ಕಲಬುರಗಿ: ಉಪಲೋಕಾಯುಕ್ತರಾದ ನ್ಯಾ.ಬಿ. ವೀರಪ್ಪ ಅವರು ಶನಿವಾರ ಬೆಳಿಗ್ಗೆಯೇ ನಗರದ ಹೊರವಲಯದ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ 93 ವರ್ಷದ ವೃದ್ಧ ಮಹಿಳಾ ಕೈದಿಯ ಸ್ಥಿತಿ ಕಂಡು ಮಮ್ಮಲ ಮರುಗಿದರು.
ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಸೊಸೆ ದಾಖಲಿಸಿದ ಪ್ರಕರಣದಲ್ಲಿ ಜೇವರ್ಗಿಯ ನಾಗಮ್ಮ ಎಂಬ ವೃದ್ಧೆಗೆ 3 ವರ್ಷ ಸಜೆಯಾಗಿದ್ದು, ಜೈಲಿಗೆ ಬಂದಾಗಿನಿಂದಲೂ ಎದ್ದು ಓಡಾಡಲು ಆಗುತ್ತಿಲ್ಲ. ಬೇರೆಯವರ ಸಹಾಯದಿಂದಲೇ ಊಟ, ಸ್ನಾನ, ಶೌಚಾಲಯ ಮಾಡುತ್ತಿದ್ದು, ಜೈಲಿನ ಮಹಿಳಾ ಸಿಬ್ಬಂದಿಯೇ ಆರೈಕೆ ಮಾಡುತ್ತಿದ್ದಾರೆ. ವರದಕ್ಷಿಣೆ ಪ್ರಕರಣದಲ್ಲಿ ಹೈಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿರುವುದರಿಂದ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಅಗತ್ಯವಾದ ವೈದ್ಯಕೀಯ ದಾಖಲೆಗಳನ್ನು ಸಿದ್ಧಪಡಿಸುವಂತೆ ನ್ಯಾ. ಬಿ. ವೀರಪ್ಪ ಅವರು ಜೈಲಿನ ಮುಖ್ಯ ಅಧೀಕ್ಷಕಿ ಡಾ. ಅನಿತಾ ಆರ್. ಅವರಿಗೆ ಸೂಚನೆ ನೀಡಿದರು.
ಜೈಲಿನ ಆವರಣದಿಂದಲೇ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್ ಶಶಿಧರ ಶೆಟ್ಟಿ ಅವರಿಗೆ ಕರೆ ಮಾಡಿ ವೃದ್ಧೆಯ ಮೇಲ್ಮನವಿ ಸಲ್ಲಿಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
‘ಎದ್ದು ಓಡಾಡಲೂ ಬಾರದ ವೃದ್ಧ ಕೈದಿ ಜೈಲಿನಲ್ಲಿರುವುದು ಅಮಾನವೀಯ ಸಂಗತಿ. ಈ ಬಗ್ಗೆ ಸುಪ್ರೀಂಕೋರ್ಟ್ ಗಮನಕ್ಕೆ ತಂದು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಬೇಕು. ತೀರ್ಪು ನೀಡುವ ಸಂದರ್ಭದಲ್ಲಿ ಹೈಕೋರ್ಟ್ ಕೂಡಾ ವೃದ್ಧೆಯ ಆರೋಗ್ಯ ಸ್ಥಿತಿಯನ್ನು ಗಮನಿಸಿರಲಿಕ್ಕಿಲ್ಲ’ ಎಂದು ಹೇಳಿದ ಅವರು, ‘ಇಂದೇ ಅರ್ಜಿಯನ್ನು ಕಳುಹಿಸಿಕೊಡಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರಿಗೆ ಸೂಚನೆ ನೀಡಿದರು.
ನಂತರ ಕೈದಿಗಳಿಗೆ ಸಿದ್ಧಪಡಿಸಿದ್ದ ಪುಳಿಯೋಗರೆ ಸೇವಿಸಿ ಗುಣಮಟ್ಟ ಪರಿಶೀಲಿಸಿದ ಉಪಲೋಕಾಯುಕ್ತರು ಪುರುಷ ಕೈದಿಗಳ ಅಹವಾಲು ಸ್ವೀಕರಿಸಿದರು. ಅದರಲ್ಲಿ ಒಬ್ಬ ಕೈದಿ ತನಗೆ 10 ವರ್ಷ ಶಿಕ್ಷೆಯಾಗಿದ್ದು, ಒಮ್ಮೆಯೂ ಪೆರೋಲ್ ಮೇಲೆ ಬಿಡುಗಡೆ ಮಾಡಿಲ್ಲ ಎಂದು ದೂರು ನೀಡಿದ. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು ಕೆಲ ಬಾರಿ ಪೆರೋಲ್ ಮೇಲೆ ಬಿಡುಗಡೆಯಾದವರು ವಾಪಸ್ ಬಂದೇ ಇಲ್ಲ. ಅಂತಹ ಸಂದರ್ಭದಲ್ಲಿ ಪೆರೋಲ್ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಜೈಲಿನ ಅಧೀಕ್ಷಕರು ಪೆರೋಲ್ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೊಬ್ಬ ಆರೋಪಿ, ‘ನನಗೂ ಪೆರೋಲ್ ಸಿಕ್ಕಿಲ್ಲ. ನನ್ನ ಮೇಲೆ ಪ್ರಕರಣ ದಾಖಲಿಸಿದ್ದ ಪೋಷಕರು ತಮ್ಮ ಮಗಳನ್ನು ಬೇರೆ ಕಡೆ ಮದುವೆ ಮಾಡಿಕೊಟ್ಟಿದ್ದಾರೆ. ನೆಮ್ಮದಿಯಾಗಿ ಇದ್ದಾಳೆ. ಹೀಗಾಗಿ, ನನಗೆ ಪೆರೋಲ್ ಕೊಡಿಸಬೇಕು’ ಎಂದು ಮನವಿ ಮಾಡಿದ.
ಇದಕ್ಕೆ ಗರಂ ಆದ ನ್ಯಾ. ಬಿ. ವೀರಪ್ಪ ಅವರು, ‘ಬಾಲಕಿಯ ಜೀವನ ಹಾಳು ಮಾಡಿದ್ದನ್ನು ಏನೋ ದೊಡ್ಡ ಪ್ರಶಸ್ತಿ ಸಿಕ್ಕಂತೆ ಹೇಳುತ್ತೀಯಲ್ಲ. ನಿನ್ನಿಂದ ಆ ಬಾಲಕಿಯ ಜೀವನವೇ ನರಕವಾಗಿದೆ. ಏನೋ ಆಕೆಯ ಪೋಷಕರು ಬೇರೆ ಕಡೆ ಮದುವೆ ಮಾಡಿಕೊಟ್ಟು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ನೀನು ಮಾಡಿದ ತಪ್ಪಿಗೆ ಕನಿಷ್ಠ ಪಶ್ಚಾತ್ತಾಪವೂ ಅನಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು.
ಬಿಎ ಓದುತ್ತಿರುವ ಮಹಿಳಾ ಕೈದಿಯನ್ನು ಭೇಟಿ ಮಾಡಿದ ಉಪ ಲೋಕಾಯುಕ್ತರು, ನೀನು ಓದನ್ನು ಮುಂದುವರೆಸು. ಪರೀಕ್ಷೆ ಬರೆಯಲು ಜೈಲಿನ ಅಧಿಕಾರಿಗಳು ಅವಕಾಶ ಕೊಡುತ್ತಾರೆ ಎಂದರು.
‘ಯಾರಿಗಾದರೂ ವಕೀಲರ ಅವಶ್ಯಕತೆ ಇದ್ದರೆ ಹೇಳಿ, ಪ್ರಕರಣದಲ್ಲಿ ವಾದ ಮಾಡಲು ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಕೊಡುತ್ತೇವೆ’ ಎಂದು ಹೇಳಿದರು.
ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.