ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ಬಳಸಿಕೊಳ್ಳಲು ಕಾಲುವೆ ಮೂಲಕ ಹರಿಸಿರುವ ನೀರು ಪೋಲಾಗುತ್ತಿದೆ.
ಜಿಲ್ಲೆಯ ನೀರಾವರಿ ಯೋಜನೆಯು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕನಸಿನ ಯೋಜನೆ ಎಂಬ ಹೆಗ್ಗಳಿಕೆ ಹೊಂದಿದೆ. ಇದರಿಂದ ನದಿಯ ಅಚ್ಚುಕಟ್ಟು ಪ್ರದೇಶದ ರೈತರು ತೊಗರಿ, ಜೋಳ ಮತ್ತು ಅರಿಸಿನ ಬೇಸಾಯ ನಡೆಸುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಅರಿಸಿನ ಬೇಸಾಯ ಕ್ಷೇತ್ರ ತಗ್ಗಿದೆ.
ಚಂದ್ರಂಪಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ಹರಿ ಬಿಡುವ ಸರನಾಲಾ(ಮುಲ್ಲಾಮಾರಿಯ ಉಪನದಿ)ದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಈ ನೀರು ಮುಂದೆ ಮುಲ್ಲಾಮಾರಿ ನದಿ ಸೇರುತ್ತಿದೆ. ಮುಂಗಾರಿನ ಬಹುತೇಕ ಬೆಳೆಗಳು ರಾಶಿಯಾಗಿದ್ದು, ಹಿಂಗಾರಿನ ಬೆಳೆಗಳು ರಾಶಿಯ ಹಂತದಲ್ಲಿವೆ. ಹೀಗಿರುವಾಗ ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ನೀರಿನ ಅಗತ್ಯವೂ ಕಡಿಮೆಯಿದೆ. ಹೀಗಾಗಿ ನಿರಂತರ ನೀರು ಹರಿಸುತ್ತಿರುವುದರಿಂದ ಎಡದಂಡೆ ಮತ್ತು ಬಲದಂಡೆ ಮೂಲಕ ಹರಿಯುವ ನೀರು ಪೋಲಾಗುತ್ತಿದೆ.
ಡಿಸೆಂಬರ್‌ನಲ್ಲಿಯೇ ಅತ್ಯಲ್ಪ ಪ್ರಮಾಣದ ನೀರು ಸರನಾಲಾದಲ್ಲಿ ಗೋಚರಿಸುತ್ತಿತ್ತು. ಆದರೆ ಪ್ರಸಕ್ತ ವರ್ಷ ಫೆಬ್ರುವರಿ 2ನೇ ವಾರದಲ್ಲಿ ಮೊಣಕಾಲಿನವರೆಗೆ ನೀರು ಹರಿಯುತ್ತಿರುವುದರಿಂದ ಬರಗಾಲದಲ್ಲಿ ನೀರಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಕಾಡುವಂತಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ನಾರಾಯಣ ಕೊಟ್ರಕಿ ಕಳವಳ ವ್ಯಕ್ತಪಡಿಸಿದ್ದಾರೆ.
ರೈತರ ಹೊಲದಲ್ಲಿನ ತೊಗರಿ ರಾಶಿಯಾಗಿದ್ದು, ಜೋಳ, ಕಡಲೆ, ಗೋಧಿ ಅರಿಸಿನ ಕೊಯ್ಲು ಹಂತದಲ್ಲಿವೆ. ಸುಮಾರು 5223 ಹೆಕ್ಟೇರ್ ನೀರುಣಿಸುವ ಗುರಿ ಹೊಂದಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆ ಜಲಾಶಯ ಪ್ರಸಕ್ತ ವರ್ಷ ಭರ್ತಿಯಾಗಿದ್ದು, ಮುಂಗಾರು ಮತ್ತು ಹಿಂಗಾರಿನ ಬೆಳೆಗಳಿಗೆ ಅಕ್ಟೋಬರ್ 20ರಿಂದ ನೀರು ಹರಿ ಬಿಡಲಾಗಿದೆ.
ಯೋಜನೆಯ ಕಾಲುವೆ ಜಾಲ ಸಂಪೂರ್ಣ ಹಾಳಾಗುತ್ತಿದ್ದು, ಬಲವರ್ಧನೆಯ ಅಗತ್ಯವಿದೆ. ಕೆಲವು ಕಡೆ ರೈತರ ಹೊಲಗಳಿಗೆ ಹೋಗಲು ರಸ್ತೆಯಲ್ಲಿ ನೀರು ಹರಿದು ತೊಂದರೆಯಾಗುತ್ತಿದೆ. ಪ್ರಯುಕ್ತ ನೀರಿನ ಮಿತವ್ಯಯಕ್ಕಾಗಿ ವಾರಾಬಂದಿ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಸದ್ಯ ರೈತರಿಗೆ ನೀರಿನ ಅಗತ್ಯವಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ಡಂಗೂರ ಸಾರಿಸಿ ನೀರು ಬಿಡುವುದನ್ನು ಸ್ಥಗಿತಗೊಳಿಸಬೇಕು. 12 ದಿನಗಳ ನಂತರ ಮತ್ತೊಮ್ಮೆ ಬಿಡಬೇಕು. ಇದರಿಂದ ಪೋಲು ತಡೆಯಬಹುದುಬಸವರಾಜ ಪುಣ್ಯಶೆಟ್ಟಿ ಐನೊಳ್ಳಿ ಕೃಷಿಕ
ಜಲಾಶಯದಿಂದ ನೀರು ಕಾಲುವೆ ಮೂಲಕ ರೈತರ ಹೊಲಗಳಿಗೆ ಹರಿ ಬಿಡುವುದನ್ನು ಫೆ.15ರಿಂದ ಸ್ಥಗಿತಗೊಳಿಸಲಾಗುವುದು. ಅಲ್ಲಿವರೆಗೆ ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕುಚೇತನ ಕಳಸ್ಕರ್ ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.