ಕಲಬುರಗಿ: ‘ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ. ಇದರಿಂದಾಗಿ ಸುತ್ತಲಿನ 20 ಬಡಾವಣೆಗಳ ನಿವಾಸಿಗಳಿಗೆ ಸಂಚರಿಸಲು ಕಷ್ಟವಾಗಿದೆ. ರಸ್ತೆಯ ಒತ್ತುವರಿ ತೆರವುಗೊಳಿಸಿ, ಜಮೀನನ್ನು ಅತಿಕ್ರಮಣ ಮಾಡಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಅಲ್ಲಿ ನಿವೇಶನ ಮಾರಾಟ ಮಾಡಿಕೊಂಡಿದ್ದಾನೆ. ಆ ಜಮೀನು ನಮಗೆ ವಾಪಸ್ ಕೊಡಿಸಿ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಲ್ಲ. ಮುಂದಿನ ಬಾರಿಯಾದರೂ ಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಿ...’
ಇಂತಹ ಹತ್ತು ಹಲವು ಅಹವಾಲು ಹೊತ್ತು ಸಾರ್ವಜನಿಕರು ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಎದುರು ಬಂದಿದ್ದರು. ಬೆಳಿಗ್ಗೆ ಆರಂಭವಾದ ಅಹವಾಲು ಸ್ವೀಕಾರ ಸಭೆಯು ರಾತ್ರಿಯವರೆಗೆ ನಡೆದಿದ್ದು, ನ್ಯಾಯಮೂರ್ತಿ ಅವರು ಕೆಲವರಿಗೆ ಸ್ಥಳದಲ್ಲೇ ಪರಿಹಾರವನ್ನು ಒದಗಿಸಿಕೊಟ್ಟರು. ಜಮೀನಿನ ಸರ್ವೆ, ಖಾತೆ ಬದಲಾವಣೆ, ನಿವೇಶನಗಳಿಗೆ ಇ ಖಾತೆ ಹಂಚಿಕೆಯಂತಹ ಸಮಯ ತೆಗೆದುಕೊಳ್ಳುವ ಕೆಲಸಗಳಿಗೆ ಒಂದು ತಿಂಗಳೊಳಗಾಗಿ ಪರಿಹಾರ ಒದಗಿಸಬೇಕು ಎಂದು ಸಂಬಂಧಪಟ್ಟ ತಹಶೀಲ್ದಾರ್, ತಾ.ಪಂ. ಇಒ, ಪುರಸಭೆ ಮುಖ್ಯಾಧಿಕಾರಿ, ವಿವಿಧ ಇಲಾಖೆಗಳ ಎಂಜಿನಿಯರ್‌ಗಳಿಗೆ ಸೂಚಿಸಿ ದೂರು ಅರ್ಜಿ ವಿಲೇವಾರಿ ಮಾಡಿದರು.
ಕಲಬುರಗಿಯ ನೇತಾಜಿ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ಸಾಯಿಮಂದಿರದ ಸರ್ಕಾರಿ ರಸ್ತೆಯನ್ನು ಅತಿಕ್ರಮಣಗೊಳಿಸಿ ಕೆಲವರು ಮನೆ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಿ ನಕ್ಷೆಯಲ್ಲಿದ್ದಂತೆ 50 ಅಡಿ ರಸ್ತೆಯನ್ನು ಉಳಿಸಬೇಕು ಎಂದು ಸಮಿತಿಯ ಬಿ. ಭಗವಾನ್ ರೆಡ್ಡಿ, ಲಲಿತಾ ರೆಡ್ಡಿ, ವಿ.ಜಿ. ದೇಸಾಯಿ ಇತರರು ಒತ್ತಾಯಿಸಿದರು.
ಪಾಲಿಕೆಯ ವಲಯ–1ರ ಆಯುಕ್ತ ರಮೇಶ ಪಟ್ಟೇದಾರ ಅವರನ್ನು ಕರೆಸಿದ ನ್ಯಾ. ಬಿ. ವೀರಪ್ಪ ಅವರು ಒಂದು ತಿಂಗಳೊಳವಾಗಿ ರಸ್ತೆ ಅತಿಕ್ರಮಣ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.
ಉಪಲೋಕಾಯುಕ್ತರ ಬಳಿ ಬಂದ ಹಿರಿಯ ಕಲಾವಿದರೊಬ್ಬರು, ತಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಬೇಕು ಎಂಬ ಬೇಡಿಕೆ ಇಟ್ಟರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಬಿ. ವೀರಪ್ಪ ಅವರು, ‘ನಿಮ್ಮ ಕಲೆಯನ್ನು ಗೌರವಿಸುತ್ತೇನೆ. ಆದರೆ, ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎಂದು ನಾವು ಸರ್ಕಾರಕ್ಕೆ ಹೇಳಲಾಗದು. ನೀವೇ ಸಂಬಂಧಪಟ್ಟವರನ್ನು ಭೇಟಿ ಮಾಡಿ’ ಎಂದು ಹೇಳಿದರು.
ಯಡ್ರಾಮಿ ತಾಲ್ಲೂಕಿನ ಕೋಣಸಿರಸಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎರಡು ವಿದ್ಯುತ್ ಕಂಬಗಳಿದ್ದು, ಅವುಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ತೆರವುಗೊಳಿಸುವಂತೆ ಎಸ್‌ಡಿಎಂಸಿಯ ಬಸವರಾಜ ಮನವಿ ಮಾಡಿದರು. ಜೆಸ್ಕಾಂ ಎಂಜಿನಿಯರ್ ಭಾಗ್ಯವಂತ ಅವರನ್ನು ಕರೆಸಿದ ಉಪಲೋಕಾಯುಕ್ತರು, ಮೂರು ದಿನಗಳ ಒಳಗಾಗಿ ಕಂಬಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.
ಜೇವರ್ಗಿ (ಕೆ) ಗ್ರಾಮದಲ್ಲಿ ಶಂಕ್ರಯ್ಯ ಕಲ್ಮಠ ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನನ್ನು ಮಲ್ಲನಗೌಡ ಎಂಬುವವರು ಕಬಳಿಸಿ ಅಲ್ಲಿ ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ. ಈ ಕುರಿತ ಅರ್ಜಿ ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಇದೆ ಎಂದರು. ಈ ದೂರನ್ನು ಶೀಘ್ರ ಇತ್ಯರ್ಥ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡುವುದಾಗಿ ವೀರಪ್ಪ ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.