ಕಮಲಾಪುರ(ಕಲಬುರಗಿ): ಸಮೀಪದ ರಾಜನಾಳ ರೈಲ್ವೆ ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಮಲಾಪುರ ಶ್ರೀಸಾಯಿ ಕೃಪಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪ ಚಂದ್ರಶೇಖರ ಗೋಣಿ (46) ಮೃತರು. ಬೆಳಕೋಟಾ ಪುನರ್ವಸತಿ ಕೇಂದ್ರದ ನಿವಾಸಿ ವೀರಭದ್ರ ರಾಜು ಸ್ವಾಮಿ ಅವರು ಗಾಯಗೊಂಡಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜನಾಳ ರೈಲು ಸೇತುವೆ ಸಮೀಪದ ಪ್ರತಿಭಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಸಂಜೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿತ್ತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿಹೆಚ್ಚು ಸಾಮರ್ಥ್ಯದ ಧ್ವನಿ ವರ್ಧಕ ಬಳಸಲಾಗಿತ್ತು. ಗುಂಡಪ್ಪ ಹಾಗೂ ವೀರಭದ್ರ ಅವರು ಎತ್ತರ ಪ್ರದೇಶದಲ್ಲಿದ್ದ ರೈಲ್ವೆ ಹಳಿಯ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಜೊತೆಗೆ ಮೊಬೈಲ್ ನೋಡುವಲ್ಲಿ ಮಗ್ನರಾಗಿದ್ದರು.
ಧ್ವನಿ ವರ್ಧಕದ ಸದ್ದಿನಲ್ಲಿ ಹುಮನಾಬಾದ್ ಕಡೆಯಿಂದ ಬರುತ್ತಿದ್ದ ಡೆಮೊ ರೈಲಿನ ಸದ್ದು ಕೇಳಿಸಿಲ್ಲ. ಮೊಬೈಲ್ ವೀಕ್ಷಿಸುತ್ತಿರುವುದರಿಂದ ರೈಲಿನ ಬೆಳಕೂ ಕಾಣಿಸಲಿಲ್ಲ. ಹೀಗಾಗಿ, ಈ ಅವಘಡ ಸಂಭವಿಸಿರುವ ಸಾಧ್ಯೆತೆ ಇದೆ ಎಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಎಎಸ್ಐ ಅನಿತಾ ಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.