ಕಲಬುರಗಿ: ನಗರದ ಹುಮನಾಬಾದ್ ರಿಂಗ್ ರೋಡ್ ಸಮೀಪದ ಆಟೊ ಚಾಲಕರ ಸಂಘದ ಮುಖಂಡರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ಜತೆಗೆ ಟಿಪ್ಪು ಸುಲ್ತಾನ್ ಫೋಟೊ ಇರಿಸಿ ಪೂಜಿಸಿದ ಘಟನೆ ಗುರುವಾರ ನಡೆದಿದೆ.
ಧ್ವಜಸ್ತಂಭದ ಬದಿಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇರಿಸಿ ಪೂಜಿಸುವ ಶಿಷ್ಟಾಚಾರವಿದೆ. ಆದರೆ, ಆಟೊ ಸಂಘದವರು ಟಿಪ್ಪು ಫೋಟೊ ಇರಿಸಿ ಪೂಜೆ ಸಲ್ಲಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಬ್‌ಅರ್ಬನ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಟಿಪ್ಪು ಫೋಟೊ ತೆಗೆಯುವಂತೆ ಸೂಚಿಸಿದರು. ‘ತೆಗೆಯುವುದಾದರೆ ಮೂವರ ಫೋಟೊಗಳನ್ನೂ ತೆಗೆಯುತ್ತೇವೆ. ಟಿಪ್ಪು ಫೋಟೊ ಮಾತ್ರ ತೆಗೆಯುವುದಿಲ್ಲ’ ಎಂದು ಸಂಘದವರು ಪಟ್ಟು ಹಿಡಿದರು. ಇದರಿಂದ ಪೊಲೀಸರು ಪೇಚಿಗೆ ಸಿಲುಕಿದರು.
‘ಧ್ವಜಸ್ತಂಭದ ಬಳಿ ಟಿಪ್ಪು ಫೋಟೊ ಇರಿಸಿದ್ದನ್ನು ತೆರವುಗೊಳಿಸಿದ್ದೇವೆ. ಯಾರಾದರೂ ಮುಂದೆ ಬಂದು ದೂರು ದಾಖಲಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಶಿಷ್ಟಾಚಾರ ತಹಶೀಲ್ದಾರ್ ಜಗದೀಶ್, ‘ಧ್ವಜಾರೋಹಣ ವೇಳೆ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ಜೊತೆ ಬೇರೆ ಯಾವುದೇ ಫೋಟೊಗಳನ್ನು ಇಡುವಂತಿಲ್ಲ. ಟಿಪ್ಪು ಭಾವಚಿತ್ರ ಇರಿಸಿದವರ ಮೇಲೆ ಕ್ರಮಕ್ಕೆ ಸೂಚಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.