ADVERTISEMENT

ಕಲಬುರಗಿ | ಮೂವರು ಆರೋಪಿಗಳ ಬಂಧನ

ಕೋರ್ಟ್‌ ಆವರಣದಲ್ಲಿ ತಲವಾರ್‌ ಹಿಡಿದು ಸಿನೀಮಿಯ ಶೈಲಿಯಲ್ಲಿ ದಾಳಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:08 IST
Last Updated 2 ಜುಲೈ 2024, 5:08 IST

ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಕೆಲವು ದುಷ್ಕರ್ಮಿಗಳು ತಲವಾರ್ ಹಿಡಿದು ಸಿನೀಮಿಯ ಶೈಲಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

ದಾಳಿಯ ಸಂಬಂಧ ಮಾಂಗರವಾಡಿ ಗಲ್ಲಿಯ ಪ್ರಶಾಂತ್ ಪಾಟೀಲ (20), ವೀರೇಶ ಪಾಟೀಲ (19) ಹಾಗೂ ರಾಮು ಪಾಟೀಲ (38) ಅವರನ್ನು ಬಂಧಿಸಲಾಗಿದೆ. ಇದೇ ಗಲ್ಲಿಯ ಧೀರಜ್ (40) ಎಂಬಾತ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಟೇಷನ್‌ ಬಜಾರ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಕರಣವೊಂದರ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣದಲ್ಲಿ ಸಾಕ್ಷಿ ಹೇಳಲು ಬಂದಿದ್ದ ಎರಡು ಗುಂಪುಗಳ ನಡುವೆ ನ್ಯಾಯಾಲಯದ ಆವರಣದಲ್ಲಿ ಗಲಾಟೆ ಶುರುವಾಗಿದೆ. ಒಂದು ಗುಂಪಿನವರು ತಲವಾರ್ ಹಿಡಿದು ಧೀರಜ್ ಎಂಬಾತನ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಯಾಲಯದ ಆವರಣದಲ್ಲಿ ಹಾಡುಹಗಲೇ ದುಷ್ಕರ್ಮಿಗಳು ತಲವಾರ್ ಹಿಡಿದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಕಂಡು ಸ್ಥಳದಲ್ಲಿದ್ದವರು ಆತಂಕಗೊಂಡರು.

ADVERTISEMENT

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 189 (2), 191(2), 191(3), 115, 118, 109, 352, 351(2) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು: ಜಿಲ್ಲೆಯಲ್ಲಿ ಬೇರೆ ಬೇರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜೇರಟಗಿ ಸಮೀಪದ ಎನ್‌ಎಚ್– 50 ರಸ್ತೆಯಲ್ಲಿ ಟಾಟಾ ಏಸ್‌ ಡಿಕ್ಕಿ ಹೊಡೆದು ಬೊಲೆರೊ ಪಿಕಪ್‌ನಲ್ಲಿದ್ದ ಜೇವರ್ಗಿಯ ದುಂಡಮ್ಮ ಲಕ್ಕಪ್ಪ (55) ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರು. ಭೀಮಬಾಯಿ ಕಲ್ಲಪ್ಪ ಅವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಟಾಟಾ ಏಸ್‌ ವಾಹನದ ಚಾಲಕ ಪುಣೆ ಮೂಲದ ಬಾಪು ನವಗಿರಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಯರಗಲ್ ಕ್ರಾಸ್ ಸಮೀಪದ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಯರಗಲ್‌ ನಿವಾಸಿ ಶಬೊದ್ದೀನ್ (55) ಸ್ಥಳದಲ್ಲೇ ಮೃತಪಟ್ಟರು.

ಬಿಎನ್‌ಎಸ್ ಅಡಿ ಪ್ರಕರಣ ದಾಖಲು ಶುರು: ಸೋಮವಾರದಿಂದ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾನೂನುಗಳ ಅಡಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿ (ಬಿಎನ್‌ಎಸ್‌) ಪ್ರಕರಣಗಳು ದಾಖಲಿಸಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.