ADVERTISEMENT

ಕಲಬುರಗಿ | ಜೈಲಿನ ಒಳಗೆ ಮೊಬೈಲ್, ಗಾಂಜಾ ಎಸೆದ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 6:11 IST
Last Updated 27 ಅಕ್ಟೋಬರ್ 2024, 6:11 IST
ಮುಬಾರಕ್ ಅಲಿ
ಮುಬಾರಕ್ ಅಲಿ   

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಮೊಬೈಲ್‌, ಗಾಂಜಾದಂತಹ ನಿಷೇಧಿತ ವಸ್ತುಗಳನ್ನು ಎಸೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ ವಶಕ್ಕೆ ಪಡೆದ ಪೊಲೀಸರು, ಆರೋಪಿಗಳನ್ನು ರೌಡಿಶೀಟರ್‌ ಪಟ್ಟಿಗೆ ಸೇರಿಸಲಿದ್ದಾರೆ.

‘2022 ಪ್ರಕರಣದ ವಿಚಾರಣಾಧೀನ ಕೈದಿ ಉದಯಕುಮಾರ ದೊಡ್ಡಮನಿ (29) ಹಾಗೂ ಜಾಮೀನಿನ ಮೇಲೆ ಹೊರಬಂದ ಲೋಕೇಶ ಸಿಂಧೆ (24), 2024ರ ಪ್ರಕರಣದ ಮುಬಾರಕ್ ಅಲಿ ಹಾಗೂ ಸಾಜಿದ್ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಇನ್ನೂ ಇಬ್ಬರು ಕೈದಿಗಳನ್ನು ವಶಕ್ಕೆ ಪಡೆಯಲಾಗುವುದು’ ಎಂದು ಪೊಲೀಸ್ ಕಮಿಷನರ್‌ ಶರಣಪ್ಪ ಎಸ್‌.ಡಿ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಉದಯಕುಮಾರಗೆ ಲೋಕೇಶ ಎಂಬಾತ ಕಾಂಪೌಂಡ್‌ ಹೊರಗಿನಿಂದ ಪ್ಯಾಕೆಟ್‌ನಲ್ಲಿ ಕಟ್ಟಿ ಮೂರು ಬೇಸಿಕ್ ಮೊಬೈಲ್‌ಗಳನ್ನು ಎಸೆದಿದ್ದ. ಕೊಲೆ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಯಾದ ಮೊಹಮದ್ ಅಲಿ ಸಾಬ್‌ಗೆ ಹೊರಗಿನಿಂದ ಮುಬಾರಕ್, ಸಾಜಿದ್ ಖಾನ್‌ ಹಾಗೂ ಮತ್ತೊಬ್ಬನು ಬೈಕ್‌ನಲ್ಲಿ ಬಂದು ಒಂದು ಮೊಬೈಲ್‌, ಮಾತ್ರೆಗಳು ಹಾಗೂ 8 ಗಾಂಜಾ ಪ್ಯಾಕೆಟ್‌ಗಳನ್ನು ಜೈಲಿನಲ್ಲಿ ಎಸೆದು ಪರಾರಿಯಾಗಿದ್ದರು’ ಎಂದರು.

ADVERTISEMENT

‘ನಿಷೇಧಿತ ವಸ್ತುಗಳು ಜೈಲಿನಲ್ಲಿ ಎಸೆದ ಸರಣಿ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ವಿಶೇಷ ತಂಡಗಳನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜೈಲಿನಲ್ಲಿದ್ದು ನಿಷೇಧಿತ ವಸ್ತುಗಳನ್ನು ತರಿಸಿಕೊಂಡ ಕೈದಿಗಳನ್ನು ವಶಕ್ಕೆ ಪಡೆಯುತ್ತೇವೆ. ಜೈಲಿನ ಒಳಗೆ ನಿಷೇಧಿತ ವಸ್ತುಗಳು ಎಸೆದರೆ, ಅವರಿಗೆ ಸಹಾಯ ಮಾಡಲು ಯತ್ನಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಬಂಧಿತರಾದ ಆರೋಪಿಗಳನ್ನು ರೌಡಿಶೀಟರ್‌ ಪಟ್ಟಿಗೆ ಸೇರಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಪದ್ಮಾವತಿ ಅಮಾನತು: ‘ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಸಾಗಣೆಗೆ ಯತ್ನಿಸಿದ ಆರೋಪದಡಿ ಬಂಧಿತರಾಗಿದ್ದ ಕಸಗುಡಿಸುವ ಗ್ರೂಪ್ ‘ಡಿ’ ಸಿಬ್ಬಂದಿ ಪದ್ಮಾವತಿ ದೇವೇಂದ್ರಪ್ಪ ಹೊಸಮನಿ ಅವರನ್ನು ಅಮಾನತು ಮಾಡಲಾಗಿದೆ. ಗಾಂಜಾ ತರಿಸಿಕೊಳ್ಳುತ್ತಿದ್ದ ಕೈದಿ ನಾಗರಾಜನನ್ನೂ ಬಂಧಿಸಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಭಾಗವಹಿಸಿದ್ದರು.

ಸಾಜಿದ್ ಖಾನ್
ಉದಯಕುಮಾರ
ಲೋಕೇಶ
ಕಲಬುರಗಿ ನಗರದಲ್ಲಿ ಶನಿವಾರ ಪೊಲೀಸರು ರೌಡಿಶೀಟರ್‌ ಒಬ್ಬರ ಮನೆಯ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದರು
 ಶರಣಪ್ಪ ಎಸ್‌.ಡಿ.
ನಗರದಲ್ಲಿನ ವಾಹನ ದಟ್ಟಣೆ ಸಮಸ್ಯೆಯನ್ನು ಎರಡು ತಿಂಗಳಲ್ಲಿ ನಿಯಂತ್ರಣಕ್ಕೆ ತರಲಾಗುವುದು. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ
ಶರಣಪ್ಪ ಎಸ್‌.ಡಿ. ಪೊಲೀಸ್ ಕಮಿಷನರ್

126 ರೌಡಿಶೀಟರ್‌ ಮನೆಗಳ ಮೇಲೆ ದಾಳಿ-

‘ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 126 ರೌಡ್‌ಶೀಟರ್‌ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿದ ಪೊಲೀಸರು ಶೋಧಕಾರ್ಯ ನಡೆಸಿದರು. ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಇದೊಂದು ನಿಯಮಿತವಾದ ದಾಳಿ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು. ‘ಪ್ರತಿ ಠಾಣೆಯ ಟಾಪ್‌ 10ರಿಂದ 15 ರೌಡಿಶೀಟರ್‌ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳಬಾರದು ಕಾನೂನಿನ ಅಡಿ ಜೀವನ ನಡೆಸಬೇಕು. ನಿಯಮಿತವಾಗಿ ಠಾಣೆಗೆ ಹಾಜರಿ ಆಗುವಂತೆ ಎಚ್ಚರಿಕೆ ನೀಡಲಾಗಿದೆ’ ಎಂದರು. ‘ಸ್ಟೇಷನ್ ಬಜಾರ್‌ ಠಾಣೆಯ 14 ಅಶೋಕ ನಗರ ಠಾಣೆಯ 20 ಬ್ರಹ್ಮಪುರ ಠಾಣೆಯ 10 ಆರ್‌.ಜಿ.ನಗರ ಠಾಣೆಯ 18 ಚೌಕ್‌ ಮತ್ತು ರೋಜಾ ಠಾಣೆಯ ತಲಾ 12 ಎಂಬಿ ನಗರ ಠಾಣೆಯ 6 ವಿಶ್ವವಿದ್ಯಾಲಯ ಠಾಣೆಯ 15 ಸಬ್‌ಅರ್ಬನ್ ಠಾಣೆಯ 16 ಹಾಗೂ ಫರಹತಾಬಾದ್‌ ಠಾಣೆಯ 3 ರೌಡಿಶೀಟರ್‌ ಮನೆಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.