ADVERTISEMENT

ಕಲಬುರಗಿ: ನಿರೀಕ್ಷೆ ಬೆಟ್ಟದಷ್ಟು, ಸಿಕ್ಕಿದ್ದು ಸಾಸಿವೆಯಷ್ಟು!

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ಗೆ ಪರ–ವಿರೋಧ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 4:27 IST
Last Updated 2 ಫೆಬ್ರುವರಿ 2024, 4:27 IST
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ   

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರ ಕಲಬುರಗಿಗೆ ಕೇಂದ್ರ ಸರ್ಕಾರದ 2024–25ನೇ ಹಣಕಾಸು ವರ್ಷದ ಮಧ್ಯಂತರ ಬಜೆಟ್‌ನಲ್ಲಿ ಒಂದಿಷ್ಟಾದರೂ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳು ಸಿಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಧ್ಯಂತರ ಬಜೆಟ್ ಮಂಡಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಅನುದಾನ, ಕಲಬುರಗಿಯಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ರೈಲು ಸೇವೆ ಆರಂಭ, ವಿಮಾನ ನಿಲ್ದಾಣಕ್ಕೆ ಮೂಲಸೌಕರ್ಯ ಮತ್ತು ಕಾರ್ಗೋ ಸೇವೆ, ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಅನುದಾನ, ತೊಗರಿ ಬೇಳೆ ಕಾರ್ಖಾನೆಗಳಿಗೆ ಕೃಷಿ ಆಧಾರಿತ ಕಾರ್ಖಾನೆಗಳ ಮಾನ್ಯತೆ, ರೈಲ್ವೆ ವಿಭಾಗೀಯ ಕಚೇರಿ, ಇನ್‌ಲ್ಯಾಂಡ್‌ ಕಂಟೇನರ್‌ ಡಿಪೊ ಸೇರಿ ಹಲವು ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಕೇಂದ್ರದ ಲಕ್ಷಾಧಿಪತಿ ದೀದಿ (ಲಖ್‌ಪತಿ ದೀದಿ) ಯೋಜನೆಯನ್ನು ಈಗಿರುವ 2 ಕೋಟಿಯಿಂದ 3 ಕೋಟಿ ಫಲಾನುಭವಿಗಳಿಗೆ ವಿಸ್ತರಣೆ, ಬಡವರು, ಮಹಿಳೆಯರು, ಯುವಜನರು ಮತ್ತು ರೈತರ ಅಗತ್ಯಗಳಿಗೆ ಆದ್ಯತೆ, ಮನೆಗಳ ಚಾವಣಿಯಲ್ಲಿ ಸೋಲಾರ್ ವಿದ್ಯುತ್ ಪ್ಯಾನಲ್ ಅಳವಡಿಕೆಗೆ ಮಹಿಳೆಯರು ಮತ್ತು ಹಣಕಾಸು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಐದು ಗ್ಯಾರಂಟಿಗಳಿಗೆ ಹೋಲಿಕೆ ಮಾಡಿದರೆ ಕೇಂದ್ರ ಸರ್ಕಾರದ ಬಜೆಟ್ ಪೊಳ್ಳಾಗಿದೆ. ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ವಾಡಿ– ಗದಗ ರೈಲು ಮಾರ್ಗಕ್ಕೆ ಹೆಚ್ಚುವರಿ ಅನುದಾನ ಸಿಕ್ಕಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಒಬಿಸಿ ವಿಭಾಗದ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ ಟೀಕಿಸಿದರು.

‘ಪ್ರಧಾನಿ ಮೋದಿ ಅವರ ಸರ್ಕಾರವು ಆಡಳಿತ, ಅಭಿವೃದ್ಧಿ, ಕಾರ್ಯಕ್ಷಮತೆ ಮಾದರಿಯ ಅಭಿವೃದ್ಧಿ ಯೋಜನೆ ನೀಡುತ್ತಿದ್ದು, ಇದೊಂದು ಉತ್ತಮ ಬಜೆಟ್’ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಹೇಳಿದರು.

ಆಶಾ ಭಾವ ಮೂಡಿಸಿದ ಸಿಮೆಂಟ್ ರೈಲ್ವೆ ಕಾರಿಡಾರ್‌

ಪಿಎಂ ಗತಿ ಶಕ್ತಿ ಯೋಜನೆಯಡಿ ಮೂರು ರೈಲ್ವೆ ಆರ್ಥಿಕ ಕಾರಿಡಾರ್‌ಗಳನ್ನು ಘೋಷಿಸಲಾಗಿದೆ. ಕಲಬುರಗಿ ಹಾಗೂ ನೆರೆಯ ತೆಲಂಗಾಣದಲ್ಲಿ ಸಾಕಷ್ಟು ಸಿಮೆಂಟ್ ಕಾರ್ಖಾನೆಗಳಿದ್ದು ಖನಿಜ–ಇಂಧನ– ಸಿಮೆಂಟ್‌ ರೈಲ್ವೆ ಕಾರಿಡಾರ್ ಮಾರ್ಗ ಕಲಬುರಗಿ ಮೂಲಕ ಹಾದು ಹೋಗಬಹುದೇ ಎಂಬ ನಿರೀಕ್ಷೆ ಉದ್ಯಮಿಗಳಲ್ಲಿ ಮೂಡಿದೆ. ‘ದಕ್ಷಿಣ ಭಾರತದಲ್ಲಿ ಸಿಮೆಂಟ್ ಕಾರ್ಖಾನೆಗಳಿಗೆ ಕಲಬುರಗಿ ಖ್ಯಾತಿಯನ್ನು ಪಡೆದಿದೆ. ಹಲವು ಕಾರ್ಖಾನೆಗಳೂ ಇವೆ. ಹೀಗಾಗಿ ಸಿಮೆಂಟ್ ಕಾರಿಡಾರ್ ನಮ್ಮ ಜಿಲ್ಲೆಯ ಮೂಲಕ ಜೋಡಣೆಯಾಗಬಹುದು ಎಂಬ ನಿರೀಕ್ಷೆ ಇದೆ. ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕಿದೆ’ ಎನ್ನುತ್ತಾರೆ ಆರ್ಥಿಕ ತಜ್ಞೆ ಸಂಗೀತಾ ಕಟ್ಟಿಮನಿ. ‘ಜಿಲ್ಲೆಗೆ ದೊಡ್ಡ ಮಟ್ಟದ ಕೈಗಾರಿಕೆಗಳು ಬರಲಿ ಎಂದು ಆಶಿಸುತ್ತಿದ್ದೆವು. ಸಿಮೆಂಟ್ ರೈಲ್ವೆ ಕಾರಿಡಾರ್ ಬಂದರೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಹೇಳಿದರು.

ವಿಭಾಗೀಯ ಕಚೇರಿಗೆ ಮತ್ತೆ ₹ 1 ಸಾವಿರ ಹಂಚಿಕೆ!

ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆಡಳಿತಾತ್ಮಕ ಕಚೇರಿ ಮೂಲಸೌಕರ್ಯಕ್ಕಾಗಿ ಈ ಬಜೆಟ್‌ನಲ್ಲಿಯೂ ಕೇವಲ ₹ 1 ಸಾವಿರ ಹಂಚಿಕೆ ಮಾಡಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆ ಅಧ್ಯಕ್ಷ ಸುನೀಲ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷವೂ ಇಷ್ಟೇ ಹಣವನ್ನೂ ಹಂಚಿಕೆ ಮಾಡಿತ್ತು. ಈ ವರ್ಷವೂ ಅದನ್ನೇ ಮುಂದುವರಿಸಿದೆ. ವಾಡಿ ಯಾರ್ಡ್– ಲೆವೆಲ್ ಕ್ರಾಸಿಂಗ್‌ ಸಂಖ್ಯೆ 3 ಸೋಲಾಪುರ–ವಾಡಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 66ರ ಮತ್ತು ಸಂಖ್ಯೆ 82ರ ರಸ್ತೆ ಮೇಲ್ಸೇತುವೆಗಳಿಗೆ ತಲಾ ₹ 5 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ‘ಬೀದರ್ – ನಾಂದೇಡ್ ಮಾರ್ಗದ ಹೆಚ್ಚುವರಿ ಹಳಿ ಕಾಮಗಾರಿಗೆ (155 ಕಿ.ಮೀ.) ₹ 1000 ಕೋಟಿ ಗದಗ–ವಾಡಿ ಮಾರ್ಗಕ್ಕೆ ₹ 280 ಕೋಟಿ ಹಾಗೂ ರಾಯಚೂರು–ಗಿಣಿಗೇರಾ ಮಾರ್ಗಕ್ಕೆ ₹ 300 ಕೋಟಿ ಅನುದಾನ ಘೋಷಿಸಿದೆ’ ಎಂದು ತಿಳಿಸಿದರು.

ಯಾರು ಏನಂದರು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ ತನ್ನ ಎರಡನೇ ಅವಧಿಯ ಕೊನೆಯ ಮಧ್ಯಂತರ ಬಜೆಟ್ ಮಂಡಿಸಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ನೀಡಿದೆ. –ಡಾ. ಉಮೇಶ ಜಾಧವ ಸಂಸದ ಕೇಂದ್ರ ಸರ್ಕಾರದ ಬಜೆಟ್‌ ಮ್ಯಾಜಿಕ್‌ ಶೋನಂತಿದೆ. ಕೇವಲ ಕಣ್ಕಟ್ಟಿನ ಆಯವ್ಯಯವಾಗಿದ್ದು ಅಂಕಿ–ಅಂಶಗಳನ್ನು ಹೇಳುತ್ತಾ ಜನರನ್ನು ಮರಳು ಮಾಡಿದ್ದಾರೆ. ರಾಜ್ಯದ ‘ಗೃಹಜ್ಯೋತಿ’ ಯೋಜನೆಯನ್ನು ಕಾಪಿ ಮಾಡಿ ಸೌರ ಚಾವಣಿ ಮಾಡಿದವರಿಗೆ 300 ಯೂನಿಟ್‌ ಉಚಿತ ವಿದ್ಯುತ್ ಘೋಷಿಸಿದ್ದಾರೆ. –ಅಲ್ಲಮಪ್ರಭು ಪಾಟೀಲ ಶಾಸಕ ಕೇಂದ್ರ ಸರ್ಕಾರ‌ದ ಮಧ್ಯಂತರ ಬಜೆಟ್ ದೇಶದ ಸಮಗ್ರ ಅಭಿವೃದ್ಧಿಗಾಗಿ ನೀಡಿದ್ದು ಯಾರಿಗೂ ಹೊರೆಯಾಗದ ಸರ್ವರ ಹಿತ ಕಾಯಲಿದೆ. ದೂರದೃಷ್ಟಿ ಸಮಷ್ಟಿಯ ಅಭಿವೃದ್ಧಿಯ ನಾಯಕತ್ವದೊಂದಿಗೆ ಸದೃಢ ಮತ್ತು ವಿಕಸಿತ ಭಾರತದ ನಿರ್ಮಾಣಕ್ಕಾಗಿ ಮಂಡಿಸಲಾಗಿದೆ. –ಬಸವರಾಜ ಮತ್ತಿಮಡು ಶಾಸಕ ಭಾರತದ ಏಳಿಗಿಗೆ ಪೂರಕವಾದ ಆಯವ್ಯಯ ಮಂಡಿಸಲಾಗಿದ್ದು ಎಲ್ಲ ವರ್ಗದವರಿಗೆ ಅನೂಕೂಲವಾಗಲಿದೆ. ಸರ್ವೈಕಲ್ ಕ್ಯಾನ್ಸರ್ ಲಸಿಕೆ 3 ಕೋಟಿ ಮನೆ ನಿರ್ಮಾಣ ಗುರಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೂ ಆಯುಷ್ಮಾನ್ ಯೋಜನೆಗಳು ಶ್ಲಾಘನೀಯ. –ಶಶೀಲ್ ಜಿ. ನಮೋಶಿ ವಿಧಾನ ಪರಿಷತ್ ಸದಸ್ಯ ಬಂಡವಾಳ ಹೂಡಿಕೆ ಉದ್ಯೋಗವಕಾಶ ಸೃಷ್ಟಿ ಬಡತನ ನಿರ್ಮೂಲನೆ ಕೌಶಲ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಕೃಷಿ ಉತ್ಪನ್ನಗಳ ಆಧುನಿಕ ಸಂಗ್ರಹಣೆ ಪೂರೈಕೆಗೆಗೂ ಉತ್ತೇಜನ ನೀಡಿದ್ದು ಸ್ವಾಗತರ್ಹ. –ಪ್ರೊ.ಆರ್. ಆರ್. ಬಿರಾದಾರ ಸಿಯುಕೆ ಕುಲಸಚಿವ ಎಂಎಸ್‌ಎಂಇಗಳು ಜಾಗತಿಕವಾಗಿ ಬೆಳೆಯಲು ಸಮರ್ಪಕ ಹಣಕಾಸು ತಂತ್ರಜ್ಞಾನ ಹಾಗೂ ತರಬೇತಿಯ ಘೋಷಣೆ ಹರ್ಷದಾಯಕವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆ ಘೋಷಣೆಯ ನಿರೀಕ್ಷೆ ಹುಸಿಯಾಗಿದೆ. –ಶಶಿಕಾಂತ ಬಿ. ಪಾಟೀಲ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ ಎಲ್ಲರನ್ನೊಳಗೊಂಡ ಹೊಸತನದಿಂದ ಕೂಡಿದೆ. –ಅಂಬಾರಾಯ ಅಷ್ಠಗಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರು ಯುವಜನ ರೈತರು ಮತ್ತು ಬಡವರಿಗಾಗಿ ಜನಪರವಾದ ಬಜೆಟ್ ಮಂಡಿಸಿದ್ದಾರೆ. ಸಾಕಷ್ಟು ದೂರ ದೃಷ್ಟಿ ಕೋನ ಇರಿಸಿಕೊಂಡಿದ್ದಾರೆ. –ಅವ್ವಣ್ಣ ಮ್ಯಾಕೇರಿ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ 70 ಕೋಟಿಯ ಮಹಿಳೆಯರಿಗೆ ₹ 30 ಕೋಟಿ ಮುದ್ರಾ ಯೋಜನೆಯಡಿ ಶೇ 4.2ರಷ್ಟು ಮಹಿಳೆಯರಿಗೆ ಸಾಲ ನೀಡಿದೆ. ಮಹಿಳೆಯರ ಬಗ್ಗೆ ಕೇಂದ್ರ ಸರ್ಕಾರ ಹೊಂದಿರುವ ಉದಾಸೀನ ಭಾವನೆ ಎತ್ತಿ ತೋರಿಸುತ್ತದೆ. ನುಡಿದಂತೆ ನಡೆಯದೆ ಜನರಿಗೆ ಮೋಸ ಮಾಡಿ ಮಕ್ಮಲ್ ಟೋಪಿ ಹಾಕಿದೆ. –ಭೀಮನಗೌಡ ಪರಗೊಂಡ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.