ಕಲಬುರಗಿ: ಸೇಡಂ ವಿಭಾಗದ ಸಹಾಯಕ ಆಯುಕ್ತರಿಗೆ ಅವಿಶ್ವಾಸ ಅರ್ಜಿ ಸಲ್ಲಿಸಿ ವಾಪಸ್ ಆಗುತ್ತಿದ್ದ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಪಹರಿಸಿದ ಆರೋಪಿದಡಿ 10ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ತಾಲ್ಲೂಕಿನ ಐನ್ನೋಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವುಕುಮಾರ ಬಸವಣ್ಣಪ್ಪ ಹಾಗೂ ರಾಮಣ್ಣ ಸಾಯಿಬಣ್ಣ ಅವರನ್ನು ಅಪಹರಣ ಮಾಡಲಾಗಿದೆ ಎಂದು ಸದಸ್ಯ ಅಶೋಕ ಭಜಂತ್ರಿ ದೂರು ನೀಡಿದ್ದಾರೆ.
ನವೆಂಬರ್ 11ರಂದು 8 ಮಂದಿ ಗ್ರಾಮಸ್ಥರು ಸೇರಿ ಈ ಇಬ್ಬರು ಸದಸ್ಯರು ಸೇಡಂನ ಸಹಾಯಕ ಆಯುಕ್ತರಿಗೆ (ಎಸಿ) ಅವಿಶ್ವಾಸ ಅರ್ಜಿ ಸಲ್ಲಿಸಿ ಕ್ರೂಸರ್‌ನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಕೋಡ್ಲಿ ಕ್ರಾಸ್ ಸಮೀಪದ ರಸ್ತೆಯಲ್ಲಿ 10ರಿಂದ 15 ಜನರಿದ್ದ ಗುಂಪೊಂದು ಕ್ರೂಸರ್ ವಾಹನವನ್ನು ಅಡ್ಡಗಟ್ಟಿತ್ತು. ಶಿವುಕುಮಾರ ಹಾಗೂ ರಾಮಣ್ಣ ಅವರನ್ನು ವೀರಸಿಂಗ್ ಪವಾರ್ ಅವರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಆರೋಪಿಸಿ ಅಶೋಕ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘18 ಸದಸ್ಯರ ಬಲದ ಐನ್ನೋಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಮಲಿಬಾಯಿ ಅಧ್ಯಕ್ಷರು ಹಾಗೂ ನಫೀಸಾ ಬೇಗಂ ಉಪಾಧ್ಯಕ್ಷರಾಗಿದ್ದಾರೆ. 14 ಜನ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಅರ್ಜಿ ಸಲ್ಲಿಸಿದ್ದರು’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಬುದ್ಧಿ ಮಾತಿಗೆ ಮನೆ ಬಿಟ್ಟು ಹೋದ ಗೃಹಿಣಿ
ಕುಟುಂಬಸ್ಥರ ಜತೆಗೆ ಸರಿಯಾಗಿ ಇರುವಂತೆ ಬುದ್ಧಿವಾದ ಹೇಳಿದ್ದಕ್ಕೆ ಇಬ್ಬರು ಮಕ್ಕಳೊಂದಿಗೆ ಗೃಹಿಣಿಯೊಬ್ಬರು ಮನೆ ಬಿಟ್ಟು ಹೋದ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂತಾ ಕಾಲೊನಿ ನಿವಾಸಿ ಗಿರೀಶ್ ಅರ್ಜುನ್ ವಗ್ಗೆ ಪತ್ನಿ ಕನ್ಯಾಕುಮಾರಿ ಅವರು ಮಕ್ಕಳಾದ ಖುಷಿ (10) ಹಾಗೂ ಆರ್ವಿ(7) ಜತೆಗೆ ಕಾಣೆಯಾಗಿದ್ದಾರೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಗ್ಯಾಸ್ ಸಿಲಿಂಡರ್ ವಶಕ್ಕೆ: ನಗರದ ಆಳಂದ ರಿಂಗ್ ರಸ್ತೆಯ ಕೋಣೆವೊಂದರಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿದ ಆರೋಪದಡಿ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೊಗಳಿಗೆ ಅಕ್ರಮವಾಗಿ ಗ್ಯಾಸ್ ಭರ್ತಿ ಮಾಡುವ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕ ಯಲ್ಲಾಲಿಂಗ ಕಡಕೋಳಕರ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ₹5,500 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬಾಬಾ ಪಟೇಲ್ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.