ADVERTISEMENT

ಅಫಜಲಪುರ: ಸೌಲಭ್ಯ ವಂಚಿತ ಸರ್ಕಾರಿ ಪದವಿ ಪೂರ್ವ ಕಾಲೇಜು

ನಿಯಮಿತವಾಗಿ ನಡೆಯದ ಕಾಲೇಜು ಅಭಿವೃದ್ಧಿ ಸಮಿತಿ, ಕಾಂಪೌಂಡ್ ಇಲ್ಲದ್ದಕ್ಕೆ ತೊಂದರೆ

ಶಿವಾನಂದ ಹಸರಗುಂಡಗಿ
Published 28 ಜೂನ್ 2024, 5:03 IST
Last Updated 28 ಜೂನ್ 2024, 5:03 IST
ಅಫಜಲಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ
ಅಫಜಲಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ   

ಅಫಜಲಪುರ: ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಿ 65 ವರ್ಷ ಕಳೆಯುತ್ತಾ ಬಂದರೂ ಈವರೆಗೂ ಕಾಲೇಜು ಸುಧಾರಣೆ ಆಗಿಲ್ಲ. ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರ ಪದವಿ ಪೂರ್ವ ಕಾಲೇಜಿನ ಕೋಣೆಗಳು ಮಂಜೂರಾಗಿ ನಿರ್ಮಾಣ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ಅಲ್ಲಲ್ಲಿ ಛತ್ತಿನ ಮೇಲೆ ನೀರು ನಿಂತು ಕಟ್ಟಡ ಸೋರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಣೆಗಳ ನಿರ್ಮಾಣ ಟೆಂಡರ್ ಪಡೆದು ಎರಡನೇಯ ವ್ಯಕ್ತಿಯಿಂದ ಕೆಲಸ ಮಾಡಿಸಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿ ಸರ್ಕಾರದ ಹಣ ಅಧಿಕಾರಿಗಳು, ಗುತ್ತಿದಾರರ ಜೇಬು ಸೇರಿದೆ.

ಮೊದಲು ಈ ಸ್ಥಳದಲ್ಲಿ ಸರ್ಕಾರಿ ಪ್ರೌಢಶಾಲೆ ನಡೆಯುತ್ತಿತ್ತು. ಅಲ್ಲಿಯೇ 1959ರಲ್ಲಿ ಕಾಲೇಜು ಆರಂಭವಾಯಿತು. ಆದರೆ ಈವರೆಗೂ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ ಮಾಡಿಲ್ಲ. ಹೀಗಾಗಿ ಸಾರ್ವಜನಿಕರು ಶಾಲೆಯ ಹಿಂದೆ ಮಲಮೂತ್ರ ಮಾಡುತ್ತಾರೆ. ಅಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ.

ADVERTISEMENT

‘ಕಾಂಪೌಂಡ್ ನಿರ್ಮಾಣ ಮಾಡುವ ಕುರಿತು ಹಲವು ಬಾರಿ ಸಭೆಗಳಲ್ಲಿ ಮಾಹಿತಿ ನೀಡಲಾಗಿದೆ. ಆದರೂ ಕಾಂಪೌಂಡ್ ನಿರ್ಮಾಣ ಮಾಡಲು ಮುಂದೆ ಬರುತ್ತಿಲ್ಲ ಹೀಗಾಗಿ ನಮಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಪ್ರಾಚಾರ್ಯ ಗುರುಲಿಂಗಯ್ಯ ಸಾಲಿಮಠ ಹೇಳುತ್ತಾರೆ.

ಕಾಲೇಜು ಕಟ್ಟಡಕ್ಕೆ ಉಚಿತವಾಗಿ ಭೂಮಿ ನೀಡಿದ ಮಾಲೀಕ ಕಾಂಪೌಂಡ್ ಕಟ್ಟಲು ಅನುಮತಿ ನೀಡುತ್ತಿಲ್ಲ ಎನ್ನುತ್ತಾರೆ ನಾಗರಿಕರು.

ಅತಿಥಿ ಉಪನ್ಯಾಸಕರೇ ಆಧಾರ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಜ್ಞಾನ ವಾಣಿಜ್ಯ ತರಗತಿಗಳನ್ನ ನಡೆಸಲಾಗುತ್ತಿದೆ. ಸದ್ಯಕ್ಕೆ ಪಿಯುಸಿ ದ್ವಿತೀಯ ವರ್ಷಕ್ಕೆ 300 ವಿದ್ಯಾರ್ಥಿಗಳು ಇದ್ದಾರೆ. ಪ್ರಥಮ ವರ್ಷಕ್ಕೆ ಸದ್ಯಕ್ಕೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಮ್ಮ ಗುರಿ 500 ಇದೆ. 13 ಕೋಣೆಗಳಿವೆ. ಉಪನ್ಯಾಸಕರ ಕೊರತೆ ಇರುವುದರಿಂದ 9 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಲ್ಯಾಬ್ ಕೋಣೆ ಇದೆ, ಅದಕ್ಕೆ ಮೂಲ ಸೌಲಭ್ಯಗಳಿಲ್ಲ ಎಂದು ಪ್ರಾಚಾರ್ಯ ತಿಳಿಸಿದರು.

ಕಾಲೇಜಿಗೆ ಆಟದ ಮೈದಾನ ಇಲ್ಲ. ಡಿ ಗ್ರೂಪ್ ನೌಕರರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಡಿ’ ಗ್ರೂಪ್ ನೌಕರರ ಸಂಖ್ಯೆ ಹೆಚ್ಚಳವಾಗಬೇಕು ಎಂದು ತಿಳಿಸಿದರು.

ಅಭಿವೃದ್ಧಿ ಸಮಿತಿ ನಿಷ್ಕ್ರಿಯ: ಶಾಸಕ ಎಂ.ವೈ. ಪಾಟೀಲ ಅವರನ್ನು ಒಳಗೊಂಡು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕಾಲೇಜು ಅಭಿವೃದ್ಧಿ ಸಮಿತಿ ಇದೆ. ಆ ಸಮಿತಿಗೆ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇದ್ದಾರೆ. ಇವರು ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಸಭೆ ಕರೆದು ಕಾಲೇಜು ಹೇಗೆ ನಡೆದಿದೆ. ಏನು ಸಮಸ್ಯೆಗಳಿವೆ ಎಂಬುದರ ಬಗ್ಗೆ ಚರ್ಚೆ ಮಾಡಿ ಕಾಲೇಜಿನ ಕುಂದು ಕೊರತೆಗಳು ಬಗೆಹರಿಸಬೇಕು. ಈ ಕೆಲಸ ಇಲ್ಲಿ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ದೂರಿದರು. ಕಾಲೇಜು ಹೇಗೆ ನಡೆದಿದೆ ಉಪನ್ಯಾಸಕರು ಬರುತ್ತಿದ್ದಾರೆ ಪಾಠ ಹೇಗೆ ಮಾಡುತ್ತಾರೆ. ಇಲ್ಲಿ ಸಮಸ್ಯೆಗಳು ಏನಿದೆ ಎಂಬುದರ ಬಗ್ಗೆ ಸಮಿತಿಯವರು ಸಭೆ ಕರೆದು ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರವನ್ನು ನೀಡುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿ ಪಾಲಕರು ಹೇಳುತ್ತಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತಾಲೂಕಿನಲ್ಲಿರುವ 5 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಮತ್ತು ಶೀಘ್ರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯನ್ನ ಕರೆಯುವಂತೆ ಪ್ರಾಚಾರ್ಯರಿಗೆ ತಿಳಿಸುತ್ತೇನೆ

–ಎಂ.ವೈ. ಪಾಟೀಲ ಶಾಸಕ

ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೊದಲು ಕಾಂಪೌಂಡ್ ನಿರ್ಮಾಣವಾಗಬೇಕು ಮತ್ತು ಡಿ ಗ್ರೂಪ್ ನೌಕರ ನೇಮಕವಾಗಬೇಕು. ಲ್ಯಾಬ್ ಕೋಣೆಗೆ ಸೌಲಭ್ಯಗಳ ಅವಶ್ಯಕತೆ ಇದೆ

–ಗುರುಲಿಂಗಯ್ಯ ಸಾಲಿಮಠ ಪ್ರಾಚಾರ್ಯ

ಸರ್ಕಾರ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ವಿಶೇಷ ಅನುದಾನ ನೀಡಿ ಕಾಲೇಜುಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕು. ಅನುದಾನ ದುರ್ಬಳಕೆಯಾದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ ಕೆಲಸವಾಗಿದೆ

–ರಾಜಶೇಖರ್ ಪಾಟೀಲ ಕಾಲೇಜು ಹಳೆ ವಿದ್ಯಾರ್ಥಿ

ಗದ್ದಲದ ಮಧ್ಯೆ ಪಾಠ

ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದರಿಂದ ಪಾಠ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನೊಂದು ಕಡೆ ಕಾಲೇಜು ಎದುರುಗಡೆ ರಾಜ್ಯ ಹೆದ್ದಾರಿ ಮತ್ತು ತಹಶೀಲ್ದಾರ್‌ ಕಚೇರಿ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಮೇಲೆ ವಿದ್ಯಾರ್ಥಿಗಳು ಸಂಚರಿಸುವುದು ಕಷ್ಟಕರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಮೂತ್ರ ವಿಸರ್ಜನೆ ಮತ್ತು ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.