ADVERTISEMENT

ವಿಳಂಬ ಧೋರಣೆಯ ಅಧಿಕಾರಿಗಳಿಗೆ ಚಾಟಿ

ನ್ಯಾ. ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ಬಾಕಿ ಪ್ರಕರಣಗಳ ವಿಲೇವಾರಿ ಸಭೆ; ತಪ್ಪು ಮಾಹಿತಿ ನೀಡಿದ ಅರ್ಜಿದಾರರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:10 IST
Last Updated 17 ನವೆಂಬರ್ 2024, 8:10 IST
<div class="paragraphs"><p>ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು ಭಾಗವಹಿಸಿದ್ದರು </p></div>

ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು ಭಾಗವಹಿಸಿದ್ದರು

   

ಪ್ರಜಾವಾಣಿ ಚಿತ್ರಗಳು

ಕಲಬುರಗಿ: ವರ್ಷಗಳು ಉರುಳಿದರೂ ಸಮರ್ಪಕವಾಗಿ ಶೌಚಾಲಯ ಸೌಲಭ್ಯ ಕಲ್ಪಿಸದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತರಾಟೆ, ಸಹಾಯಕ ಆಯುಕ್ತರ ಆದೇಶ ಪಾಲಿಸಲು ವಿಫಲರಾದ ತಹಶೀಲ್ದಾರ್ ವಿರುದ್ಧ ಮಾತಿನ ಈಟಿ, ತಮಗೆ ಸಂಬಂಧವಿಲ್ಲದಿದ್ದರೂ ಬೇರೆಯವರ ಪರ ಅರ್ಜಿ ಸಲ್ಲಿಸಲು ಬಂದವರಿಗೆ ಪ್ರಕರಣ ದಾಖಲಿಸುವ ಎಚ್ಚರಿಕೆ, ಸಕಾಲಕ್ಕೆ ಆದೇಶ ಅನುಷ್ಠಾನ ಮಾಡಿದ ಅಧಿಕಾರಿಗಳಿಗೆ ಅಭಿನಂದನಾ ನುಡಿ...

ADVERTISEMENT

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತರಾದ ನ್ಯಾ. ಬಿ. ವೀರಪ್ಪ ಅವರ ನೇತೃತ್ವದಲ್ಲಿ ಶನಿವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಬೆಳ್ಳಂಬೆಳ್ಳಿಗ್ಗೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವಾಪಸಾದ ಬಳಿಕ ನಿಗದಿಯಂತೆ ‍ದೂರುಗಳ ವಿಚಾರಣೆ ನಡೆಸಲಾರಂಭಿಸಿದ ನ್ಯಾ. ಬಿ.ವೀರಪ್ಪ ಅವರು ಸಂಜೆಯವರೆಗೂ ಕುಳಿತುಕೊಂಡು ಟೋಕನ್ ಪಡೆದು ಕಾಯುತ್ತಾ ನಿಂತ ಎಲ್ಲ ಅರ್ಜಿದಾರರ ಅಹವಾಲುಗಳನ್ನು ಆಲಿಸಿದರು. 

ಕಮಲಾಪುರ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆಯಲ್ಲಿ ಲೋಪ ಎಸಗಲಾಗಿದೆ ಎಂದು ಹಿಂದಿನ ಉಪ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವೀರಪ್ಪ ಅವರು ಶೌಚಾಲಯಗಳಿಗೆ ನೀರಿನ ಸಂಪರ್ಕ ಪೂರೈಸದ ಕುರಿತು ತಾ.ಪಂ. ಇಒ ನೀಲಗಂಗಾ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಲು ಮುಂದಾದ ಇಒ ಅವರಿಗೆ ಈ ಕುರಿತು ವಿಸ್ತೃತವಾದ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು. ಎಡಗೈ ಮುಂದೆ ಮಾಡಿ ಮಾತನಾಡಲು ಮುಂದಾದ ನೀಲಗಂಗಾ ಅವರನ್ನು ತರಾಟೆಗೆ ತೆಗೆದುಕೊಂಡರು. ಎಡಗೈ ಕೆಳಗೆ ಇಳಿಸಿ. ಉಪ ಲೋಕಾಯುಕ್ತರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ಗೊತ್ತಿಲ್ಲವೇ? ದೇವರ ಪೂಜೆಯನ್ನೂ ಎಡಗೈಯಿಂದಲೇ ಮಾಡ್ತೀರಾ ಎಂದು ಪ್ರಶ್ನಿಸಿದರು.

‘ಶೌಚಾಲಯಗಳಿಗೆ ಸಮರ್ಪಕ ನೀರು ಪೂರೈಸುವುದು ಆಗದಿದ್ದರೆ ಶೌಚಾಲಯ ಕಟ್ಟಿಸಿ ಏನು ಪ್ರಯೋಜನ? ಕೂಡಲೇ ಶೌಚಾಲಯಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡಿರಿ’ ಎಂದು ತಿಳಿಸಿದರು.

ಯಡ್ರಾಮಿ ತಾಲ್ಲೂಕಿನ ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ 2013ಕ್ಕಿಂತ ಮುಂಚೆ ಆ ಜಮೀನಿನ ಸ್ಥಿತಿ ಹಾಗೂ ಸದ್ಯದ ಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿ ನೀಡದ ಯಡ್ರಾಮಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರನ್ನೂ ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಸಹಾಯಕ ಆಯುಕ್ತರು ನೀಡಿದ ಸೂಚನೆಯಂತೆ ಪ್ರಕರಣ ಇತ್ಯರ್ಥ ಮಾಡಿಲ್ಲ. ನಾನು ಏನೋ ಕೇಳಿದರೆ ನೀವೇನೋ ಹೇಳುತ್ತೀರಿ. ಡೈರೆಕ್ಟ್ ಆಗಿ ತಹಶೀಲ್ದಾರ್ ಆಗಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ ಅವರು, ‘ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದೇನೆ’ ಎಂದರು. ಹಾಗಿದ್ದರೆ ತಹಶೀಲ್ದಾರ್ ನಿರ್ವಹಿಸಬೇಕಾದ ಕರ್ತವ್ಯಗಳನ್ನು ತಿಳಿದುಕೊಳ್ಳಿ ಎಂದರಲ್ಲದೇ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗೆ, ‘ಚಿತ್ರಗುಪ್ತರೇ ನೀವು ಸರಿಯಾದ ಲೆಕ್ಕ ಬರೆಯುವುದನ್ನು ಕಲಿಯಿರಿ. ಆಗ ಯಮರಾಜ (ತಹಶೀಲ್ದಾರ್) ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಛೇಡಿಸಿದರು.  

ದೊಡ್ಡಪ್ಪನಿಗೇನು ಕೆಲಸ?: ಯಡ್ರಾಮಿಯಿಂದ ಬಂದಿದ್ದ ಮಾನಪ್ಪ ಎಂಬುವವರು ತನ್ನ ತಮ್ಮನ ಮಗನಿಗೆ ಎರಡು ಹೆಸರಿನಲ್ಲಿ (ಚಂದ್ರಮೋಹನ್, ಸಮರ್ಥ) ಜನನ ಪ್ರಮಾಣಪತ್ರ ಕೊಟ್ಟಿದ್ದಾರೆ ಎಂದು ದೂರಿದರು. ಇದಕ್ಕೆ ಅಚ್ಚರಿ ಪಡಿಸಿದ ಉಪ ಲೋಕಾಯುಕ್ತರು, ಈ ಬಗ್ಗೆ ನಿಮ್ಮ ತಮ್ಮ ಅಥವಾ ತಮ್ಮನ ಹೆಂಡತಿ ಬಂದು ದೂರು ನೀಡಬೇಕಿತ್ತು. ನೀವೇಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ನಿಮಗೇನಾದರೂ ಈ ಪ್ರಕ್ರಿಯೆ ನಡೆಸಲು ನಿಮ್ಮ ತಮ್ಮ ಅನುಮತಿ ಪತ್ರ ಕೊಟ್ಟಿದ್ದರೆ ತೋರಿಸಿ ಎಂದರು. ಅನುಮತಿ ಪತ್ರ ನೀಡದ ಮಾನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನಿಮಗೇಕೆ ಈ ಉಸಾಬರಿ. ತಮ್ಮ ಮಗನ ಹೆಸರು ಬದಲಾಗಿದ್ದರೆ ಅವರೇ ಬರಲಿ ಎಂದು ಹೇಳಿ ದೂರು ಮುಕ್ತಾಯಗೊಳಿಸಿದರು.  

ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಇತರರು ವೇದಿಕೆಯಲ್ಲಿದ್ದರು.

ಅಹವಾಲು ಸಲ್ಲಿಸಲು ಬಂದಿದ್ದ ಸಾರ್ವಜನಿಕರು

ರೈಲು ನಿಲ್ದಾಣದಿಂದ 9 ಬಸ್‌ಗಳ ಸಂಚಾರ

ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುವ ಆಟೊ ಚಾಲಕರ ಅಟಾಟೋಪಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಉಪ ಲೋಕಾಯುಕ್ತರು ರೈಲು ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣ ದರ್ಗಾ ಸೇರಿದಂತೆ ವಿವಿಧೆಡೆ ಹೊಸದಾಗಿ ಸಿಟಿ ಬಸ್ ಸಂಚಾರ ನಡೆಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಶನಿವಾರದಿಂದ 9 ಸಾರಿಗೆ ಬಸ್‌ಗಳನ್ನು ರೈಲು ನಿಲ್ದಾಣಕ್ಕೆ ನಿಯೋಜಿಸಲಾಗಿದೆ.

ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ಅವರ ಬಳಿ ಬಂದ ಸಾರಿಗೆ ನಿಗಮದ ಅಧಿಕಾರಿಗಳು ತಮ್ಮ ಸೂಚನೆ ಮೇರೆಗೆ ಹೊಸದಾಗಿ ಬಸ್ ಸಂಚಾರ ಶುರು ಮಾಡಿದ್ದಾಗಿ ತಿಳಿಸಿದರು. ಇದರಿಂದ ಖುಷಿಯಾದ ಉಪ ಲೋಕಾಯುಕ್ತರು ತಕ್ಷಣವೇ ಪ್ರಯಾಣಿಕ ಸ್ನೇಹಿ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಅಧಿಕಾರಿಗಳನ್ನು ಅಭಿನಂದಿಸಿದರು.

ರೈಲು ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಬಂದಿಳಿದ ವೇಳೆ ಪ್ರಯಾಣದರವನ್ನು ತಮ್ಮ ಸಿಬ್ಬಂದಿಯಿಂದ ಕೇಳಿ ಮಾಹಿತಿ ಪಡೆದುಕೊಂಡಿದ್ದರು. ಆಟೊ ಚಾಲಕರು ₹ 100ರಿಂದ ₹ 200 ಹೇಳಿದ್ದರು. ಈ ದರ ಕೇಳಿ ಗಾಬರಿಯಾಗಿದ್ದ ನ್ಯಾ.ಬಿ. ವೀರಪ್ಪ ಅವರು ಸಾರಿಗೆ ಬಸ್‌ಗಳ ಸಂಚಾರ ಹೆಚ್ಚಿಸುವಂತೆ ಸೂಚನೆ ನೀಡಿದ್ದರು.  ಅಲ್ಲದೇ ಹರಕಂಚಿ ಗ್ರಾಮಕ್ಕೂ ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಬಸ್ ಸೌಲಭ್ಯ ಕಲ್ಪಿಸಲಾಯಿತು.

ಜಾಗೃತಿ ಬ್ಯಾನರ್ ಬಚ್ಚಿಟ್ಟಿದ್ದ ತಹಶೀಲ್ದಾರ್!

ಉಪ ಲೋಕಾಯುಕ್ತರು ಸಾರ್ವಜನಿಕರ ಅಹವಾಲು ಸ್ವೀಕರಿಸುವ ಬಗ್ಗೆ ಜಿಲ್ಲೆಯ ಜನರಿಗೆ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬ್ಯಾನರ್ ಕರಪತ್ರ ಮೈಕ್ ಮೂಲಕ ಪ್ರಚಾರ ನಡೆಸಿದ್ದರು. ಅದರ ಭಾಗವಾಗಿ ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿ ಎದುರು ಬ್ಯಾನರ್ ಪ್ರದರ್ಶಿಸುವಂತೆ ಅಧಿಕಾರಿಗಳು ತಿಳಿಸಿದ್ದರು.

ಜಿಲ್ಲೆಯ ತಹಶೀಲ್ದಾರ್ ಒಬ್ಬರು ಹೆಚ್ಚು ಜನರಿಗೆ ಬ್ಯಾನರ್‌ನಲ್ಲಿನ ಮಾಹಿತಿ ಗೊತ್ತಾಗದಂತೆ ತಡೆಯುವ ಸಲುವಾಗಿ ಬ್ಯಾನರ್ ಜೊತೆ ತಾವು ಇರುವ ಫೋಟೊ ತೆಗೆಸಿಕೊಂಡು ಅದನ್ನು ಬಚ್ಚಿಟ್ಟಿದ್ದರು ಎಂಬ ಗುಸುಗುಸು ಲೋಕಾಯುಕ್ತ ಅಧಿಕಾರಿಗಳ ಮಧ್ಯೆ ಹಬ್ಬಿದೆ. ದಿಢೀರ್ ಭೇಟಿಗೆಂದು ಲೋಕಾಯುಕ್ತ ಅಧಿಕಾರಿಗಳು ಹೋದ ಸಂದರ್ಭದಲ್ಲಿ ಬ್ಯಾನರ್ ಮಾಯವಾಗಿದ್ದನ್ನು ಪ್ರಶ್ನಿಸಿದ್ದಾರೆ. ಕೂಡಲೇ ತಹಶೀಲ್ದಾರ್ ಮತ್ತೆ ಆ ಬ್ಯಾನರ್ ಹಾಕಿಸಿದರು ಎಂದು ಮೂಲಗಳು ತಿಳಿಸಿವೆ.

‘ಪತ್ರಿಕೆಗಳಿಲ್ಲದಿದ್ದರೆ ಸಮಸ್ಯೆ ಮುಚ್ಚಿ ಹೋಗುತ್ತಿದ್ದವು’

ಕೆಲವು ಸಮಸ್ಯೆಗಳನ್ನು ಪತ್ರಿಕೆಗಳನ್ನು ಓದಿ ನಾವು ತಿಳಿದುಕೊಂಡು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಆ ಸಮಸ್ಯೆಗಳೇ ಮುಚ್ಚಿ ಹೋಗುತ್ತಿದ್ದವು ಎಂದು ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ಅವರು ಪತ್ರಿಕೆಗಳ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಊಟ ನೀಡದ ಹಾಗೂ ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ರಸ್ತೆ ಅವ್ಯವಸ್ಥೆಯ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ಸ್ಮರಿಸಿದ ಅವರು ಇವುಗಳ ಆಧಾರದಲ್ಲಿ ನಾವು ಪ್ರಕರಣ ದಾಖಲಿಸಿಕೊಂಡು ಸಮಸ್ಯೆ ಸರಿಪಡಿಸಲು ಹೇಳಿದ್ದೇವೆ ಎಂದರು. ನಂತರ ವರದಿಗಾರರಿಗೆ ಧನ್ಯವಾದಗಳನ್ನೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.