ADVERTISEMENT

ಬೇರೆಯವರ ಪರ ದೂರು ನೀಡಲು ಬಂದ DSS ಮುಖಂಡನ ವಿರುದ್ಧ ಕ್ರಮ: ಉಪಲೋಕಾಯುಕ್ತ ಸೂಚನೆ!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 10:16 IST
Last Updated 16 ನವೆಂಬರ್ 2024, 10:16 IST
ಬಿ.ವೀರಪ್ಪ
ಬಿ.ವೀರಪ್ಪ   

ಕಲಬುರಗಿ: ಖಾಸಗಿ ವಿಚಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಿನಲ್ಲಿ ದೂರು ನೀಡಲು ಬಂದ ಕರ್ನಾಟಕ ‌ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಸಂಜೀವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಸೂಚ‌ನೆ ನೀಡಿದರು.

ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯುತ್ತಿರುವ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಸಂಜೀವಕುಮಾರ್ ಎಂಬುವವರು ನ್ಯಾ.ಬಿ. ವೀರಪ್ಪ ಅವರ ಎದುರು ಹಾಜರಾದರು.

ಭಗವಂತ‌ ಖೂಬಾ ಹಾಗೂ ಅವರ ಪತ್ನಿ ಶೀಲಾಬಾಯಿ ಅವರು ಕಾಳಗಿ ತಾಲ್ಲೂಕಿನ ವಚ್ಚಾ ಗ್ರಾಮದಲ್ಲಿ ಎರಡು ಎಕರೆ ಭೂಮಿ ಖರೀದಿಸಿ ಅಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದಾರೆ. ಆದರೆ, ಬೇರೆಯವರ ಭೂಮಿಯಲ್ಲಿಯೂ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂದು ದೂರಿದರು.

ADVERTISEMENT

ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಜಮೀನು ನಿಮಗೆ ಸೇರಿದೆಯೇ ಎಂದು ನ್ಯಾ.ಬಿ. ವೀರಪ್ಪ ಅವರು ಪ್ರಶ್ನಿಸಿದರು. ಅದಕ್ಕೆ ಇಲ್ಲ ಎಂದು ಸಂಜೀವಕುಮಾರ್ ಉತ್ತರಿಸಿದರು. ಹಾಗಿದ್ದರೆ ತಮ್ಮ ಪರವಾಗಿ ದೂರು ನೀಡಲು ಸಂತ್ರಸ್ತ ರೈತರು ನಿಮಗೆ ಹೇಳಿದ್ದಾರೆಯೇ ಎಂದರು. ಅದಕ್ಕೂ ಇಲ್ಲ ಎಂದರು.

ಇದರಿಂದ ಕೆಂಡಾಮಂಡಲರಾದ ಉಪ‌ ಲೋಕಾಯುಕ್ತರು, ಸಾರ್ವಜನಿಕ ರಸ್ತೆ, ಕೆರೆ, ಅರಣ್ಯ ಒತ್ತುವರಿಯಾಗಿದ್ದರೆ ಅದನ್ನು ಸಾರ್ವಜನಿಕ ಹಿತಾಸಕ್ತಿಯಡಿ ಪ್ರಶ್ನಿಸಬಹುದು. ಅದನ್ನು ಬಿಟ್ಟು ನಿಮಗೆ ಸಂಬಂಧವಿಲ್ಲದವರ ಜಮೀನಿನ ಬಗ್ಗೆ ನಿಮಗೇಕೆ ಆಸಕ್ತಿ ಎಂದು ಪ್ರಶ್ನಿಸಿದರು.

ಸುಳ್ಳು ಪ್ರಕರಣ ನೀಡಿದ್ದಕ್ಕಾಗಿ ನಿಮ್ಮನ್ನು ಮೂರು ವರ್ಷ ಜೈಲಿಗೆ ಕಳಿಸಬಹುದು. ಜೈಲಿಗೆ ಹೋಗಲು ತಯಾರಿದ್ದೀರಾ ಎಂದು ಪ್ರಶ್ನಿಸಿದರು. ಕೂಡಲೇ ಸುಳ್ಳು ಕೇಸ್ ದಾಖಲಿಸಿದ್ದಕ್ಕಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಡಿ. ಇಲ್ಲದಿದ್ದರೆ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಸಿದರು. ತಮ್ಮ ಅಧೀನ ಸಿಬ್ಬಂದಿಗೆ ಹೇಳಿ ಆದೇಶ ಬರೆಸಿದರು.

ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆಯೇ ಎಂಬ ಬಗ್ಗೆ ಸಮಜಾಯಿಷಿ ನೀಡಲು ಶೀಲಾದೇವಿ ಖೂಬಾ ಹಾಗೂ ಭಗವಂತ ಖೂಬಾ ಅವರಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದರು.

ಅಲ್ಲದೇ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೋಂದಣಿಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದರು.

ವಿಚಾರಣೆಗೆ ಸಮಿತಿಯ ಸಂಚಾಲಕ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳು ಹಾಜರಾಗಬೇಕು ಎಂದು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.