ADVERTISEMENT

ಕಲಬುರಗಿ | ಜೈಲಿಗೆ ಗಾಂಜಾ ಸಾಗಣೆ; ಕಸಗುಡಿಸುವ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 16:25 IST
Last Updated 19 ಸೆಪ್ಟೆಂಬರ್ 2024, 16:25 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಸಾಗಣೆ ಮಾಡಿದ ಆರೋಪದಡಿ ಜೈಲಿನ ಕಸಗುಡಿಸುವ ಮಹಿಳಾ ಸಿಬ್ಬಂದಿಯನ್ನು ಫರಹತಾಬಾದ್ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಕಾರಾಗೃಹದ ಗ್ರೂಪ್ ‘ಡಿ’ ಸಿಬ್ಬಂದಿ ಪದ್ಮಾವತಿ ದೇವೇಂದ್ರಪ್ಪ ಹೊಸಮನಿ ಬಂಧಿತ ಆರೋಪಿ. ಬೀದರ್‌ನಿಂದ ವರ್ಗಾವಣೆಯಾಗಿ ಬಂದಿದ್ದ ಪದ್ಮಾವತಿ, ಕಳೆದ ಒಂದೂವರೆ ವರ್ಷದಿಂದ ಕಲಬುರಗಿ ಕಾರಾಗೃಹದಲ್ಲಿ ಕಸಗುಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಾಗೃಹದ ಪ್ರವೇಶ ದ್ವಾರದಲ್ಲಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗೆ ಪದ್ಮಾವತಿ ಅವರ ಬ್ಯಾಗ್ ತಪಾಸಣೆ ಮಾಡುವಾಗ ಕರವಸ್ತ್ರದಿಂದ ಸುತ್ತಿದ ಉಂಡೆ ಆಕಾರದ ಅನುಮಾನಾಸ್ಪದ ವಸ್ತು ಕಂಡುಬಂತು. ಈ ಬಗ್ಗೆ ಭದ್ರತಾ ಸಿಬ್ಬಂದಿ ಕೇಳಿದಾಗ, ‘ಏನೂ ಇಲ್ಲ’ ಎಂದ ಪದ್ಮಾವತಿ, ಅದನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಹಾಕಿಕೊಂಡು ಒಳ ಹೋಗುತ್ತಿದ್ದರು. ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ 100 ಗ್ರಾಂ. ಗಾಂಜಾ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಜೈಲಿನಲ್ಲಿರುವ ನಾಗರಾಜ ಎಂಬುವವರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಆರೋಪಿಯು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಪದ್ಮಾವತಿಯನ್ನು ವಶಕ್ಕೆ ಪಡೆದು, ನಾಗರಾಜ ಅವರ ಮಾಹಿತಿ ಕಲೆಹಾಕಿ ಹೆಚ್ಚಿನ ವಿಚಾರಣೆ ನಡೆಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.