ಕಲಬುರ್ಗಿ: ‘ಇಲ್ಲಿನ ದೂರದರ್ಶನ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ ಎನ್ನುವುದು ಸುಳ್ಳು ಸುದ್ದಿ. ಇಂಥ ಯಾವುದೇ ಪ್ರಯತ್ನ ಸರ್ಕಾರದಿಂದ ನಡೆದಿಲ್ಲ. ನಾನು ಖುದ್ದಾಗಿ ದೆಹಲಿಯಲ್ಲಿ ಪ್ರಸಾರ ಭಾರತಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಲಬುರ್ಗಿ ದೂರದರ್ಶನ ಕೇಂದ್ರವು ಮುಂದುವರಿಯಲಿದೆ. ಜನರು ಗೊಂದಲಗಳಿಗೆ ಕಿವಿಗೊಡಬಾರದು’ ಎಂದು ಸಂಸದ ಡಾ.ಉಮೇಶ ಜಾಧವ ಸ್ಪಷ್ಟಪಡಿಸಿದ್ದಾರೆ.
‘ಕಳೆದ ಕೆಲವು ದಿನಗಳಿಂದ ದೂರದರ್ಶನ ಕೇಂದ್ರವನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಪ್ರಸ್ತಾವ ಇಲ್ಲ ಎಂದು ಸ್ವತಃ ಹಿರಿಯ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ’ ಎಂದಿದ್ದಾರೆ.
‘ಈ ಬಗ್ಗೆ ದೂರದರ್ಶನ ಹಾಗೂ ಅಲ್ ಇಂಡಿಯಾ ರೇಡಿಯೊದ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕರಾದ ವಿ.ರಮಾಕಾಂತ ಅವರೊಂದಿಗೂ ನಾನು ಮಾತನಾಡಿದ್ದೇನೆ. ಕಲಬುರ್ಗಿಯ ದೂರದರ್ಶನ ಕೇಂದ್ರವನ್ನು ಈಗ ಡಿಜಿಟಲೀಕರಣ ಮಾಡಲಾಗುತ್ತಿದೆ. ವೈವಿಧ್ಯಮಯ ಕಾರ್ಯಕ್ರಮ ಪ್ರಸಾರಕ್ಕಾಗಿ ಈ ಭಾಗದ ಕೆಲವು ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಕೂಡ ಮಾಡಿಕೊಳ್ಳಲಾಗುತ್ತಿದೆ.
ಇಲ್ಲಿದ್ದ 29 ಸಿಬ್ಬಂದಿಯ ಪೈಕಿ ಇಬ್ಬರನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ. ಆದರೆ, ಇನ್ನೂ 27 ಸಿಬ್ಬಂದಿ ಅಲ್ಲಿಯೇ ಇದ್ದಾರೆ. ಸಿಬ್ಬಂದಿ ವರ್ಗಾವಣೆ ಮಾಡಿದ ಕಾರಣಕ್ಕೆ ಇದು ಬಂದ್ ಆಗುತ್ತದೆ ಎಂದು ಯಾರೂ ಗೊಂದಲ ಮೂಡಿಸಿಕೊಳ್ಳಬಾರದು ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ’ ಎಂದು ಸಂಸದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.