ADVERTISEMENT

ಕಲಬುರಗಿ: ಚೌಡಯ್ಯನವರ ಪುಸ್ತಕ ಇಲ್ಲದ್ದಕ್ಕೆ ತಿಪ್ಪಣ್ಣಪ್ಪ ಕಮಕನೂರ ಅಸಮಾಧಾನ

ಅಂಬಿಗರ ಚೌಡಯ್ಯ ಅಧ್ಯಯನ ಪೀಠಕ್ಕೆ ತಿಪ್ಪಣ್ಣಪ್ಪ ಕಮಕನೂರ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 16:15 IST
Last Updated 25 ಫೆಬ್ರುವರಿ 2024, 16:15 IST
ಗುಲಬರ್ಗಾ ವಿ.ವಿ.ಯಲ್ಲಿನ ಅಂಬಿಗರ ಚೌಡಯ್ಯ ಅಧ್ಯಯನ ಪೀಠಕ್ಕೆ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭೇಟಿ ನೀಡಿದರು. ಪ್ರೊ. ಎಚ್‌.ಟಿ. ಪೋತೆ, ಕುಲಸಚಿವ ಬಿ.ಶರಣಪ್ಪ ಉಪಸ್ಥಿತರಿದ್ದರು
ಗುಲಬರ್ಗಾ ವಿ.ವಿ.ಯಲ್ಲಿನ ಅಂಬಿಗರ ಚೌಡಯ್ಯ ಅಧ್ಯಯನ ಪೀಠಕ್ಕೆ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭೇಟಿ ನೀಡಿದರು. ಪ್ರೊ. ಎಚ್‌.ಟಿ. ಪೋತೆ, ಕುಲಸಚಿವ ಬಿ.ಶರಣಪ್ಪ ಉಪಸ್ಥಿತರಿದ್ದರು   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ನಿಜಶರಣ ಅಂಬಿಗರ ಚೌಡಯ್ಯನ ಅಧ್ಯಯನ ಪೀಠಕ್ಕೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭಾನುವಾರ ಭೇಟಿ ನೀಡಿ, ಕಟ್ಟಡ ಬಿರುಕು, ಸುಣ್ಣ ಬಣ್ಣ ಬಳಿಯದ ಗೋಡೆ, ಪೀಠೋಪಕರಣಗಳ ಕೊರತೆ, ಶೌಚಾಲಯ ಅವ್ಯವಸ್ಥೆ ಮತ್ತು ಚೌಡಯ್ಯನ ಕುರಿತು ಒಂದೂ ಪುಸ್ತಕ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಯನ ಪೀಠಕ್ಕೆ ನೀಡಿದ ಅನುದಾನ, ಖರ್ಚಾದ ಮೊತ್ತ, ಪೀಠೋಪಕರಣಗಳ ಖರೀದಿಗೆ ನೀಡಿದ ಹಣದ ವಿವರದ ಜತೆಗೆ ₹ 50 ಲಕ್ಷ ನಿಶ್ಚಿತ ಠೇವಣಿಗೆ ಎಷ್ಟು ಬಡ್ಡಿ ಜಮಾ ಆಗಿದೆ ಎಂಬುದರ ಸಂಪೂರ್ಣ ವರದಿ ನೀಡುವಂತೆ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಚ್‌.ಟಿ. ಪೋತೆ ಅವರಿಗೆ ಸೂಚಿಸಿದರು.

‘ಪೀಠದಲ್ಲಿ ಪ್ರತಿ ವರ್ಷ ಕಾಟಾಚಾರಕ್ಕೆ ಅಂಬಿಗರ ಚೌಡಯ್ಯ ಜಯಂತಿ ಮಾಡಿ ಕೈತೊಳೆದುಕೊಳ್ಳಲಾಗುತ್ತಿದೆ. ಸಮಾಜದ ಜನಪ್ರತಿನಿಧಿ, ಸಲಹಾ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರಿಗೆ 16 ವರ್ಷದಲ್ಲಿ ಒಮ್ಮೆಯೂ ಆಹ್ವಾನ ನೀಡಿಲ್ಲ. ಚೌಡಯ್ಯನವರ ಕುರಿತು ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು. ಸಲಹಾ ಸಮಿತಿ ಸಭೆ ಕರೆದು ಜನಪ್ರತಿನಿಧಿಗಳು, ಸಮಾಜದ ಮುಖಂಡರೊಂದಿಗೆ ಚರ್ಚಿಸಬೇಕು. ಪೀಠದಲ್ಲಿ ಚೌಡಯ್ಯನವರ ಮೂರ್ತಿ ಅನಾವರಣಗೊಳಿಸುವ ನಿರ್ಣಯ ಕೈಗೊಳ್ಳಬೇಕು’ ಎಂದು ಕಮಕನೂರ ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯದಲ್ಲಿ ಚೌಡಯ್ಯನ ಅಧ್ಯಯನ ಪೀಠ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾನೇ ಪೀಠ ಹುಡುಕಲು ಅರ್ಧ ಗಂಟೆ ತೆಗೆದುಕೊಂಡೆ. ಪೀಠಕ್ಕೆ ಬರಲು ಮಾರ್ಗಸೂಚಿ ನಾಮಫಲಕ ಅಳವಡಿಸಬೇಕು. ಪ್ರತಿ ವರ್ಷ ಚೌಡಯ್ಯನವರ ಕುರಿತು ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಪೀಠದ ಅಭಿವೃದ್ಧಿಗೆ ಅಗತ್ಯವಾದಷ್ಟು ಅನುದಾನವನ್ನು ಸರ್ಕಾರದಿಂದ ಕೊಡಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ಈ ವೇಳೆ ಕುಲಸಚಿವ ಬಿ.ಶರಣಪ್ಪ, ಸಮಾಜದ ಮುಖಂಡರಾದ ರಮೇಶ ನಾಟೇಕಾರ, ಸಿದ್ದು ಬಾನರ, ವಿಜಯಕುಮಾರ ಹದಗಲ, ಶಿವಾನಂದ ಹೊನಗುಂಟಿ, ಸಂದೇಶ ಕಮಕನೂರ ಉಪಸ್ಥಿತರಿದ್ದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಗುಲಬರ್ಗಾ ವಿವಿಗಳನ್ನು ಆರ್‌ಎಸ್‌ಎಸ್‌ ಚಟುವಟಿಕೆಗಳ ಕೇಂದ್ರಗಳನ್ನಾಗಿ ಮಾಡಬೇಡಿ

-ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.