ADVERTISEMENT

ಶೇ 33ರಷ್ಟು ಅರಣ್ಯವಿದ್ದರೆ ಪರಿಸರ ಸಮತೋಲನ: ಸುನೀಲ್ ಕುಮಾರ್

ವನ ಮಹೋತ್ಸವ, ಪರಿಸರ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 5:54 IST
Last Updated 1 ಜುಲೈ 2024, 5:54 IST
ಕಲಬುರಗಿಯ ಬಂಜಾರ ಕಾಲೊನಿ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು
ಕಲಬುರಗಿಯ ಬಂಜಾರ ಕಾಲೊನಿ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು   

ಕಲಬುರಗಿ: ‘ಪರಿಸರ ಸಮತೋಲನದಿಂದ ಇರಬೇಕಾದರೆ ಒಟ್ಟು ಪ್ರದೇಶದ ಶೇ 33ರಷ್ಟು ಅರಣ್ಯ ಇರಬೇಕು. ಅಂಥ ಪ್ರದೇಶದಲ್ಲಿ ಮಳೆ–ಬೆಳೆ ಚೆನ್ನಾಗಿ ಆಗುತ್ತದೆ. ಪ್ರಾಣಿ-ಪಕ್ಷಿಗಳು ಹಾಗೂ ಮನುಷ್ಯರು ಬದುಕಲು ಉತ್ತಮ ವಾತಾವರಣ ಸಿಗುತ್ತದೆ’ ಎಂದು ಬಂಜಾರ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಚವ್ಹಾಣ ಅಭಿಪ್ರಾಯಪಟ್ಟರು.

ಬಂಜಾರ ಸರ್ಕಾರಿ ನೌಕರರ ಸಂಘ, ಕಲಬುರಗಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಸ್ಟೇಷನ್‌ ಬಜಾರ್‌ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಎನ್ಎಸ್‌ಎಸ್ ಘಟಕ, ಕುಸನೂರು ಗ್ರಾಮ ಪಂಚಾಯಿತಿ, ಜವಾಹರ್ ಗೃಹ ನಿರ್ಮಾಣ ಸಹಕಾರ ಸಂಘ, ಜಗದಂಬಾ ಸೇವಾಲಾಲ್ ಸಂಘದ ಆಶ್ರಯದಲ್ಲಿ ಇಲ್ಲಿನ ಬಂಜಾರ ಕಾಲೊನಿ ಉದ್ಯಾನ ಹಾಗೂ ರಸ್ತೆಗಳಲ್ಲಿ ಸಸಿ ನೆಡುವ ವನ ಮಹೋತ್ಸವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಬುರಗಿ ಜಿಲ್ಲೆಯ ಭೌಗೋಳಿಕ ವಾತಾವರಣ ನೋಡಿದಾಗ ಶೇ 4ರಷ್ಟು ಅರಣ್ಯವೂ ಇಲ್ಲ. ಇಂಥ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬರಗಾಲ, ತಾಪಮಾನ ಹೆಚ್ಚುವಿಕೆ, ಇನ್ನಿತರ ಅನಾಹುತಗಳಿಗೆ ಕಾರಣವಾಗುತ್ತದೆ. ಕೇವಲ ಅರಣ್ಯ ಇಲಾಖೆಯೇ ಗಿಡಗಳನ್ನು ನೀಡಬೇಕು, ನೆಡಬೇಕು ಎಂಬ ಮನೋಭಾವವನ್ನು ಜನರು ಬಿಡಬೇಕು. ಪ್ರತಿಯೊಬ್ಬರೂ ಗಿಡ ಮರಗಳನ್ನು ನೆಟ್ಟು ಬೆಳೆಸಿ ಪರಿಸರ ಸಮತೋಲನಕ್ಕೆ ಕಾರಣ ಆಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪೇಂದ್ರ ಬರಗಾಲಿ, ‘ಹೆಚ್ಚೆಚ್ಚು ನಗರೀಕರಣ ಹಾಗೂ ಮಿತಿಮೀರಿದ ಜನಸಂಖ್ಯೆಯ ಫಲವಾಗಿ ಭೂಮಿ ಮೇಲಿನ ಗಿಡ–ಮರಗಳ ನಾಶ ಹೆಚ್ಚುತ್ತಿದೆ. ಕೆರೆ–ಕಾಲುವೆಗಳ ಒತ್ತುವರಿಯೂ ಅಧಿಕವಾಗಿ ಅನಾಹುತಗಳಿಗೆ ಮನುಷ್ಯ ಕಾರಣವಾಗುತ್ತಿದ್ದಾನೆ’ ಎಂದರು.

ಎನ್ಎಸ್ಎಸ್ ಅಧಿಕಾರಿ ಪಾಂಡು ಎಲ್.ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜವಾಹರ್ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಜಾಧವ, ಪಾಲಿಕೆ ವಲಯ ಆಯುಕ್ತ ಉಮೇಶ್ ಚವ್ಹಾಣ ಮಾತನಾಡಿದರು.

ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ವಲಯ ಅರಣ್ಯ ಅಧಿಕಾರಿ ಸಚಿನ್‌ ಪಾಟೀಲ, ಗೃಹ ನಿರ್ಮಾಣ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಪವಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹರಿಚಂದ್ರ ರಾಠೋಡ್, ಗೌರವಾಧ್ಯಕ್ಷ ಪ್ರೇಮಸಿಂಗ್ ಚವ್ಹಾಣ್, ಕಾರ್ಯದರ್ಶಿ ಸತೀಶ್ ಚವ್ಹಾಣ್, ಲಿಂಬಾಜಿ ಚವ್ಹಾಣ್, ಪ್ರೇಮ್ ಸಿಂಗ್ ಚವ್ಹಾಣ್, ಪ್ರೊ. ಕೃಷ್ಣ ನಾಯಕ್, ಪೊ. ಗೋಪಿಚಂದ್ ಬಾಣೋತ, ರಾಜಕುಮಾರ್ ರಾಠೋಡ್, ರಾಕೇಶ್ ಚವ್ಹಾಣ್, ದೇವಿದಾಸ ಚವ್ಹಾಣ್, ಪ್ರಭು ಜಾಧವ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.