ಕಲಬುರ್ಗಿ: ಹಣ್ಣಿನ ಗಿಡಗಳನ್ನು ಬೆಳೆಸಿಇಲ್ಲಿಯ ಹೈಕೋರ್ಟ್ ಆವರಣ ಪಕ್ಷಿ ಮತ್ತು ಪ್ರಾಣಿಗಳಿಗೆ ಆಶ್ರಯತಾಣವಾಗುವಂತೆ ಮಾಡಬೇಕು ಎಂದು ಹೈಕೋರ್ಟ್‌ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಸಲಹೆ ನೀಡಿದರು.
ಹೈಕೋರ್ಟ್ ಆವರಣದಲ್ಲಿಮಹಾತ್ಮ ಗಾಂಧಿ ರಾಷ್ಟ್ರೀಯಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿರುವ ಕಸ ತೆಗೆಯುವ ಹಾಗೂ ಗುಂಡಿ ತೋಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸೋಮವಾರಚಾಲನೆ ನೀಡಿ ಮಾತನಾಡಿದರು.
‘ಈ ಆವರಣದಲ್ಲಿ ನವಿಲು, ಬಾತುಕೋಳಿಗಳು ತುಂಬಾ ಇವೆ. ಮೊಲ ಹಾಗೂ ಕೆಲವುಬಾರಿ ಜಿಂಕೆಗಳು ಕಾಣುತ್ತವೆ. ಅವುಗಳಿಗೆ ಆಶ್ರಯ ನೀಡಲು ಪಕ್ಷಿಗಳಿಗೆ ಇಷ್ಟವಾದ ಹತ್ತಿಕಾಯಿ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಬೇಕು’ ಎಂದರು.
ಧಾರವಾಡ ಹೈಕೋರ್ಟ್‌ಆವರಣವನ್ನು ತುಂಬಾ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಹ ಉದ್ಯೋಗ ಖಾತ್ರಿ ಯೋಜನೆಯ ಸಹಾಯದಿಂದ ಟ್ರೀ ಪಾರ್ಕ್‌ನಿರ್ಮಿಸಬೇಕು. ಕಲಬುರ್ಗಿಗೆ ಇದೊಂದು ಆಸ್ತಿ ಆಗುವ ಹಾಗೆ ರೂಪುಗೊಳ್ಳಬೇಕು. ಈ ಭಾಗದಲ್ಲಿ ಹಲವು ಪ್ರಭೇದದ ಪಕ್ಷಿಗಳಿವೆ. ದೂರದೇಶದ ಪಕ್ಷಿಗಳು ಸಹ ವಲಸೆ ಬರುತ್ತವೆ. ಅವುಗಳಿಗೆ ಹೈಕೋರ್ಟ್ ಆವರಣ ಆಶ್ರಯ ತಾಣವಾಗಬೇಕು ಎಂದು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು, ಹೈಕೋರ್ಟ್ ಆವರಣದಲ್ಲಿ ಸುಬಾಬುಲ್ ಅರಣ್ಯದ ಮಾದರಿಯಲ್ಲಿ ಬೆಳೆದುಕೊಂಡಿದೆ. ಅದನ್ನು ಬೇರು ಸಮೇತ ಕಿತ್ತುಹಾಕಿ ನಂತರ ಸಸಿ ನೆಡುವ ಕಾರ್ಯ ಕೈಗೊಳ್ಳಬೇಕು. ಇಲ್ಲಿ ಒಂದು ಸಣ್ಣ ಪ್ರಮಾಣದ ಜಿನಗುಕೆರೆ ನಿರ್ಮಿಸಬೇಕು. ನೀರು ನಿಲ್ಲುವಹಾಗೆ ಸಂಪ್ ರಚಿಸಿ ಅರಣ್ಯ ಇಲಾಖೆಗೆ ಉಪಯೋಗವಾಗುವ ಹಾಗೆ ನರ್ಸರಿ ರೂಪಿಸಬೇಕು. ಈ ಕುರಿತು ಪ್ರಸ್ತಾವ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು ಎಂದರು.
ಶರಣಸಿರಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಶರಣಸಿರಸಗಿ ಗ್ರಾಮದಲ್ಲಿ ಎಲ್ಲರೂ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಮದ ಯಾರೂ ಸಹ ಶೌಚಕ್ಕಾಗಿ ಬಯಲಿಗೆ ಹೋಗುವುದಿಲ್ಲ. ನಾನೂ ಸಹ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದೇನೆ. ಈ ಯೋಜನೆ ಗ್ರಾಮದ ವಿಕಾಸಕ್ಕೆ ಬಹು ಉಪಯುಕ್ತವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಅರಣ್ಯ ಇಲಾಖೆ ಅಧಿಕಾರಿ ಬಿ.ಎನ್.ಚವ್ಹಾಣ, ಹೈಕೋರ್ಟ್‌ಎ.ಆರ್.ಜಿ. ಅಸೋದೆ ಇದ್ದರು.
ಶರಣಸಿರಸಗಿ ಗ್ರಾಮದ 40 ಉದ್ಯೋಗ ಖಾತ್ರಿ ಕಾರ್ಮಿಕರಿಂದ 30 ದಿನಗಳ ಕಾಲ ಹೈಕೋರ್ಟ್‌ಆವರಣದಲ್ಲಿ ಸುಬಾಬುಲ್ ಗಿಡಗಳನ್ನು ಹಾಗೂ ಹುಲ್ಲು ಸ್ವಚ್ಛಗೊಳಿಸುವ, ಗುಂಡಿ ತೋಡಿ ಸಸಿ ನೆಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.