖಾಸಗಿ ರೈತರಿಂದ ಇಲ್ಲವೆ ಟ್ಯಾಂಕರ್‌ನಿಂದ ನೀರು ಪೂರೈಸುವ ಮೂಲಕ ನೀರಿನ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕುರಾಜಶೇಖರ ಪಾಟೀಲ ಗ್ರಾಮಸ್ಥ ಸಕ್ಕರಗಾ
ಸಕ್ಕರಗಾ ಗ್ರಾಮದಲ್ಲಿ ಎರಡು ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ. ಈಗ ಖಾಸಗಿ ರೈತರೊಂದಿಗೆ ಒಪ್ಪಂದ ಆಧಾರದಲ್ಲಿ ನೀರು ಸರಬುರಾಜು ನಡೆದಿದೆ. ಸಮಸ್ಯೆ ತೀವ್ರವಾಗಿದ್ದು ಮತ್ತೆ ಖಾಸಗಿ ನೀರು ಪಡೆಯುವ ಪ್ರಯತ್ನ ನಡೆದಿದೆಗುರುನಾಥ ಪಿಡಿಒ ಸರಸಂಬಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.